ಬದುಕು ಹುಡುಕದಿರು…

೭೯ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಟಣೆಗೊಂಡ ಕವಿ ಎಸ್.ಪಿ. ಯಂಭತ್ನಾಳರ "ಕರೆಯದಿರು ನನ್ನನು" ಕವನಸಂಕಲನದಿಂದ ಆಯ್ದ ಕವನ.

0
180

ಜನರ ನುಡಿ ಕೇಳದಿರು
ದೇವರ ಕರುಣೆ ಬೇಡದಿರು
ಇಲ್ಲಿ ಯಾರಿಂದೇನಾಗದು
ಆಗುವುದೆಲ್ಲ ಆಗುವುದು

ಯಾರನು ನಂಬಿ ಬದುಕದಿರು
ನಿನ್ನನ್ನು ನೀನು ನಂಬದೇ ಇರದಿರು
ಮುನ್ನುಗ್ಗಲು ಕೆಚ್ಚೆದೆಯೊಂದಿರಲಿ
ಉಳಿದದ್ದೆಲ್ಲವೂ ಅಳಿಯಲಿ

ಹುಟ್ಟು ಏಕೆ! ಬದುಕು ಏಕೆ!
ಸಾವು ಏಕೆ೦ದು ಬದುಕು ಹುಡಕದಿರು
ಹುಟ್ಟುವಾಗ ಹುಟ್ಟಿದೆ ಬದುಕಿರುವಷ್ಟು ಬದುಕು
ಸಾಯುವಾಗ ಸಾಯಲಿ ಚಿಂತೆಯೊಂದು
ಬಾರದಿರಲಿ

ಮನ ತುಂಬಿ ನಿಂತ ಮನದ
ತೃಪ್ತಿಯ ಸಿರಿತನ ಕಳೆದುಕೊಳ್ಳದಿರು
ಯಾರಿಂದೇನು ಬಯಸದಿರು
ಬಯಸಿದ್ದೆಲ್ಲವೂ ವ್ಯರ್ಥವೆಂದು ತಿಳಿದಿರು

ಒಂದು ಕ್ಷಣ ಜಗವರಿತು ನೋಡು
ಏನಿಹುದಿಲ್ಲಿ! ಏನಿಲ್ಲದ ಜಗದಲಿ
ಹುಡಕುದಿರುವೆನೆಂಬುದು ಅರಿವಿರಲಿ
ಈ ಜಗದ ಹಂಗು-ಹಗೆತನ ಕಟ್ಟಿಕೊಳ್ಳದಿರು
ಹೋರಾಟ, ಗುದ್ದಾಟ, ತೊಳಲಾಟ

ಇವು ಈ ಜಗದಲಿ ಆಡುವ ಆಟ
ಹೇಗಿದೆ ನೋಡು ಬದುಕುವ ಪಾಠ
ಬದುಕಿನ ಸೆಣಸಾಟ

ಹುಟ್ಟಿಸಿದವರು ನೆಪವಷ್ಟೇ
ಬದುಕಿರುವುದು ಕ್ಷಣವಷ್ಟೇ
ಬದುಕು ಸೋಲುವುದೂ ಇಲ್ಲ ಗೆಲ್ಲುವುದೂ ಇಲ್ಲ
ಬದುಕು ಹುಡುಕದಿರು ಅದು ಸಿಗುವುದಿಲ್ಲ.


 

LEAVE A REPLY

Please enter your comment!
Please enter your name here