ಕೋರೆಗಾಂವ್ ಇತಿಹಾಸ ಆರಂಭವಾಗುವುದೇ ಛತ್ರಪತಿ ಶಿವಾಜಿ ಮಹಾರಾಜರಿಂದ ಮತ್ತು ಶಿವ ಶಾಹಿ ಇಂದ ಆಶ್ಚರ್ಯ ಎಂದೆನಿಸಿದರೂ ಇದು ಸತ್ಯ. ಶಿವಾಜಿ ಪಟ್ಟಾಭಿಷೇಕ ಮಾಡಿಕೊಂಡ ವರ್ಷ ಇಂತಹ ಒಂದು ಸುದಿನಕ್ಕಾಗಿ ಅದೆಷ್ಟೋ ವರ್ಷಗಳಿಂದ ಹೋರಾಡುತ್ತ ಬಂದಿದ್ದ ಶಿವಾಜಿರಾಜೆ ಪಾಲಿಗೆ ಕೊನೆಗೂ ಆ ದಿನ ಬಂದೆ ಬಿಟ್ಟಿತು. ಅಷ್ಟಕ್ಕೂ ಶಿವಾಜಿ ಮಹಾರಾಜ ಕಂಡ ಕನಸಾದ್ರೂ ಯಾವುದು ? ಮುಸಲ್ಮಾನರನ್ನು ಭರತಖಂಡದಿಂದ ಓಡಿಸುವುದೆ? ಅಥವಾ ಮುಸಲ್ಮಾನರಿಗೆ ಜಾಗವೇ ಇಲ್ಲದಂತಹ ಹಿಂದವಿ ಸಾಮ್ರಾಜ್ಯ ಸ್ಥಾಪಿಸುವುದೇ? ಒಂದಿಷ್ಟು ಸಂಘಟನೆಗಳ ಜನಗಳು, ಒಂದಿಷ್ಟು ಲೇಖಕರು ಶಿವಾಜಿ ಮಹಾರಾಜರನ್ನು “ಹಿಂದೂ ಹೃದಯ ಸಮ್ರಾಟ್” ಎಂದು ಬಣ್ಣಿಸುವುದು.
“ಕಾಶೀಜಿ ಕಿ ಕಳಾ ಜಾತಿ ಮಥುರಾ ಮಸ್ಜಿದ್ ಹೋತಿ ಶಿವಾಜಿ ಜೋ ನಹೀ ಹೋತೆ ತೋ ಸುನ್ನತ ಹೋತಿ ಸಬಕಿ” ಎನ್ನುವಂತಹ ಹಾಡು ಕಥೆಗಳನ್ನು ಬರೆದು ಶಿವಾಜಿಯನ್ನು ಒಬ್ಬ ಹಿಂದೂ ಧರ್ಮರಕ್ಷಕ ಆತ ಜನಿಸದೇ ಇದ್ದರೆ ಹಿಂದೂಗಳೆಲ್ಲ ಮುಸಲ್ಮಾನರಾಗಬೇಕಾಗುತ್ತಿತ್ತು ಎನ್ನುವ ಅರ್ಥದಲ್ಲಿ ಶಿವಾಜಿಯನ್ನು ಬಣ್ಣಿಸಿದ್ದಾರೆ. ಆದರೆ ಆ ಕವಿ ಲೇಖಕರುಗಳಿಗೆ ಶಿವಾಜಿ ಮಹಾರಾಜರಿಗಿಂತ ಪೂರ್ವ ರಾಜ್ಯವಾಳಿದ ರಾಷ್ಟ್ರಕೂಟರು, ಚಾಲುಕ್ಯರು, ಹೊಯ್ಸಳರು, ಕದಂಬರು, ಬಂಗಾಳದ ಸೇನರು, ರಾಜಪೂತರು, ಪಲ್ಲವರು ಇವರುಗಳೂ ಸಹ ಹಿಂದೂ ರಾಜರುಗಳಾಗಿದ್ದರು ಆಗಲೂ ಮುಸಲ್ಮಾನ ರಾಜರುಗಳಿದ್ದರು ಆಗಲೂ ಯುದ್ದಗಳಾಗುತ್ತಿದ್ದವು ಎನ್ನುವ ಕಲ್ಪನೆಯೇ ಇದ್ದಂತಿಲ್ಲ.
ಆ ವಿಷಯ ಹಾಗಿರಲಿ ಶಿವಾಜಿ ಮಹಾರಾಜ ಕಂಡ ಕನಸು ಹಿಂದವಿ ಸಾಮ್ರಾಜ್ಯ ಕಟ್ಟುವುದಾಗಿರಲಿಲ್ಲ ಯಾರ ಅಧೀನಕ್ಕೂ ಒಳಪಡದೇ ಒಬ್ಬ ಸ್ವತಂತ್ರ ಸಾಮ್ರಾಟನಾಗುವುದೇ ಆತನ ಗುರಿಯಾಗಿತ್ತು, ಕನ್ನಡದ ದೊರೆ ಮಯೂರ ವರ್ಮ ಪಲ್ಲವರ ಸಾಮಂತ ಸ್ಥಾನದ ಆಹ್ವಾನ ತಿರಸ್ಕರಿಸಿ ಸ್ವತಂತ್ರ ರಾಜನಾಗುವ ಕನಸು ಕಂಡಂತೆ ಶಿವಾಜಿ ಮಹಾರಾಜ ಕೂಡ ಸ್ವತಂತ್ರ ಸಾಮ್ರಾಜ್ಯ ಕಟ್ಟಿ ಅದರ ಸಮ್ರಾಟನಾಗುವ ಕನಸು ಕಂಡ. ಶಿವಾಜಿ ಕನಸನ್ನು ಸಾಕಾರಗೊಳಿಸುವುದಕ್ಕೆ ಸತತವಾಗಿ ದುಡಿದವರು ಬುಡಕಟ್ಟಿನ ಬೇಡ, ವಾಲ್ಮಿಕಿ ಯುವಕರು ಹಿಂದುಳಿದ ವರ್ಗ ಕುರುಬ, ಮಾಳವ, ಗೌಳಿ, ಕೋಳಿ, ನಾವಿ ಜನಗಳು, ಮುಸ್ಲಿಮರು ಮತ್ತು ಮಹಾರ್ ,ಮಾಂಗ್, ಚಮ್ಮಾರ್ ಸಮುದಾಯದ ಜನಗಳು ಇವರುಗಳ ನಿರಂತರ ಹೋರಾಟದ ಫಲವಾಗಿ ಶಿವಾಜಿ ಮಹಾರಾಜರು ಸ್ವತಂತ್ರ ರಾಜರಾಗಲು ಸಾಧ್ಯವಾಯಿತು.
