ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿ, ಖಾಲಿ ಹುದ್ದೆ ಭರ್ತಿಗೆ ಒತ್ತಾಯ

0
70

ವಿಜಯಪುರ ಜುಲೈ 15: ತಡೆ ಹಿಡಿದರುವ 18 ತಿಂಗಳ ತುಟ್ಟಿಭತ್ಯೆ ಬಿಡುಗಡೆ, ಎಲ್ಲರಿಗೂ ಉಚಿತ ವ್ಯಾಕ್ಸಿನ್ , ಎನ್.ಪಿ.ಎಸ್. ರದ್ದುಗೊಳಿಸಿ ನಿಶ್ಚಿತ ಪಿಂಚಣಿ ವ್ಯವಸ್ಥೆ ಜಾರಿ, ಖಾಲಿ ಹುದ್ದೆಗಳ ಭರ್ತಿ ಮತ್ತಿತರೆ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಜಿಲ್ಲಾ ಸಮಿತಿ ವಿಜಯಪುರ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಉಪಾಧ್ಯಕ್ಷರಾದ ಸುರೇಶ ಜೀಬಿ ಮಾತನಾಡಿ, ರಾಷ್ಟ್ರಮಟ್ಟದ ಪ್ರತಿಭಟನಾ ದಿನ ಆಚರಿಸಲು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಒಕ್ಕೂಟ ಕರೆ ನೀಡಿದೆ. ಇಂದು ರಾಜ್ಯಾದ್ಯಂತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಕೋವಿಡ್ ನಿಯಂತ್ರಿಸಲು ಎಲ್ಲರಿಗೂ ಲಸಿಕೆ ಹಾಕಬೇಕು. ಆದರೆ ದೇಶದಲ್ಲಿರುವ 54 ಸಾರ್ವಜನಿಕ ಲಸಿಕೆ ಉತ್ಪಾದನಾ ಘಟಕಗಳನ್ನು ಬಳಸಿಕೊಳ್ಳದೇ ಕೇವಲ ಎರಡು ಖಾಸಗಿ ಕಂಪನಿಗಳಿಗೆ ಲಸಿಕೆ ಉತ್ಪಾದಿಸಲು ದೇಶದಲ್ಲಿ ಲಸಿಕೆ ಕೊರತೆ ಉಂಟು ಮಾಡಲಾಗಿದೆ.

ಸಾರ್ವಜನಿಕ ಲಸಿಕೆ ಉತ್ಪಾದಕ ಕಂಪನಿಗಳನ್ನು ಪುನಾರಂಭಿಸಿ ಎಲ್ಲರಿಗೂ ಆದಷ್ಟು ಶೀಘ್ರ ಲಸಿಕೆ ನೀಡಬೇಕು. ಮುಂಚೂಣಿ ಕಾರ್ಯಕರ್ತರಿಗೆ ಆದ್ಯತೆ ಮೇಲೆ ಲಸಿಕೆ ನೀಡಬೇಕು ಎಂದು ನೌಕರರ ಒಕ್ಕೂಟ ಒತ್ತಾಯಿಸಿದೆ. ಕೋವಿಡ್ ಎರಡನೆ ಅಲೆಯಲ್ಲಿ  74 ಲಕ್ಷ ಜನತೆ ಉದ್ಯೋಗಗಳನ್ನು ಕಳೆದುಕೊಂಡರು ಮತ್ತು 23 ಕೋಟಿ ಜನತೆ ಬಡತನ ರೇಖೆಗೆ ತಳ್ಳಲ್ಪಟ್ಟರು. ಇವರೆಲ್ಲರಿಗೂ ಕೋವಿಡ್ ಪರಿಹಾರ ನೀಡಬೇಕು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಜನತೆ ಹಲವು ಸಂಕಷ್ಟ ಅನುಭವಿಸಿದ್ದಾರೆ.

ದೇಶದ ಆರ್ಥಿಕತೆಯು ಕುಸಿಯುತ್ತಿದ್ದು, ಸಾಮಾನ್ಯ ಜನತೆಯ ಕೈಗೆ ಹಣವನ್ನು ನೀಡುವ ಕಾರ್ಯಕ್ರಮಗಳನ್ನು ಜಾರಿಗೆ ತರಬೇಕು. ಕೋವಿಡ್ ಸಂಕಷ್ಟದಲ್ಲಿ ಸರ್ಕಾರದ ಹೆಗಲಿಗೆ ಹೆಗಲು ಕೊಟ್ಟು ದುಡಿದ ನೌಕರರ ತುಟ್ಟಿಭತ್ಯೆ ಮತ್ತು ಇತರೆ ಸೌಲಭ್ಯಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದೆ. ಸ್ಥಗಿತ ಆದೇಶವನ್ನು ಹಿಂಪಡೆದು ತುಟ್ಟಿಭತ್ಯೆ ಮತ್ತಿತರ ಸೌಲಭ್ಯಗಳನ್ನು ನೀಡಬೇಕು ಎಂದರು.

ಒಕ್ಕೂಟದ ವಿಜಯಪುರ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಲೇಂಡಿ ಮಾತನಾಡಿ, ಸರ್ಕಾರಿ ಸ್ವಾಮ್ಯದ ಉದ್ದಿಮೆ, ಬ್ಯಾಂಕಿಂಗ್, ವಿಮೆ, ರೈಲ್ವೆ, ಸೇವಾ ವಲಯ ಸಾರ್ವಜನಿಕ ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿನ ಹುದ್ದೆ ಕಡಿತ, ಹುದ್ದೆಗಳ ರದ್ದತಿ ಹಾಗೂ ಖಾಲಿ ಹುದ್ದೆಗಳ ಭರ್ತಿ ಮಾಡದೇ ಇರುವುದು, ಇಲಾಖೆಯ ಕೆಲಸ ಕಾರ್ಯಗಳನ್ನು ಖಾಸಗಿಯವರಿಗೆ ವಹಿಸುವ ಪ್ರಕ್ರಿಯೆ ರದ್ದುಪಡಿಸಬೇಕು ಎಂಬುದು ಸೇರಿದಂತೆ ದೇಶಾದ್ಯಂತ ಎಲ್ಲ ರಾಜ್ಯಗಳ ನೌಕರರು ವಿವಿಧ ಬೇಡಿಕೆಗಳ ಈಡೇರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಶೋಕ ಇರಕಲ್, ನಾಗಮ್ಮ ಪಾಟೀಲ, ಕಸ್ತೂರಿಬಾಯಿ, ಆರ್.ಎಸ್.ಮಿಣಸಗಿ, ಎಚ್.ಜಿ.ಸಂಗಾಪೂರ, ಅನೀಲ ಕುಂಬಾರ, ಉದಯ ಕುಲಕರ್ಣಿ, ಸಿದ್ಧರಾಮಯ್ಯ ಪೂಜಾರಿ, ಸಂತೋಷ ಯರಗಲ್, ಸೋಮು ಹೇರಲಗಿ, ಎಚ್.ಎಂ.ಮೇಂಡೆಗಾರ, ವಿಶ್ವನಾಥ ಕಾಳಗಿ, ಸಂತೋಷ ಬಿರಾದಾರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here