ಮೆಘಾ ಲೋಕ್ ಅದಾಲತ್

0
63

ವಿಜಯಪುರ: ವಿಜಯಪುರ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಇದೇ ಸೆ.30 ರಂದು ಮೇಘಾ ಲೋಕ್ ಅದಾಲತ್” ಮತ್ತು ” ಅಕ್ಟೋಬರ್ 2 ರಿಂದ 14 ರವರೆಗೆ ವಿಜಯಪುರ ಜಿಲ್ಲೆಯಲ್ಲಿ ಪ್ಯಾನ್ ಇಂಡಿಯಾ ಅವೇರ್ನೆಸ್ ಮತ್ತು ಔಟರಿಚ್ ಕಾರ್ಯಕ್ರಮ (Pan India Awareness and Outreach Programmes) ಆಯೋಜಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶರಾದ ಶ್ರೀ ಸದಾನಂದ .ಎನ್.ನಾಯಕ್ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ವೆಂಕಣ್ಣ ಹೊಸಮನಿ ಅವರು ತಿಳಿಸಿದ್ದಾರೆ.

ಮಾನ್ಯ ಗೌರವಾನ್ವಿತ ಕರ್ನಾಟಕ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಕಾರ್ಯನಿರ್ವಾಹಕ ಅಧ್ಯಕ್ಷರ ನಿರ್ದೇಶನದ ಮೇರೆಗೆ, ಎಲ್ಲಾ ವರ್ಗದ ಕಕ್ಷಿದಾರರಿಗೆ ಅನುಕೂಲವಾಗುವುದಕ್ಕಾಗಿ ಮೇಘಾ-ಲೋಕ್-ಅದಾಲತನ್ನು ದಿನಾಂಕ: 30.09.2021 ರಂದು ವಿಜಯಪುರ ಜಿಲ್ಲಾ ಕೇಂದ್ರ ಹಾಗೂ ಎಲ್ಲ ತಾಲೂಕು ಕೇಂದ್ರದ ಎಲ್ಲ ನ್ಯಾಯಾಲಯಗಳಲ್ಲಿ ಆಯೋಜಿಸಲಾಗಿದೆ.

ಅದರಲ್ಲಿ ರಾಜಿಗೆ ಒಳಪಡಬಹುದಾದ ಎಲ್ಲ ಕ್ರಿಮಿನಲ್ ಪ್ರಕರಣಗಳನ್ನು, ವರ್ಗಾವಣೆಗಳ ಲಿಖಿತ ಕಾಯ್ದೆಯ ಪ್ರಕರಣಗಳು (ಚೆಕ್ ಬೌನ್ಸ್ ಕೇಸುಗಳು) ಮೋಟಾರು ವಾಹನ ಅಪಘಾತದಲ್ಲಿ ಪರಿಹಾರ ಕೋರಿ ಸಲ್ಲಿಸಿರುವ ಪ್ರಕರಣಗಳು, ವಿಚ್ಛೇದನವನ್ನು ಹೊರತುಪಡಿಸಿ ಇರುವ ಕೌಟುಂಬಿಕ ವ್ಯಾಜ್ಯಗಳು, ಆಸ್ತಿಯಲ್ಲಿ ವಿಭಾಗ ಕೋರಿರುವ ದಾವೆಗಳು ಹಾಗೂ ಇತರೆ ಸಿವಿಲ್ ವ್ಯಾಜ್ಯಗಳು, ದೂರವಾಣಿ ಬಾಕಿ ಬಿಲ್ಲುಗಳ ಪಾವತಿ ಪ್ರಕರಣಗಳು, ನೀರಿನ ಬಿಲ್ ಪಾವತಿ ಪ್ರಕರಣಗಳು, ಜೀವನಾಂಶ ಭತ್ಯೆ ಕೋರಿರುವ ಪ್ರಕರಣಗಳು, ಕಾರ್ಮಿಕ ವ್ಯಾಜ್ಯಗಳು, ಭೂಸ್ವಾಧೀನ ಪ್ರಕರಣಗಳು, ಕಂದಾಯ ಪ್ರಕರಣಗಳು, ಸಾಲ ವಸೂಲಾತಿ ಪ್ರಕರಣಗಳು, ಬ್ಯಾಂಕ್ ವ್ಯಾಜ್ಯಗಳು ಹಾಗೂ ಇತರೆ ಸಿವಿಲ್ ಪ್ರಕರಣಗಳನ್ನು ಮಾನ್ಯ ಕರ್ನಾಟಕ ಉಚ್ಛ ನ್ಯಾಯಾಲಯ ಎಸ್.ಓ.ಪಿ, ಪ್ರಕಾರ ಮೇಘಾ ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲಾಗುವುದು.