ತನ್ನ ಸ್ವತಂತ್ರ ಸ್ವರಾಜ್ಯ ಸ್ಥಾಪನೆಗೆ ತಮ್ಮ ರಕ್ತ ಹರಿಸಿದ SC/ST/OBC. ಮುಸ್ಲಿಂ ಹೀಗೆ ಎಲ್ಲ ಸಮುದಾಯಗಳಿಗೆ ಶಿವಾಜಿ ಮಹಾರಾಜರು ಉತ್ತಮ ಸ್ಥಾನಗಳನ್ನು ನೀಡಿ ಗೌರವಿಸಿದ, ಶೂದ್ರ ಶಿವಾಜಿ ಅವರು ರಾಜರಾಗಿದ್ದನ್ನು ಸಹಿಸದ ಜನಗಳು ಕುಟಿಲತನದಿಂದ ಶಿವಾಜಿಯವರನ್ನು ಕೊನೆಗೂ ಅಂತ್ಯಗೊಳಿಸಿದರು. ಶಿವಾಜಿ ಮಹಾರಾಜರ ನಂತರ ಪಟ್ಟಕ್ಕೆ ಬಂದ ಸಂಭಾಜಿರಾಜೇ ನಿಜಕ್ಕೂ ಪರಾಕ್ರಮಿ ಆತ ಕೂಡ ಸರ್ವಧರ್ಮ ಸಹಿಷ್ಣು 13 ಭಾಷೆಗಳ ಮೇಲೆ ಹಿಡಿತ ಹೊಂದಿದ್ದ ವಿದ್ವಾಂಸ ಆದರೆ ಕೆಲ ಇತಿಹಾಸಕಾರರು ಸಂಭಾಜಿರಾಜೇಯನ್ನು ಒಬ್ಬ ಕ್ರೂರಿ ಅಯ್ಯಾಶಿ ಎನ್ನುವಂತೆ ಬಿಂಬಿಸಿರುವುದು ದುರಂತ.
ಸಂಭಾಜಿ ರಾಜೇ ಕಾಲದಲ್ಲಿ ಉತ್ತರದಲ್ಲಿ ಪ್ರಭಲನಾಗಿದ್ದ ಔರಂಗಜೇಬ್ ದಕ್ಷಿಣ ಭಾಗಗಳ ಮೇಲೆ ಹಿಡಿತ ಪಡೆದುಕೊಳ್ಳಲು ಅವಕಾಶಕ್ಕಾಗಿ ಕಾಯುತ್ತಿದ್ದ ಸಂಭಾಜಿರಾಜೇ ಸ್ವತಃ ಎಷ್ಟು ಪರಾಕ್ರಮಿ ಆಗಿದ್ದನೋ ಆತನ ಸೈನ್ಯ ಕೂಡ ಅಷ್ಟೇ ಸದೃಢವಾಗಿತ್ತು. ಶಿವಾಜಿರಾಜೇ ಕಾಲದಲ್ಲಿ ಸೇನೆಗೆ ಸೇರಿಕೊಂಡಿದ್ದ SC/ST/OBC ಮುಸಲ್ಮಾನ ಸೈನಿಕರು ಸಂಭಾಜಿರಾಜೇಗೆ ಅತ್ಯಂತ ನಿಷ್ಠರಾಗಿದ್ದರು. ತನ್ನ ಸೈನ್ಯ ಬಲ ಮತ್ತು ತನ್ನ ಚಾಣಾಕ್ಷತನಗಳಿಂದ ಔರಂಗಜೇಬನ ಬೃಹತ್ ಸೈನ್ಯಕ್ಕೆ ಸತತ ಒಂಬತ್ತು ವರ್ಷಗಳ ಕಾಲ ಪ್ರತಿರೋಧ ಒಡ್ಡಿದ್ದು ಸಂಭಾಜಿ,
ಆದರೆ ಆರಂಭದಿಂದ ಶಿವ ಶಾಹಿಯನ್ನು ಕಂಡು ಒಳಗೊಳಗೆ ಕುದಿಯುತ್ತಿದ್ದ ಜನಗಳಿಗೆ ಹೇಗಾದರೂ ಮಾಡಿ ಸಂಭಾಜಿರಾಜೇಗೆ ಒಂದು ಗತಿ ಕಾಣಿಸಲೇಬೇಕಿತ್ತು ಅದರ ಪರಿಣಾಮವೇ ಸಂಭಾಜಿರಾಜೇಯ ಹತ್ಯೆ. ಅದು ಎಂತಹ ಹತ್ಯೆ ಎಂದರೆ ಮನುಸ್ಮೃತಿಯಲ್ಲಿ ಶೂದ್ರನಿಗೆ ನೀಡಬೇಕಾದ ಶಿಕ್ಷೆಯ ಪ್ರಕಾರ ಕಣ್ಣು ಕಿತ್ತು ಮೈ ಚರ್ಮ ಸುಲಿದು ದೇಹವನ್ನು ತುಂಡು ತುಂಡು ಮಾಡಿ “ಭೀಮಾ ನದಿ” ತೀರದಲ್ಲಿ ಬಿಸಾಕಲಾಗುತ್ತದೆ. ಮತ್ತು ಸಂಭಾಜಿರಾಜೇ ಅಂತ್ಯ ಸಂಸ್ಕಾರ ಯಾರೂ ನೆರವೇರಿಸದಂತೆ ಆಜ್ಞೆ ಪೇಶ್ವೆಗಳಿಂದ ಹೊರಡಿಸಲಾಗುತ್ತದೆ, ಪೇಶ್ವೆಗಳ ಆಜ್ಞೆಗೆ ಹೆದರಿದ ಜನಗಳು ಯಾರೂ ಸಂಭಾಜಿರಾಜೇಯನ್ನು ತುಂಡು ತುಂಡಾಗಿ ಕತ್ತರಿಸಿದ ಜಾಗದ ಕಡೆಗೆ ಸುಳಿಯುವ ಸಾಹಸ ಮಾಡುವುದಿಲ್ಲ,
ಆದರೆ ಗೋವಿಂದ್ ಗಣಪತ್ ಮಹಾರ್(ಗಾಯಕವಾಡ್) ಎನ್ನುವ ಅಸ್ಪೃಶ್ಯ ವ್ಯಕ್ತಿ ವೃತ್ತಿಯಲ್ಲಿ ದರ್ಜಿಯಾಗಿದ್ದು ಪೈಲ್ವಾನ್ ಆಗಿರುತ್ತಾನೆ ತಮ್ಮ ಆರಾಧ್ಯ ದೈವ ಶೂದ್ರ ದೊರೆ ಸಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಮಗ ಛತ್ರಪತಿ ಸಂಭಾಜಿರಾಜೇಯ ಭೀಕರ ಸಾವಿಗೆ ಗೋವಿಂದ್ ಮಹಾರ್ ನ ಹೃದಯ ಮಮ್ಮಲ ಮರುಗಿ ಏನಾದರೂ ಸರಿಯೆ ಒಬ್ಬ ಮಹಾರಾಜರ ಶವ ಅನಾಥವಾಗಿ ನಾಯಿ ನರಿಗಳಿಗೆ ಆಹಾರವಾಗುವುದಕ್ಕೆ ಬಿಡಬಾರದು ಎನ್ನುವ ನಿರ್ಧಾರ ಮಾಡಿ ಭೀಮಾತೀರಕ್ಕೆ ನಡೆದು ಬಂದು ತುಂಡು ತುಂಡಾಗಿ ಬಿದ್ದಿದ್ದ ಸಂಭಾಜಿ ಮಹಾರಾಜರ ದೇಹವನ್ನು ಜೋಡಿಸಿ ಹೊಲಿದು ಅದೆ ಭೀಮಾತೀರದಲ್ಲಿ(ಮಹಾರ್ ವಾಡ) ಶಾಸ್ತ್ರೋಕ್ತವಾಗಿ ಅಂತಿಮ ಸಂಸ್ಕಾರ ನೆರವೆರಿಸುತ್ತಾನೆ.

