ಅಪಹರಿಸಿ 5 ಲಕ್ಷಕ್ಕೆ ಬೇಡಿಕೆ ಇಟ್ಟ ಖತರ್ನಾಕ್ ಆರೋಪಿಗಳು ಅಂದರ್

0
64

ವಿಜಯಪುರ ಮೇ 07: ಗುತ್ತಿಗೆದಾರನೊಬ್ಬನ ತಂದೆ ಹಾಗೂ ಕಾರು ಚಾಲಕನನ್ನು ಅಪಹರಿಸಿ 5 ಲಕ್ಷ ರೂ. ಬೇಡಿಕೆ ಇಟ್ಟು ಹಣ ನೀಡದಿದ್ದರೆ ನಿನಗೆ ಹಾಗೂ ನಿನ್ನ ಮಗನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ 6 ಜನರನ್ನು ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಅಪಹರಣಕಾರರಿಂದ ಕೃತ್ಯಕ್ಕೆ ಬಳಸಿದ ಪಿಸ್ತೂಲ್, 5 ಜೀವಂತ ಗುಂಡು, ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ದೇವಣಗಾಂವದ ರಮೇಶ ಈರಪ್ಪ ಸೊಡ್ಡಿ, ಆಲಮೇಲದ ಮಹಮ್ಮದ ಅಲಿ ಬಸೀರ ಅಹಮ್ಮದ ಕಲ್ಮನಿ, ಗುಲಬುರ್ಗಾ ಜಿಲ್ಲೆಯ ಅಪಝಲಪುರದ ಸತೀಶ ಪರಸಪ್ಪ ಅರಕೇರ, ಅಫಜಲಪುರದ ಇಸ್ಮಾಯಿಲ್ ದಾವಲಸಾಬ ಕೋತಂಬರಿ, ಅಪಝಲಪುರದ ರಾಜು ಇಬ್ರಾಹಿಂ ನಧಾಪ್ ಹಾಗೂ ದೇವಣಗಾಂವದ ಜಮೀರ ದಾವಲಸಾಬ ಆಲಮೇಲ ಎಂದು ಗುರುತಿಸಲಾಗಿದೆ.

ರಾಧಾಕೃಷ್ಣನಗರದ ಗುತ್ತಿಗೆದಾರ ನಾಗರಾಜ್ ಗುಂದಗಿ ಅವರ ತಂದೆ ಮಲ್ಲಿಕಾರ್ಜುನ ಕಾಟಗಾಂವ ಹಾಗೂ ಕಾರು ಚಾಲಕ ಸಿದ್ದಣ್ಣ ಪೂಜಾರಿ ಗುಲಬುರ್ಗಾ ಜಿಲ್ಲೆಯ ಆಳಂದದಿಂದ ಇಬ್ಬರು ಸೇರಿ ಅಪಝಲಪುರಕ್ಕೆ ಕಾರಿನಲ್ಲಿ ಹೋಗುವಾಗ ಬಗಲೂರ ಬಳಿ ಬಂಧಿತ ಅಪಹರಣಕಾರರು, ಮಲ್ಲಿಕಾರ್ಜುನ ಕಾಟಗಾಂವ ಹಾಗೂ ಕಾರು ಚಾಲಕ ಸಿದ್ದಣ್ಣ ಪೂಜಾರಿ ಅವರ ಕಾರು ನಿಲ್ಲಿಸಿ ಬಂದೂಕು ತೋರಿಸಿ ಹಣದ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಅಪಹರಣಕ್ಕೆ ಒಳಗಾಗಿದ್ದ ನಾಗರಾಜ್ ಗುಂದಗಿ ದೂರು ದಾಖಲಿಸಿದ್ದರು.

ಯಂಕಂಚಿ ಬಾಯ್ ಪಾಸ್ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.‌ ಪ್ರಕರಣ ಭೇದಿಸಿದ ಪೊಲೀಸ್ ತಂಡವನ್ನು ಎಸ್ಪಿ ಅನುಪಮ್ ಅಗರವಾಲ್ ಶ್ಲಾಘಿಸಿದ್ದಾರೆ.


LEAVE A REPLY

Please enter your comment!
Please enter your name here