ಗೋಹತ್ಯೆ ನಿಷೇಧ ಕಾನೂನು ಮತ್ತು ಒಂದಿಷ್ಟು ಪ್ರಶ್ನೆಗಳು

0
156
-ಸೋಮಪ್ರಕಾಶ್ ಆರ್ಯ, ಬೆಂಗಳೂರು

ಕರ್ನಾಟಕ ಸರ್ಕಾರ ಗೋ ಹತ್ಯ ನಿಷೇಧ ಕಾನೂನನ್ನು ಜಾರಿಗೆ ತರಲು ತೀವ್ರ ಆಸಕ್ತಿ ತೋರಿದ್ದು ಈ ಕಾನೂನಿನಿಂದ ಯಾರಿಗೆ ಎಷ್ಟು ಲಾಭ ಆಗುತ್ತೆ ? ಅನ್ನೋದನು ಬಹುಶಃ ಸರ್ಕಾರಕ್ಕಷ್ಟೆ ಗೊತ್ತು. ಆದರೆ ಗೋ ಹತ್ಯಾ ನಿಷೇಧ ಕಾನೂನಿನ ಬಾಧಕಗಳು ಮಾತ್ರ ಹೆರಳವಾಗಿ ಇವೆ ಅವುಗಳಲ್ಲಿ ಮೊದಲನೆಯ ಪ್ರಶ್ನೆ

1.ಗ್ರಾಮದೇವತೆಗೆ ಪ್ರಾಣಿ ಬಲಿ ಕೊಡುವ ಪದ್ಧತಿ ಹಿಂದೂಗಳಲ್ಲಿದೆ. ಅದರಂತೆ ಕೊಣವನ್ನೂ ಬಲಿ ಕೊಡುವುದು ಶತಮಾನಗಳಿಂದ ಬಹುಶಃ ಮನುಷ್ಯನಿಗೆ ದೈವಾರಾಧನೆ ರೂಢಿಯಾದಾಗಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಇದನ್ನು ನಿರ್ಬಂಧಿಸುವ ಮೂಲಕ ಸರ್ಕಾರಗಳು ಒಂದು ಗುಂಪಿನ ಜನರ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸಿ, ಅವರ ಹಕ್ಕನ್ನು ನಿರಾಕರಿಸುತ್ತಿಲ್ಲವೇ?

2. ಹಿಂದೂ ಧರ್ಮದಲ್ಲಿ ಗತಿಸಿದ ಪಿತೃವರ್ಗಗಳವರನ್ನು ಪೂಜಿಸುವ ಸಂಪ್ರದಾಯ ಇದೆ. ಇದರಂತೆ ದಸರಾ ಮತ್ತು ದೀಪಾವಳಿ ಸಂದರ್ಭದಲ್ಲಿ ಹಿರಿಯರ ಇಷ್ಟದ ಅಡುಗೆ, ವಸ್ತು, ವಸ್ತ್ರಗಳನ್ನು ಎಡೆ ಇಟ್ಟು ಪೂಜಿಸುವ ರೂಢಿ ಇದೆ. ಅದರಂತೆ ಹಿಂದೂಗಳಲ್ಲಿ ಅನೇಕ ತಳವರ್ಗಗಳಲ್ಲಿ ಗೋಮಾಂಸಾಹಾರ ಸೇವನೆಯ ರೂಢಿ ಇದೆ.
ಆದ್ದರಿಂದ ಆ ಜಾತಿಗಳವರು ತಮ್ಮ ಹಿರಿಯರಿಗೆ ಗೋಮಾಂಸದ ಅಡುಗೆ ಮಾಡಿ ಎಡೆ ಬಡಿಸುವುದನ್ನು ಸಂಪ್ರದಾಯವನ್ನಾಗೇ ರೂಢಿಸಿಕೊಂಡಿದ್ದಾರೆ. ಈಗ ಸರ್ಕಾರ ಗೋಹತ್ಯಾ ನಿಷೇಧ ಕಾಯಿದೆಯ ಮೂಲಕ ಎತ್ತು, ದನ, ಎಮ್ಮೆ, ಕೋಣ, ಕರುಗಳನ್ನು ಹತ್ಯೆ ಮಾಡುವುದನ್ನು ನಿಷೇಧಿಸಿ, ತಳವರ್ಗಗಳವರ ಆಹಾರ ಪದ್ಧತಿಯ ಪ್ರಧಾನ ಭಾಗವಾದ ಗೋಮಾಂಸಾಹಾರ(ದನ, ಎತ್ತು, ಎಮ್ಮೆ, ಕೋಣ, ಕರು ಎಲ್ಲಾ ಸೇರಿ) ಮುಕ್ತವಾಗಿ ಸಿಗದಂತೆ ತಡೆಯೊಡ್ಡಿದೆ. ಈ ಕ್ರಮದ ಮೂಲಕ ತಳವರ್ಗಗಳವರ ಧಾರ್ಮಿಕ ನಂಬಿಕೆಗಳನ್ನು ಸರ್ಕಾರ ಅಪಮಾನಿಸುತ್ತಿಲ್ಲವೇ? ಜಾತಿ ಆಧಾರಿತ ಸಮಾಜದಲ್ಲಿ ಕಡೆಗಣಿಸಲ್ಪಟ್ಟು ಶೋಷಿಸಲ್ಪಟ್ಟಿದ್ದ ವರ್ಗಗಳನ್ನು ಸರ್ಕಾರ ಬೆಂಬಲಿಸಿಸಿ, ಅವರ ಎಲ್ಲಾ ಹಕ್ಕುಗಳನ್ನು ರಕ್ಷಿಸುವ ಬದಲಿಗೆ ಸರ್ಕಾರವೇ ಈಗ ಶೋಷಣೆಗಿಳಿದಂತಾಗಿಲ್ಲವೇ?