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿ ಬಂದ ಪೇಶ್ವೆಗಳು ಅದೇ ಸ್ಥಳದಲ್ಲಿ ಗೋವಿಂದ್ ಗಣಪತ್ ಮಹಾರ್ ನ ಶಿರಚ್ಛೇದನ ಮಾಡುತ್ತಾರೆ. ಇವತ್ತಿಗೂ ಸಂಭಾಜಿರಾಜೇ ಸಮಾಧಿಯ ಅನತಿ ದೂರದಲ್ಲಿ ಮಹಾರ್ ವಾಡಾದಲ್ಲಿ ಗೋವಿಂದ್ ಗಣಪತ್ ಮಹಾರ್ ನ ಸಮಾಧಿ ನೋಡಬಹುದು. ಸಂಭಾಜಿರಾಜೇಯ ಬರ್ಭರ ಹತ್ಯೆಯ ಸ್ವಲ್ಪ ಸಮಯದ ನಂತರ ಒಂದನೆಯ ಬಾಜಿರಾವ್ ಸಿಂಹಾಸನ ಏರಿದ (ಪೂರ್ವ ನಿಯೋಜನೆಯಂತೆ) ಮರಾಠಾ ಸಾಮ್ರಾಜ್ಯ ಬ್ರಾಹ್ಮಣ ಪೇಶ್ವಾಯಿ ಸಾಮ್ರಾಜ್ಯ ಆಗಿ ಬದಲಾಯಿತು.
ಒಂದನೆಯ ಬಾಜಿರಾವ ಒಬ್ಬ ಚಿತ್ಪಾವನ ಬ್ರಾಹ್ಮಣ ಯಕ್ಕಶ್ಚಿತ್ ಗುಮಾಸ್ತನಾಗಿದ್ದ ಬಾಜಿರಾವನನ್ನು ಬ್ರಾಹ್ಮಣರು ಶಿವ ಶಾಹಿಯ ಗದ್ದುಗೆಯ ಮೇಲೆ ಕುಳಿಸಿದರು. ಮೊದಲನೆ ಬಾಜಿರಾವ ಒಬ್ಬ ಪರಾಕ್ರಮಿ ಆಗಿದ್ದು ಎಷ್ಟು ಸತ್ಯವೋ ಆತ ಅಷ್ಟೇ ಕುಟಿಲ ಬುದ್ದಿಯವನು ಹಾಗು ಕಟ್ಟರ್ ಮನುವಾದಿಯಾಗಿದ್ದೂ ಕೂಡ ಅಷ್ಟೇ ಸತ್ಯ. ಶಿವ ಶಾಹಿಯನ್ನು ಪೇಶ್ವೆಶಾಹಿಯಾಗಿ ಬದಲಾಯಿಸಿದ ಬಾಜಿರಾವ, ಶಿವಾಜಿ ಮಹಾರಾಜರ ಕಾಲದಲ್ಲಿ ಸೈನ್ಯದ ವಿವಿಧ ಭಾಗಗಳಲ್ಲಿ ಮುಖ್ಯ ಹುದ್ದೆಗಳಲ್ಲಿದ್ದ ಅಸ್ಪೃಶ್ಯ ಸೈನಿಕರನ್ನು ಹೊರದಬ್ಬಿದ, ಶಿವಾಜಿ ಮಹರಾಜರು ಅಸ್ಪೃಶ್ಯ ಸೈನಿಕರು, ಕಿಲ್ಲೆದಾರರು, ಕಹಳೆ ಊದುವವರು (ಕೊಂಬು ಸಿಂಘಗಳು) ಇತ್ಯಾದಿ ಜನಗಳಿಗೆ ನೀಡಿದ್ದ ಇನಾಮಿ ಜಮೀನುಗಳನ್ನು ಕಿತ್ತುಕೊಂಡು ಅವರುಗಳನ್ನು ಗ್ರಾಮ ನಗರಗಳಿಂದ ಆಚೆ ಅಟ್ಟಿ ಸಂಪೂರ್ಣ ಮನುಸ್ಮೃತಿ ಯನ್ನು ಜಾರಿಗೆ ತಂದ.
ಬಾಜಿರಾವ ಅದೆಂಥ ಕಟ್ಟರ್ ಮನುವಾದಿಯಾಗಿದ್ದನೆಂದರೆ ಆತನ ಆಳ್ವಿಕೆಯ ಕಾಲದಲ್ಲಿ ಅಸ್ಪೃಶ್ಯರು ಗ್ರಾಮದೊಳಗೆ ಪ್ರವೇಶಿಸಬೇಕೆಂದರೆ ಕೇವಲ ಮಧ್ಯಾಹ್ನದ ಹೊತ್ತು ಮಾತ್ರ ಪ್ರವೇಶಿಸಬೇಕು ಮತ್ತು ಸೊಂಟಕ್ಕೆ ಪೊರಕೆ ಮತ್ತು ಕೊರಳಲ್ಲಿ ಮಡಿಕೆಯನ್ನು ಕಡ್ಡಾಯವಾಗಿ ಹಾಕಿಕೊಳ್ಳಲೇಬೇಕಿತ್ತು ಇಂತಹ ಉಗ್ರ ಮನುಸ್ಮೃತಿ ಯ ಹೇರಿಕೆಯಿಂದ ಅಸ್ಪೃಶ್ಯರ ಗತಿ ಯಾವ ಹಂತಕ್ಕೆ ತಲುಪಿತು ಎಂದರೆ ಶಿವಾಜಿ ಸಂಭಾಜಿ ಮಹಾರಾಜರ ಕಾಲದಲ್ಲಿ ಸೈನಿಕ ಸುಬೇದಾರರಾಗಿದ್ದ ಅಸ್ಪೃಶ್ಯರು ತಮ್ಮ ಜಮೀನುಗಳಲ್ಲಿ ಬೇಸಾಯ ಮಾಡಿಕೊಂಡು ನೆಮ್ಮದಿಯಾಗಿದ್ದ ಅಸ್ಪೃಶ್ಯ ರು ತುತ್ತು ಅನ್ನಕ್ಕೆ ಪರದಾಡುವ ಪರಿಸ್ಥಿತಿ ಉಂಟಾಯಿತು.