ಅದರಂತೆ ದಿನಾಂಕ: 02.10.2021 ರಿಂದ 14.11.2021 ರವರೆಗೆ ವಿಜಯಪೂರ ಜಿಲ್ಲೆಯಲ್ಲಿ ಪ್ಯಾನ್ ಇಂಡಿಯಾ ಅವೇರ್ನೆಸ್ ಮತ್ತು ಔಟರೀಚ್ ಕಾರ್ಯಕ್ರಮ (Pan India Awareness and Outreach Programmes) ಗಳ ಅಡಿ ವಿಜಯಪೂರ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಸಾರ್ವಜನಿಕರಿಗೆ ಉಚಿತ ಕಾನೂನು ಸೇವೆಗಳ ಬಗ್ಗೆ ಜನತಾ ನ್ಯಾಯಾಲಯಗಳ ಪ್ರಯೋಜನಗಳ ಬಗ್ಗೆ ಹಾಗೂ ಹೆಣ್ಣು ಮಕ್ಕಳನ್ನು ಗೃಹ ದೌರ್ಜನ್ಯದಿಂದ ಸಂರಕ್ಷಿಸುವ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ರ್ಯಾಗಿಂಗ್ ತಡೆ ಬಗ್ಗೆ, ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ಸಂರಕ್ಷಿಸುವ ಕಾಯ್ದೆ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಯ ಬಗ್ಗೆ, ಮಕ್ಕಳ ಹಕ್ಕುಗಳ ರಕ್ಷಣೆಯ ಬಗ್ಗೆ ಪಿತ್ರಾರ್ಜಿತ ಸ್ವತ್ತಿನಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಜೀವನಾಂಶ ಮತ್ತು ದತ್ತಕ ಕಾನೂನು ಬಗ್ಗೆ ಸಂತ್ರಸ್ಥ ನಿಯಮಗಳ ಬಗ್ಗೆ ಹಾಗೂ ಸರ್ಕಾರದಿಂದ ಬಡವರಿಗೆ ರೈತರಿಗೆ ಶ್ರಮಿಕರಿಗೆ ಇರುವ ಯೋಜನೆಗಳು ಹಾಗೂ ಅವುಗಳನ್ನು ಪಡೆಯುವ ಮಾರ್ಗೋಪಾಯಗಳ ಬಗ್ಗೆ ಹಾಗೂ ಇತರೆ ಕಾನೂನುಗಳ ಬಗ್ಗೆ ಕಾನೂನು ಅರಿವು-ನೆರವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಈ ಎಲ್ಲಾ ಕಾನೂನು ಅರಿವುನೆರವು ಕಾರ್ಯಕ್ರಮಗಳನ್ನು ಜಿಲ್ಯಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಇತರೆ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಗುತ್ತದೆ.

ಈ ಇಲಾಖೆಯ ಅಧಿಕಾರಿಗಳು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗ್ರಾಮೀಣ ಮಟ್ಟದಲ್ಲಿಯೂ ಸಹಿತ ಜನರ ಹಕ್ಕುಗಳ ಬಗ್ಗೆ ತಿಳಿಸಿ ಜಾಗೃತಿ ಮೂಡಿಸಲಿದ್ದಾರೆ ಎಂದು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here