3.ಪ್ರಪಂಚದ ಎಲ್ಲೆಡೆ ಪಶುಸಂಗೋಪನೆ ಮಾಡುವ ವರ್ಗಗಳವರು ಅವರ ಸಾಕು ಪ್ರಾಣಿಗಳನ್ನು ಕೃಷಿ ಕೆಲಸಕ್ಕೆ, ಹೈನುಗಾರಿಕೆಗೆ, ಮಾಂಸ, ಉಣ್ಣೆ ಮತ್ತು ಚರ್ಮೋದ್ಯಮಕ್ಕಾಗಿ ಅವಲಂಬಿಸಿದ್ದಾರೆ. ಭಾರತದಲ್ಲೂ ಇದೇ ಸ್ಥಿತಿ ಇದೆ. ಹೀಗಿರುವಾಗ ಸರ್ಕಾರ ಗೋಹತ್ಯಾ ನಿಷೇಧ ಕಾಯಿದೆಯನ್ನು ತಂದು ಪಶುಪಾಲಕನು ಸಾಕಿದ ಪ್ರಾಣಿಗಳನ್ನು ಅವನ ಅನುಕೂಲಕ್ಕೆ ತಕ್ಕಂತೆ ಬಳಸುವ ಸ್ವಾಭಾವಿಕ ಹಕ್ಕನ್ನು ಕಸಿದುಕೊಳ್ಳುತ್ತಿಲ್ಲವೇ?

4.ಮಾಂಸಾಹಾರವು ಒಂದು ಹೇರಲ್ಪಟ್ಟ ಆಹಾರ ಪದ್ಧತಿಯಲ್ಲ. ಅದು ಆದಿಮಾನವನಿಂದಲೂ ಮನುಷ್ಯ ತಾನೇ ರೂಢಿಸಿಕೊಂಡಿರುವ ಪದ್ಧತಿ. ಶಿಲಾಯುಗದಿಂದಿಡಿದು ಇಂದಿನವರೆಗೂ ಮಾಂಸಾಹಾರವನ್ನು ಮನುಷ್ಯ ತ್ಯಜಿಸಿಲ್ಲ. ಈ ಪ್ರಕ್ರಿಯೆಯಲ್ಲಿ ಆಹಾರದ ಅಭಾವ ಕಾಡದಂತೆ ತಡೆಯಲು ಆತ ಕುರಿ, ಮೇಕೆ, ಹಂದಿ, ಕೋಳಿಯ ಜೊತೆಗೆ ಎತ್ತು, ಎಮ್ಮೆ, ಕೋಣ, ದನವನ್ನೂ ಆಹಾರದ ಮೂಲವಾಗಿಸಿಕೊಂಡಿದ್ದದ್ದು ಸಾಧಿತ ಸತ್ಯ. ಪ್ರಕೃತಿಯೇ ಮಾನವನಿಗೆ ರೂಢಿಸಿರುವ ಈ ಆಹಾರ ಪದ್ಧತಿಯಲ್ಲಿ ಸರ್ಕಾರಗಳು ಗೋಹತ್ಯಾ ನಿಷೇಧ ಕಾಯಿದೆಯ ಮುಖಾಂತರ ಹಸ್ತಕ್ಷೇಪ ಮಾಡುತ್ತಿಲ್ಲವೇ? ಮಾನವ ರೂಢಿಸಿಕೊಂಡ ಧಾರ್ಮಿಕ ನಂಬಿಕೆಗಳಿಗಾಗಿ ಪ್ರಕೃತಿ ರೂಢಿಸಿದ ಆಹಾರ ಪದ್ಧತಿಯನ್ನು ಅಲ್ಲಗಳೆಯುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದಿಲ್ಲವೇ? ಒಂದು ಜನವರ್ಗದ ನಂಬಿಕೆಗಳಿಗಾಗಿ ಇನ್ನೊಂದು ಜನವರ್ಗದ ಅಪಾಯಕರವಲ್ಲದ, ಮಾರಕವಲ್ಲದ ಆಹಾರ ಪದ್ಧತಿಯನ್ನು ನಿರ್ಬಂಧಿಸುವುದು ಸರ್ಕಾರದ ಪಕ್ಷಪಾತತನವಾಗುವುದಿಲ್ಲವೇ? ಪಕ್ಷಪಾತವನ್ನು ಸಂವಿಧಾನ ಮತ್ತು ಅದರ ಪ್ರಮುಖ ಮೂರು ಅಂಗಗಳು ಒಪ್ಪಿಕೊಳ್ಳುವವೇ?