ಭಿಕ್ಷೆ ಕೂಡ ಬೇಡುವಂತಿಲ್ಲ ಯಾಕೆಂದರೆ ಗ್ರಾಮದೊಳಗೆ ಪ್ರವೇಶವೇ ಇರದಿದ್ದಾಗ ಭಿಕ್ಷೆ ಬೇಡುವುದಾದರೂ ಹೇಗೆ ? ಅವರುಗಳಿಗೆ ಬದುಕುಳಿಯುವುದಕ್ಕೆ ಉಳಿದುಕೊಂಡ ಕೊನೆಯ ಮಾರ್ಗ ಎಂದರೆ ಸತ್ತ ಪ್ರಾಣಿಗಳ ಮಾಂಸ ತಿನ್ನುವುದು. ಇಂತಹ ಸ್ಥಿತಿಗೆ ತಳ್ಳಲ್ಪಟ್ಟ ಅಸ್ಪೃಶ್ಯ ಜನಗಳು ನಿಧಾನವಾಗಿ ಆ ಪರಿಸ್ಥಿತಿಗೆ ಹೊಂದಿಕೊಳ್ಳ ಬೇಕಾಯಿತು. ಒಂದನೆಯ ಬಾಜಿರಾವನ ಮರಣದ ನಂತರ ಗದ್ದುಗೆ ಏರಿದ್ದು ಎರಡನೆಯ ಬಾಜೀರಾವ ಈತ ಒಬ್ಬ ಪರಮ ಹೇಡಿ ಅಷ್ಟೇ ಅಲ್ಲ ಹೆಣ್ಣು ಹೆಂಡ ಮೋಜುಗಳಲ್ಲಿ ಸದಾ ಮುಳುಗಿರುತ್ತಿದ್ದ.
ಆದರೆ ಒಂದು ವಿಷಯದಲ್ಲಿ ಈತ ಒಂದನೆಯ ಬಾಜೀರಾವನಿಗಿಂತ ಕಠೋರನಾಗಿದ್ದ ಅದು ಮನುಸ್ಮೃತಿಯ ಯಥಾವತ್ ಪಾಲನೆ. ಈತನ ಕಾಲದಲ್ಲಿ ಅಸ್ಪ್ರಶ್ಯರ ಸ್ಥಿತಿಗತಿ ತೀರ ಹದಗೆಟ್ಟು ಹೋಯಿತು ಅಸ್ಪೃಶ್ಯರ ಹೆಣ್ಣುಮಕ್ಕಳನ್ನು ಕಂಡಲ್ಲಿ ಬಲಾತ್ಕಾರ ಮಾಡಲಾಗುತ್ತಿತ್ತು ಆಕ್ಷೇಪ ಮಾಡುವ ಯಾವುದೇ ವ್ಯಕ್ತಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ಕೊಡಲಾಗುತ್ತಿತ್ತು. ಒಂದೆಡೆ ಹೊಟ್ಟಗೆ ಕೂಳಿಲ್ಲದ ಸ್ಥಿತಿ. ಇನ್ನೊಂದೆಡೆ ಪೇಶ್ವೆಗಳ
ನಿರಂತರ ದೌರ್ಜನ್ಯಗಳಿಂದ ಕಂಗೆಟ್ಟ ಅಸ್ಪೃಶ್ಯ ರಿಗೆ ಬ್ರಿಟಿಷ್ ಸರ್ಕಾರ ಮಹಾರ್ ಜನಗಳಿಗೆ ಸೈನ್ಯಕ್ಕೆ ಸೇರುವ ಅವಕಾಶವನ್ನು ನೀಡಿದರು. ಶಿವಾಜಿ ಕಾಲದಿಂದಲೂ ಸೈನಿಕರಾಗಿ ಸೇವೆಸಲ್ಲಿಸಿದ ಮಹಾರ್ ಜನಗಳಿಗೆ ಇದರಿಂದ ಅತೀವ ಸಂತೋಷವಾಗಿದ್ದು ಮಾತ್ರವಲ್ಲದೆ ಕುಸಿದು ಹೋಗಿದ್ದ ಅವರ ಆತ್ಮಬಲ ನೂರ್ಮಡಿಯಾಗಿ ಬೆಳೆದು ನಿಂತಿತು.
1758ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಗೆ ಮಹಾರ್ ಜನಗಳು ಸೇರ್ಪಡೆಯಾದರು. ಪೇಶ್ವೆಗಳು ಬ್ರಿಟಿಷ್ ರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರೂ 1817 ರಲ್ಲಿ ಜೂನ್ ತಿಂಗಳಲ್ಲಿ ಬ್ರಿಟಿಷ್ ರು ಪೇಶ್ವೆಗಳ ರಾಜಧಾನಿ ಪುಣೆಯನ್ನು ಮುತ್ತಿಗೆ ಹಾಕುತ್ತಾರೆ, ಅಸಹಾಯಕನಾದ ಬಾಜಿರಾವ ಬ್ರಿಟಿಷ್ ರೊಡನೆ ಒಪ್ಪಂದ ಮಾಡಿಕೊಂಡು ತನ್ನ ರಾಜ್ಯದ ಬಹುಭಾಗವನ್ನು ಬ್ರಿಟಿಷ್ ರಿಗೆ ಬಿಟ್ಟುಕೊಟ್ಟ. ಹೀಗೆ ತನ್ನ ಬಹುಭಾಗ ಪ್ರದೇಶವನ್ನು ತಮಗೆ ಬಿಟ್ಟು ಕೊಟ್ಟ ಬಾಜಿರಾವ ಯಾವ ಕ್ಷಣದಲ್ಲಾದರೂ ತಮ್ಮ ಮೇಲೆ ತಿರುಗಿ ಬೀಳಬಹುದು ಎನ್ನುವ ಅನುಮಾನ ಪುಣೆಯಲ್ಲಿದ್ದ ಬ್ರಿಟಿಷ್ ರೆಸಿಡೆಂಟ್ ಎಲ್ಫಿನ್ಸ್ಟನ್ ನಿಗೆ ಇದ್ದೇ ಇತ್ತು ಮತ್ತು ಆತನ ಅನುಮಾನ ನಿಜವೂ ಆಯಿತು.
