ಬಸವನ ಬಾಗೇವಾಡಿಯಲ್ಲಿ ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ಅತ್ಯಾಚಾರ: ಗ್ರಾಮಸ್ಥರಿಂದ ಕುಟುಂಬಕ್ಕೆ ಜೀವಬೆದರಿಕೆ

0
151

ಬಸವನಬಾಗೇವಾಡಿ: ದಲಿತರ ಮೇಲಿನ ದೌರ್ಜನ್ಯಕ್ಕೆ ಅಂತ್ಯವೇ ಇಲ್ಲದಂತಾಗಿದೆ. ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಅತ್ಯಾಚಾರ ಪ್ರಕರಣಗಳು ಕೇಳಿಬರುತ್ತಿದ್ದವು. ಈಗ ವಿಜಯಪುರದ ಬಸವನಬಾಗೇವಾಡಿಯಲ್ಲಿ ಇಬ್ಬರು ಅಪ್ರಾಪ್ತ ದಲಿತ ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿ ಬಾವಿಗೆ ಎಸೆದು ಕೊಲೆ ಮಾಡಿರುವ ಘಟನೆ ನಡೆದಿದೆ.

ಕಳೆದ ನಾಲ್ಕು ದಿನಗಳ ಹಿಂದೆ ಬಸವನಬಾಗೇವಾಡಿ ತಾಲೂಕಿನ ಕುದುರೆ ಸಾಲವಾಡಗಿ ಗ್ರಾಮದ 14 ಮತ್ತು 15 ವರ್ಷದ ಇಬ್ಬರು ಅಪ್ರಾಪ್ತ ಬಾಲಕಿಯರು ಕಾಣೆಯಾಗಿದ್ದರು. ಕಾಣೆಯಾದ ಎರಡು ದಿನಗಳ ನಂತರ ಇಬ್ಬರ ಮೃತ ದೇಹಗಳು ಕೈ ಕಟ್ಟಿದ ಸ್ಥಿತಿಯಲ್ಲಿ ಬಾವಿಯೊಂದರಲ್ಲಿ ಪತ್ತೆಯಾಗಿವೆ.

ಅದೇ ಊರಿನ ಯುವಕ ಹಬ್ಬು ಮೈಹಿಬೂಬಸಾಬ ಗುಳಬಾಳ ಎಂಬುವವನು ಕಳೆದ 6 ತಿಂಗಳಿನಿಂದ ಬಾಲಕಿಯ ಹಿಂದೆ ಬಿದ್ದು ಪ್ರೀತಿಸುವಂತೆ ಹಿಂಸಿಸುತ್ತಿದ್ದ. ಆತನೆ ತನ್ನ ತಂಗಿ ಮತ್ತು ಆಕೆಯ ಸ್ನೇಹಿತೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ ಎಂದು ಮೃತಳ ಸಹೋದರ ದೂರು ನೀಡಿದ್ದಾರೆ. ಬಸವನಬಾಗೇವಾಡಿ ಪೊಲೀಸ್‌ ಠಾಣೆಯಲ್ಲಿ ಈ ಕುರಿತು ಫೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಬಸವನಬಾಗೇವಾಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಈ ಗ್ರಾಮದ ಬಾಲಕಿಯರು ಮೇ 12 ರ ಮಧ್ಯಾಹ್ನ ಕಾಣೆಯಾಗಿದ್ದರು. ಸ್ನೇಹಿತೆಯ ಮನೆಯಲ್ಲಿ ಇರಬಹುದು ಎಂದು ಎರಡು ಕುಟುಂಬದವರು ಸುಮ್ಮನಿದ್ದರು. ಆದರೆ ಶುಕ್ರವಾರ ಬಾವಿಯೊಂದರಲ್ಲಿ ಇಬ್ಬರ ಕೈಗಳನ್ನು ಕಟ್ಟಿದ್ದ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿವೆ.

ಬಾಲಕಿಯರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕುರಿತು ತನಿಖೆ ನಡೆಸಿ, 5 ದಿನಗಳಲ್ಲಿ ವರದಿ ನೀಡುವಂತೆ ಕರ್ನಾಟಕ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಆಯೋಗದ ಸದಸ್ಯ ಎಚ್.ವೆಂಕಟೇಶ ದೊಡ್ಡೇರಿ ವಿಜಯಪುರ ಜಿಲ್ಲಾಧಿಕಾರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.

“ಮಾದಿಗ ಸಮುದಾಯದ ಇಬ್ಬರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡಿ, ಕೈಗಳನ್ನು ಕಟ್ಟಿ 20-25 ಅಡಿ ಆಳದ ಬಾವಿಗೆ ಎಸೆದಿದ್ದಾರೆ. ಆದರೆ, ಹೆಣ್ಣು ಮಕ್ಕಳಿಗೆ ನ್ಯಾಯ ನೀಡುವ ಬದಲು ಇಬ್ಬರ ಕುಟುಂಬಕ್ಕೆ ಗ್ರಾಮದಲ್ಲಿ ಪಂಚಾಯಿತಿ ನಡೆಸಿ, ಬೆದರಿಕೆ ಹಾಕಿದ್ದಾರೆ. ಇವರ ಸಾವಿಗೆ ನ್ಯಾಯ ದೊರಕಬೇಕು. ತನಿಖೆಯನ್ನು ಸಿಐಡಿಗೆ ಒಪ್ಪಿಸಬೇಕು. ತನಿಖೆ ಸರಿಯಾಗಿ ನಡೆಯದಿದ್ದರೇ ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಪ್ರತಿಭಟನೆ ನಡೆಸಲಾಗುತ್ತದೆ” ಎಂದು ಜಾಂಭವ ಯುವಸೇನೆ ವಿಜಯಪುರ ಜಿಲ್ಲಾಧ್ಯಕ್ಷ ಮಕ್ಕಪ್ಪ ಬಾಗೇವಾಡಿ ಎಚ್ಚರಿಸಿದ್ದಾರೆ.


LEAVE A REPLY

Please enter your comment!
Please enter your name here