5.ದೇಶೀ ತಳಿಗಳನ್ನು ಉಳಿಸುವುದೇ ಗೋಹತ್ಯಾ ನಿಷೇಧ ಕಾಯಿದೆಯ ಪ್ರಮುಖ ಉದ್ಧೇಶವಾಗಿದ್ದರೆ ಅದಕ್ಕಾಗಿ ರಕ್ಷಿತಾರಣ್ಯಗಳಿರುವಂತೆ, ತಳಿ ಸಂರಕ್ಷಣಾ ಘಟಕಗಳನ್ನು ಸ್ಥಾಪಿಸಿ ದೇಶೀ ತಳಿ ಜಾನುವಾರುಗಳನ್ನು ರಕ್ಷಿಸುವುದು ಸೂಕ್ತವೋ ಅಥವಾ ಗೋ ಹತ್ಯೆ ನಿಷೇಧಿಸುವುದು ಸೂಕ್ತವೋ?
ಪಶುಪಾಲಕರಿಗೆ ಮನವರಿಕೆ ಮಾಡಿಸುವ ಮತ್ತು ಉತ್ತೇಜನ ನೀಡುವ ಮೂಲಕ ದೇಶೀ ತಳಿಗಳನ್ನು ಉಳಿಸಿಕೊಳ್ಳಬಹುದೇ ವಿನಃ ಬಲವಂತದ ನಿಷೇಧಗಳನ್ನು ಹೇರುವ ಮೂಲಕವಲ್ಲ.

6.ರಾಜ್ಯ ಸರ್ಕಾರದ ಉದ್ಧೇಶ ಗೋವು ಸೇರಿದಂತೆ ಇತರ ಜಾನುವಾರಗಳನ್ನು ಆಹಾರವಾಗಿ ಸೇವಿಸುವುದನ್ನು ತಡೆಯುವುದೇ ಆಗಿದ್ದರೆ ಅದು ರಾಷ್ಟ್ರವ್ಯಾಪಿ ಅವ್ಯಾಹತವಾಗಿ ನಡೆಯುತ್ತಿರುವ ಗೋಮಾಂಸ ರಫ್ತನ್ನೂ ಸಹ ನಿಷೇಧಿಸಬೇಕಾಗುತ್ತದೆ. ರಾಜ್ಯದ ವ್ಯಾಪ್ತಿಯಲ್ಲಿ ಅಂತಹ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲವಾದರೆ ರಾಷ್ಟ್ರವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಂತಹ ಚಟುವಟಿಕೆಗಳಿಗೆ ತನ್ನ ವಿರೋಧ ಇರುವುದನ್ನು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಲ್ಲವೇ? ಮತ್ತು ರಾಜ್ಯದಿಂದ ಅಂತಹ ಗೋಮಾಂಸ ರಫ್ತು ಕಂಪನಿಗಳಿಗೆ ಯಾವುದೇ ವಿಧವಾದ ಸಹಕಾರ ದೊರೆಯದಂತೆ ತಡೆಯುವುದು, ಮತ್ತು ಆ ಸಂಸ್ಥೆಗಳಿಗೆ ರಾಜ್ಯದ ಜಾನುವಾರುಗಳು ಸಾಗಣೆಯಾಗದಂತೆ ತಡೆಯುವುದು ರಾಜ್ಯ ಸರ್ಕಾರದ ನೈತಿಕ ಹೊಣೆಗಾರಿಕೆಯಾಗುವುದಿಲ್ಲವೇ?
ಇಂತಹ ಯಾವುದನ್ನು ರಾಜ್ಯ ಸರ್ಕಾರಗಳು ಪಾಲಿಸುತ್ತಿವೆ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಜವಾಬ್ದಾರಿ ಸರ್ಕಾರಗಳ ಮೇಲಿದೆ.