ನಿಪ್ಪಾಣ್ಕರ್,ಭೋಸಲೆ,ನಿಂಬಾಳ್ಕರ್,ಘೋರ್ಪಡೆ,ಜಾಧವ್,ಗೋಖಲೆ,ಪುರಂದರೆ,ಮಿಂಚೂರ್ಕರ್ ಹೀಗೆ ಬಹುತೇಕ ಎಲ್ಲ ಮರಾಠ ಸರದಾರರು ಪುಣೆಯಲ್ಲಿ ತಮ್ಮ ತಮ್ಮ ಸೇನೆಯೊಂದಿಗೆ ಜಮಾವಣೆಗೊಂಡರು, ಪೇಶ್ವೆಗಳ ಸೈನ್ಯದಲ್ಲಿ ಪಠಾಣರು, ಅರಬ್ಬರು, ರಾಜಪುತರು, ಸಿದ್ದಿಗಳು ಇವರುಗಳಿಂದ ಕೂಡಿದ ಸುಮಾರು 50 ಸಾವಿರ ಸೇನೆ ಇತ್ತು ಇಡೀ ಸೇನೆಯ ನೇತೃತ್ವವನ್ನು ಬಾಪು ಗೋಖಲೆಗೆ ನೀಡಲಾಗಿತ್ತು.
ನಿರೀಕ್ಷೆಯಂತೆ 1817 ನವಂಬರ್ 5 ನೆ ತಾರಿಖಿನಂದು ಪುಣೆ ಇಂದ ಹೊರಬಿದ್ದ ಪೇಶ್ವೆ ಸೈನ್ಯ ಬ್ರಿಟಿಷ್ ರ ಜೊತೆ ಯುದ್ದಕ್ಕೆ ನಿಂತಿತು. ಪೇಶ್ವೆಗಳ ಸುಳಿವು ಮೊದಲೇ ಅರಿತಿದ್ದ ಬ್ರಿಟಿಷ್ ಸೇನೆ ಪ್ರತಿದಾಳಿ ನಡೆಸಿ ಭಾರಿ ಪ್ರಮಾಣದಲ್ಲಿ ಪ್ರತಿರೋಧ ನೀಡಿದಾಗ ಎರಡೂ ಕಡೆಗಳಲ್ಲಿ ಸಾಕಷ್ಟು ಜನ ಸೈನಿಕರು ಸತ್ತು ಹೋಗುತ್ತಾರೆ. ಇಲ್ಲಿ ಬ್ರಿಟಿಷ್ ರ ಕೈ ಮೇಲಾಗುತ್ತಿದ್ದಂತೆ ಪೇಶ್ವೆ ಸೈನ್ಯ ನಿಧಾನಕ್ಕೆ ಪುಣೆಯ ಕಡೆಗೆ ಚಲಿಸಿ ಹೋಗುತ್ತದೆ ಆನಂತರ ಎರಡೂ ಸೈನ್ಯಗಳು ಸ್ವಲ್ಪ ದಿನಗಳ ಮಟ್ಟಿಗೆ ಸ್ಥಬ್ದವಾಗುತ್ತವೆ. ಈ ಮೊದಲೇ ಎಲ್ಫಿನ್ ಸ್ಟನ್ ನೀಡಿದ್ದ ತುರ್ತು ಸಂದೇಶದಂತೆ ಅಹಮದ್ ನಗರದಿಂದ ಪುಣೆಗೆ ಬರಬೇಕಿದ್ದ ಬ್ರಿಗೇಡಿಯರ್ ಸ್ಮಿತ್ ನ ಸೇನೆ ನಿಗದಿತ ಸಮಯಕ್ಕೆ ಬರಲಾಗಲಿಲ್ಲ, ಅಲ್ಲಲ್ಲಿ ಪೇಶ್ವೆಗಳ ಸೈನ್ಯ ಸ್ಮಿತ್ ನ ಸೈನ್ಯವನ್ನು ತಡೆಯುವ ಪ್ರಯತ್ನ ಮಾಡಿದರೂ ಅದು ಸಾಧ್ಯವಾಗದೇ ಬ್ರಿಟಿಷ್ ಸೇನೆ ಅವುಗಳನ್ನೆಲ್ಲ ದಾಟಿ ಪುಣೆಯ ಯರವಾಡ ಸಮೀಪ ತಲುಪಿ ಬಿಟ್ಟಿತು, ಖಡಕಿ ಎನ್ನುವ ಪ್ರದೇಶದಲ್ಲಿದ್ದ ಬ್ರಿಟಿಷ್ ಸೈನ್ಯ ಕೂಡ ಯರವಾಡಗೆ ಬಂದು ಸ್ಮಿತ್ ನ ಸೇನೆಯನ್ನು ಕೂಡಿಕೊಂಡಿತು.
ಹೀಗೆ ಬೃಹತ್ ಪ್ರಮಾಣದಲ್ಲಿದ್ದ ಬ್ರಿಟಿಷ್ ಸೇನೆಯನ್ನು ಎದರಿಸುವುದು ತಮ್ಮಿಂದ ಅಸಾಧ್ಯ ಎಂದು ಅರಿತ ಬಾಜಿರಾವ ಮತ್ತು ಸೇನಾ ಮುಖ್ಯಸ್ಥ ಬಾಪು ಗೋಖಲೆ ತಮ್ಮ ಸೈನ್ಯದೊಂದಿಗೆ ಪಲಾಯನ ಗೈದರು. ನವೆಂಬರ್ 17-1817 ರಂದು ಪುಣೆ ಬ್ರಿಟಿಷ್ ರ ಕೈವಶ ಆಯಿತು. ಯರವಾಡ ಕದನದಿಂದ ಪಲಾಯನಗೈದಿದ್ದ ಬಾಜಿರಾವನನ್ನು ಬೆನ್ನಟ್ಟುವ ಪ್ರಯತ್ನವನ್ನು ಜನರಲ್ ಸ್ಮಿತ್ ಮಾಡುವುದಿಲ್ಲ ಆತ ತನ್ನ ಸೈನಿಕರಿಗೆ ವಿಶ್ರಾಂತಿ ನೀಡಿದ. ಪುಣೆಯನ್ನು ಮರಳಿ ಪಡೆಯಲೇಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದ ಬಾಜಿರಾವ ಜನರಲ್ ಸ್ಮಿತ್ ನ ಸೈನ್ಯವನ್ನು ಯಾಮಾರಿಸಿ ಬೇರೆ ಮಾರ್ಗಗಳಿಂದ ಪುಣೆಯ ಹತ್ತಿರ ಬಂದ. ಪೇಶ್ವೆ ಸೈನ್ಯವನ್ನು ಬೆನ್ನಟ್ಟಿದ್ದ ಜನರಲ್ ಸ್ಮಿತ್ ಗೂ ಮತ್ತು ಪುಣೆಯ ರಕ್ಷಣಾ ಜವಾಬ್ದಾರಿ ಹೊತ್ತಿದ್ದ ಕರ್ನಲ್ ಬರ್ ಗೂ ಸಂಪರ್ಕ ಕಡಿದು ಹೋಗಿತ್ತು.
ಈ ಸಮಯದಲ್ಲಿ ಕರ್ನಲ್ ಬರ್ ಗೆ ಒಂದು ಆತಂಕ ಕಾಡೋದಕ್ಕೆ ಆರಂಭ ಆಗುತ್ತದೆ ಅದೇನೆಂದರೆ ಇಂಥ ಸಂದರ್ಭದಲ್ಲಿ ಪೇಶ್ವೆಯ ಬೃಹತ್ ಸೈನ್ಯ ಪುಣೆಯ ಮೇಲೆ ದಾಳಿ ಮಾಡಿದರೇ ಏನು ಗತಿ? ಆ ಕಾರಣದಿಂದಲೇ ಕರ್ನಲ್ ಬರ್ ಶಿರೂರದ ಲೆಫ್ಟಿನೆಂಟ್ ಕರ್ನಲ್ ಫಿಲ್ಸ್ ಮನ್ಗೆ ಸಂದೇಶ ಕಳುಹಿಸಿ ತ್ವರಿತವಾಗಿ ನೆರವಿಗೆ ಸೈನ್ಯ ವನ್ನು ಕಳುಹಿಸುವಂತೆ ವಿನಂತಿಸಿಕೊಳ್ಳುತ್ತಾನೆ. ಕರ್ನಲ್ ನ ಮನವಿಗೆ ಸ್ಪಂಧಿಸಿದ ಫಿಲ್ಸ್ ಮನ್ ತತಕ್ಷಣ Second Battalion of the first Regiment Bombay Native Infantry ಯನ್ನು ಪುಣೆಯತ್ತ ಕಳುಹಿಸಿದ, ಈ ಸೈನ್ಯದಲ್ಲಿ SC, ST, ಮುಸ್ಲಿಂ, ಮರಾಠಾ ಯೋಧರಿದ್ದರೂ ಸಹ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಿದ್ದು ಮಹಾರ್ ಸೈನಿಕರು ಅದರಲ್ಲೂ, 31 ಡಿಸೆಂಬರ್ 1817 ರಂದು ಕ್ಯಾಪ್ಟನ್ ಫ್ರಾನ್ಸಿಸ್ ಸ್ಟಂಟನ್ ನೇತೃತ್ವದಲ್ಲಿ ಹೊರಟ ಸೇನೆಯಲ್ಲಿ ಇದ್ದಿದ್ದು 90% ಜನ ಮಹಾರ್ ಸೈನಿಕರು.

1817 ರಂದು ರಾತ್ರಿ ಎಂಟು ಗಂಟೆಗೆ ಶಿರೂರದಿಂದ ಹೊರಟ ಸ್ಟಂಟನ್ ಸೇನಾ ತುಕಡಿಯಲ್ಲಿ 500 ಪದಾತಿದಳ. 250 Puna regular Horse ನ ಅಶ್ವದಳ, ಮತ್ತು ಕೇವಲ 26 ತೋಪು, ಮತ್ತು 24 gunners ಗಳಿಂದ ಕೂಡಿಕೊಂಡಿತ್ತು. ಸುಮಾರು 27 ಮೈಲಿಗಳ ದೂರವನ್ನು ಕಾಲ್ನಡಿಗೆಯಿಂದ ಕ್ರಮಿಸಿ 1818 ಜನೆವರಿ 1 ನೇ ತಾರೀಖಿನ ಬೆಳಗಿನ ಜಾವ 9 ಗಂಟೆಗೆ ಭೀಮಾಕೋರೆಗಾಂವ್ ತಲುಪುತ್ತದೆ. ಸತತ 27 ಮೈಲಿ ದಾರಿ ಕ್ರಮಿಸಿ ಬಂದಿದ್ದ ಮಹಾರ್ ಪಡೆ ಸಾಕಷ್ಟು ದಣಿದಿತ್ತು. ಕ್ಯಾಪ್ಟನ್ ಸ್ಟಂಟನ್ ತನ್ನ ಸೇನೆಯೊಂದಿಗೆ ಕೋರೆಗಾಂವ ಪ್ರವೇಶಿಸಿದ್ದಾನೆ ಎನ್ನುವ ಸುದ್ದಿ ಪೇಶ್ವೆ ಸೈನ್ಯಕ್ಕೆ ತಿಳಿಯುತ್ತಲೇ ನಾಲ್ಕೂ ದಿಕ್ಕಿನಿಂದ ಮುತ್ತಿಗೆ ಹಾಕಲು ನಿರ್ಧರಿಸುತ್ತದೆ.

ಇಡೀ ರಾತ್ರಿ ಊಟ ನೀರು ಇಲ್ಲದೇ 27 ಮೈಲಿನಡೆದು ಬಂದಿದ್ದ ಮಹಾರ್ ಸೈನ್ಯದ ಸ್ಥಿತಿ ತೀರ ಬಸವಳಿದು ಹೋಗಿತ್ತು. ಬಾಯಾರಿಕೆ ತಣಿಸಿಕೊಳ್ಳಲು ಗುಟುಕು ನೀರು ಸಹಿತ ದೊರೆಕಿರಲಿಲ್ಲ ಇಂಥ ಸಂದರ್ಭದಲ್ಲಿಯೇ ಪೇಶ್ವೆ ಸೈನ್ಯ ದಾಳಿಗೆ ಇಳಿಯಿತು. ಸಾವಿರಾರು ಅರಬ್ ಸೈನಿಕರು ಸೇರಿದಂತೆ ಮೂರ್ನಾಲ್ಕು ಪಡೆಗಳು ಇಡೀ ಕೋರೆಗಾಂವನ್ನು ಸುತ್ತುವರಿದವು. ಎರಡೂ ಸೈನ್ಯಗಳ ನಡುವೆ ಘೋರವಾದ ಯುದ್ದ ಆರಂಭವಾಯಿತು, ಅತ್ಯಂತ ಪರಾಕ್ರಮದಿಂದ ಹೋರಾಟಮಾಡುತ್ತಿದ್ದ ಮಹಾರ್ ಸೇನೆ ಹಸಿವು ಮತ್ತು ಬಾಯಾರಿಕೆಯಿಂದ ತತ್ತರಿಸತೊಡಗಿತು. ಪೇಶ್ವೆಗಳನ್ನು ಗೆಲ್ಲುವುದು ಅಸಾಧ್ಯ ಎನ್ನುವ ವಿಚಾರ ಆಗಾಗ ಸ್ಟಂಟನ್ ಮನಸಿನಲ್ಲಿ ಹಾಯುತ್ತಲೇ ಇತ್ತು. ಒಂದು ಹಂತದಲ್ಲಿ ಶರಣಾಗತಿ ಯಾಗುವುದೆ ಒಳ್ಳೆಯದು ಎನ್ನುವ ಭಾವನೆ ಆತನ ಮನಸಿನಲ್ಲಿ ಹಾಯ್ದು ಹೋಯಿತು, ಆದರೆ ಮಹಾರ್ ಸೈನಿಕರ ಶೌರ್ಯದ ಅರಿವು ಆಗುತ್ತಲೇ ತಕ್ಷಣ ಸಾವರಿಸಿಕೊಂಡ ಕ್ಯಾಪ್ಟನ್ ಸ್ಟಂಟನ್ ಸತ್ತರೂ ಸರಿ ಶರಣಾಗತಿ ಆಗೋದು ಬೇಡ ಎನ್ನುವ ಒಂದು ಕರೆಯನ್ನು ಸೈನಿಕರಿಗೆ ನೀಡುತ್ತಲೇ ಮೊದಲೇ ಸ್ವಾಭಿಮಾನಿಗಳಾಗಿದ್ದ ಮಹಾರ್ ಸೈನಿಕರ ಆತ್ಮಶಕ್ತಿ ನೂರ್ಮಡಿಯಾಗುತ್ತದೆ,

ತಮ್ಮನ್ನು ನಾಯಿ ನರಿಗಳಿಗಿಂತ ಕೀಳಾಗಿ ಕಂಡ ಪೇಶ್ವೆಗಳ ಬಗ್ಗೆ ಆ ಮಹಾರ್ ಸೈನಿಕರಲ್ಲಿ ಎಷ್ಟು ಆಕ್ರೋಶ ತುಂಬಿಕೊಂಡಿತ್ತು ಎಂದರೆ ಒಂದು ಏಟಿಗೆ ಒಬ್ಬೊಬ್ಬರಂತೆ ಪೇಶ್ವೆ ಸೈನಿಕರ ಹೆಣಗಳು ಉರುಳಿಸಿ ಹಾಕಿದರು. ಕೇವಲ ಬೆರಳೆಣಿಕೆಯಷ್ಟಿದ್ದ ಮಹಾರ್ ಸೈನಿಕರು ತಮ್ಮ ವ್ಯವಸ್ಥಿತ ಮತ್ತು ಕರಾರುವಕ್ಕಾದ ಯುದ್ಧ ಕೌಶಲ್ಯದಿಂದ ನಿಧಾನಕ್ಕೆ ಪೇಶ್ವೆಗಳ ಸೈನಿಕರನ್ನು ಹಂತ ಹಂತವಾಗಿ ಯಮಲೋಕಕ್ಕೆ ಕಳುಹಿಸಿದರು ರಾತ್ರಿಯಾಗುತ್ತಲೇ ಮಹಾರ್ ಸೈನಿಕರಿಗೆ ಕುಡಿಯಲು ನೀರು ದೊರಕುತ್ತದೆ ಬರೀ ನೀರು ದೊರಕಿದ್ದಷ್ಟೇ ತಡ ಮಹಾರ್ ಸೈನಿಕರಿಗೆ ಅದಮ್ಯ ಚೈತನ್ಯ ದೊರಕಿ ಅಮಿತ ಉತ್ಸಾಹದಿಂದ ಪುಟಿದೆದ್ದು ಪೇಶ್ವೆ ಸೈನಿಕರನ್ನು ಅಟ್ಟಾಡಿಸಿ ಕತ್ತರಿಸಿ ಹಾಕುತ್ತಾರೆ, ಹೀಗೆ ಮಹಾರ್ ಸೈನಿಕರು ಪೇಶ್ವೆ ಸೈನ್ಯವನ್ನು ತರಿದು ಹಾಕುತ್ತಿದ್ದರೆ ಇತ್ತ ಪೇಶ್ವೆ ಸೈನ್ಯದ ಆತ್ಮ ಸ್ಥೈರ್ಯ ನಿಧಾನಕ್ಕೆ ಕುಗ್ಗಿ ಹೋಗಿ ಮೆಲ್ಲಗೆ ಪಲಾಯನ ಮಾಡಲಾರಂಭಿಸುತ್ತದೆ, ಹೀಗೆ ಪಲಾಯನಕ್ಕೆ ಮೊದಲು ಮುಂದಾಗಿದ್ದೆ ಪೇಶ್ವೇ ಬಾಜಿರಾವ.
28 ಸಾವಿರ ಸೈನ್ಯದ ಸರದಾರ ಕೇವಲ 500 ಮಹಾರ್ ಸೈನಿಕರ ಕೈಗೆ ಸಿಕ್ಕು ಬಾಲ ಮುದುರಿಕೊಂಡು ದಿಕ್ಕೆಟ್ಟು ಓಡಿ ಹೋಗುವ ಸ್ಥಿತಿ ನಿರ್ಮಾಣ ಆಯಿತು. ಭೀಮಾ ಕೋರೆಗಾಂವ್ ನಿಂದ ಫುಲಗಾಂವ್ ದ ವರೆಗೆ ಅಟ್ಟಿಸಿಕೊಂಡು ಬಂದ ಸಿದ್ದನಾಕ. ಮಾದನಾಕ. ರತನಾಕ. ಜತನಾಕರ ಕೈಯಿಂದ ತಪ್ಪಿಸಿಕೊಂಡು ಹೋದ ಬಾಜಿರಾವ ನಂತರ ತನ್ನ ಸಾಮ್ರಾಜ್ಯವನ್ನೇ ಕಳೆದುಕೊಂಡ. ಯಾವ ಭೀಮಾನದಿ ತೀರದ ಕೋರೆಗಾಂವ ಬಳಿ SC/ST/OBC. ಮುಸಲ್ಮಾನ ಜನಗಳು ಬೆವರು ರಕ್ತ ಹರಿಸಿ ಸ್ಥಾಪಿಸಿದ್ದ ಶಿವ ಶಾಹಿಯನ್ನು ಸಂಭಾಜಿ ರಾಜೆಯನ್ನು ಹತ್ಯೆಗೈಯುವ ಮೂಲಕ ಬ್ರಾಹ್ಮಣರು ಅಂತ್ಯಗೊಳಿಸಿ ಪೇಶ್ವೇ ಶಾಹಿಯನ್ನು ಸ್ಥಾಪಿಸಿದ್ದರೋ ಅದೇ ಭೀಮಾನದಿ ತೀರ ಕೋರೆಗಾಂವ್ ನಲ್ಲಿ ಕೇವಲ 500 ಜನ ಮಹಾರ್ ಸೈನಿಕರು (ಇವರುಗಳಲ್ಲಿ ಮರಾಠ, ಮುಸ್ಲಿಂ, ST, OBC ಗಳೂ ಸಹ ಇದ್ದವರು) ಅದೇ ಜಾಗದಲ್ಲಿ ಪೇಶ್ವೆಗಳ ಸಾಮ್ರಾಜ್ಯವನ್ನು ಮಣ್ಣಲ್ಲಿ ಹೂತು ಹಾಕಿದ್ದು ನಿಜಕ್ಕೂ ಕಾಕತಾಳಿಯ.
ಇಂತಹ ಅತೀ ಅದ್ಬುತ ಹೋರಾಟ ಭಾರತದ ಇತಿಹಾಸಗಳಲ್ಲಿ ದಾಖಲಾಗಬೇಕಿತ್ತು ಆದರೆ ದುರದೃಷ್ಟವಶಾತ್ ಆಗಿಲ್ಲ. ಕಾರಣ ಇಷ್ಟೆ ಈ ಯುದ್ದ ಹೆಣ್ಣು ಹೊನ್ನು ಮಣ್ಣಿಗಾಗಿ ಅಥವಾ ಕೇವಲ ಸಂಬಳಕ್ಕೆ, ಬಹುಮಾನ, ಪಾರಿತೋಷಗಳಿಗಾಗಿ ನಡೆದ ಯುದ್ಧ ಆಗಿರಲಿಲ್ಲ ಈ ಯುದ್ದ ಮಾಡಿದವರು ಮೇಲ್ವರ್ಗದ ಮಂಗಲ್ ಪಾಂಡೆಯಂಥ ಜನ ಆಗಿರಲಿಲ್ಲ. ಯಾಕೆಂದರೆ ಇತಿಹಾಸದಲ್ಲಿನ 100ಕ್ಕೆ 100% ಯುದ್ಧ ಗಳು ನಡೆದದ್ದು ಹೆಣ್ಣು ಹೊನ್ನು ಮಣ್ಣಿಗಾಗಿ… ಆದರೆ ಕೇವಲ ಆತ್ಮಗೌರವ, ಸ್ವಾಭಿಮಾನಕ್ಕಾಗಿ ಜಗತ್ತಿನಲ್ಲಿ ಯಾವುದಾದರೂ ಯುದ್ಧ ನಡೆದಿದ್ದರೆ ಅದು ಕೋರೆಗಾಂವ್ ಯುದ್ಧ ಮಾತ್ರ. ಯಾಕೆಂದ್ರೆ ಗೆದ್ದ ಮೇಲೂ ಮಹಾರ್ ಸೈನಿಕರು ಪ್ರಶಂಸೆ ಬಿಟ್ಟು ಬೇರೆನು ಬಯಸದ ಸ್ವಾಭಿಮಾನಿ ಜನಗಳು. ಇವತ್ತಿಗೂ ಇಂಗ್ಲೆಂಡ್ ನ Army training ನಲ್ಲಿ ಸೈನಿಕರಿಗೆ ಕೊರೆಗಾಂವ್ ನ ಯುದ್ದದ ಉದಾಹರಣೆ ನೀಡಲಾಗುತ್ತದೆ. ದುರದೃಷ್ಟವಶಾತ್ ಈ ಕೋರೆಗಾಂವ್ ಇತಿಹಾಸ ಭಾರತೀಯರಿಗೆ ಗೊತ್ತಾಗಿದ್ದು ತುಂಬ ತಡವಾಗಿ, ಅದೂ ಕೂಡ ಇತಿಹಾಸ ತಜ್ಞ ಡಾ|| ಬಾಬಾ ಸಾಹೇಬರಿಂದ.
ಕೊರೆಗಾಂವ್ ಯುದ್ದದ ನಂತರ ಬ್ರಿಟಿಷ್ ಸರ್ಕಾರ ಅಸ್ಪೃಶ್ಯರಿಗೆ ಶಿಕ್ಷಣ ನೀಡುವ ಬಗ್ಗೆ ನಿರ್ಣಯ ತೆಗೆದುಕೊಂಡಿತು ಅದರ ಪರಿಣಾಮವೇ ಸುಬೇದಾರ್ ಮಾಲೋಜಿ ಸಕ್ಪಾಲ್ (ಬಾಬಾಸಾಹೇರ ಅಜ್ಜ) ಸುಬೇದಾರ್ ರಾಮಜಿ ಸಕ್ಪಾಲ್ (ಬಾಬಾಸಾಹೇಬರ ತಂದೆ) ಶಿಕ್ಷಣ ಪಡೆದಿದ್ದು ಸೈನ್ಯ ಸೇರಿದ್ದು. ಅದರ ಪರಿಣಾಮವೇ ಬಾಬಾ ಸಾಹೇಬರಿಗೆ ಮನೆಯಲ್ಲಿ ಶಿಕ್ಷಣ ಶಿಸ್ತು ದೊರೆಯಲು ಸಾಧ್ಯವಾಗಿದ್ದು ಏಕಾಂಗಿಯಾಗಿ ಸಂಘರ್ಷ ನಡೆಸುವ ಮನೋಸ್ಥೈರ್ಯ ದೊರಕಿದ್ದು, ಅಂತಹ ಹಿನ್ನೆಲೆ ಇಂದ ಡಾ. ಬಾಬಾಸಾಹೇಬರು ಬಂದ ಕಾರಣದಿಂದಲೇ ಇವತ್ತು ಕೋಟ್ಯಾಂತರ ಜನ ಹಿಂದುಳಿದವರಿಗೆ ಅಸ್ಪೃಶ್ಯರಿಗಾಗಿ ಬಾಬಾಸಾಹೇಬರು ಏಕಾಂಗಿಯಾಗಿ ಹೋರಾಡಿ ನೆಮ್ಮದಿಯ ಬದುಕು ದೊರಕಿಸಿ ಕೊಡಲು ಸಾಧ್ಯವಾಗಿದ್ದು.. ಅದಕ್ಕೆ ಬಾಬಾಸಾಹೇಬರು ಹೇಳ್ತ ಇದ್ದಿದ್ದು “ಇತಿಹಾಸವನ್ನು ಅರಿತವರು ಇತಿಹಾಸವನ್ನು ನಿರ್ಮಿಸುವರು” ಇವತ್ತು ಜನೆವರಿ ಒಂದು ಇತಿಹಾಸವನ್ನು ನೆನಪಿಸಿಕೊಳ್ಳೋ ದಿನ. ಒಂದು ಲೇಖನದಲ್ಲಿ ಇಡೀ ಇತಿಹಾಸವನ್ನು ಹೇಳುವುದು ಯಾರಿಗೇ ಅದರೂ ಕಷ್ಟಸಾಧ್ಯ ಒಂದಿಷ್ಟು ಅಂಶಗಳನ್ನ ಕೈಬಿಟ್ಟು ಲೇಖನ ನಿಮ್ಮ ಮುಂದಿಟ್ಟಿದ್ದೆನೆ ಓದಿಕೊಳ್ಳಿ. ಎಲ್ಲರಿಗೂ ಭೀಮಾ ಕೋರೆಗಾಂವ್ ವಿಜಯ ದಿವಸದ ಶುಭಾಶಯಗಳು.
ರವೀಂದ್ರ ಎನ್.ಎಸ್.