7. ಬೆಲೆಯ ಬಗ್ಗೆ ಯೋಚಿಸುವುದಾದರೆ ಕುರಿ/ಮೇಕೆ ಮಾಂಸವು ಪ್ರಾದೇಶಿಕ ವ್ಯತ್ಯದೊಂದಿಗೆ 400 ರಿಂದ 800ರ ವರೆಗೆ ಲಭ್ಯವಿದ್ದರೆ ಗೋಮಾಂಸವು 180 ರಿಂದ 350 ರೂಪಾಯಿ ಬೆಲೆಯೊಳಗೆ ಲಭಿಸುತ್ತದೆ. ಬೆಲೆಯ ಕಾರಣಕ್ಕೇ ಅದೆಷ್ಟೋ ತಳವರ್ಗಗಳ ಜನರು, ಬಡವರು ಎಮ್ಮೆ ಮತ್ತು ದನದ ಮಾಂಸವನ್ನು ಅನಿವಾರ್ಯವಾಗಿ ತ್ಯಜಿಸಲಾರದವರಾಗಿದ್ದಾರೆ. ಅಂತಹವರ ಪೌಷ್ಟಿಕತೆಯ ಬಗ್ಗೆ ಸರ್ಕಾರಕ್ಕೆ ಕಾಳಜಿ ಮತ್ತು ಅವರ ಮಾಂಸಾಹಾರ ಸೇವಿಸುವ ಹಕ್ಕನ್ನು ರಕ್ಷಿಸುವ ಬದ್ಧತೆ ಇದ್ದರೆ ಮಾಂಸ ತುಟ್ಟಿ ಭತ್ಯೆಯನ್ನು ಭರಿಸಿಕೊಡಲು ಸರ್ಕಾರ ಸಿದ್ಧವಿರಬೇಕಾಗುತ್ತದೆ. ಈ ವಿಷಯವಾಗಿ ಸರ್ಕಾರ ತನ್ನ ನಿಲುವನ್ನು ಪ್ರಕಟಿಸಿಲ್ಲ.

8.ಅಂಗ ಊನವಾದ ಜಾನುವಾರುಗಳು, ಗೊಡ್ಡು ಎಮ್ಮೆ, ದನಗಳು, ಕೆಲಸಕ್ಕೆ ಅನುಪಯುಕ್ತವಾದ ಎತ್ತು, ಕೋಣಗಳನ್ನು ಮಾಂಸದಂಗಡಿಯವರಿಗೆ ಮಾರುವುದು ಕೃಷಿಕರು ಮತ್ತು ಪಶುಪಾಲಕರಿಗೆ ಸರ್ವೇಸಾಧಾರಣವಾದ ಪ್ರಕ್ರಿಯೆಯಾಗಿದೆ. ಅದರಿಂದ ಅವರು ಆದಾಯವನ್ನೂ ಗಳಿಸುತ್ತಿದ್ದಾರೆ. ಸರ್ಕಾರ ತನ್ನ ನೀತಿಗಳ ಮೂಲಕ ಜನರ ಈ ಆದಾಯದ ಮೂಲಕ್ಕೆ ಪೆಟ್ಟು ಕೊಡುವುದಷ್ಟೇ ಅಲ್ಲದೆ ಅನುಪಯುಕ್ತ ಜಾನುವಾರುಗಳನ್ನು ನೀವೇ ಸಾಕಿ ಎಂದು ಜನರಿಗೆ ಭಾರವಾಗುವಂತಹ ಬಿಟ್ಟಿ ಸಲಹೆಗಳನ್ನು ಕೊಡುವುದರೊಟ್ಟಿಗೆ ‘ನಿಮಗೆ ಸಾಕಲು ಸಾಧ್ಯವಿಲ್ಲವಾದರೆ ಗೋ ಶಾಲೆಗಳಿಗೆ ಬಿಡಿ, ರಾಜಕಾರಣಿಗಳಿಗೆ ಒಪ್ಪಿಸಿ’ ಎನ್ನುವ ಆದೇಶ ಬೇರೆ ಮಾಡುತ್ತಿದೆ. ಇದು ಸರ್ಕಾರದ ಬೇಜವಾಬ್ದಾರಿ ತನವನ್ನು ತೋರಿಸುತ್ತದೆ. ಇಂತಹ ಸಲಹೆಗಳು, ಆದೇಶಗಳ ಬದಲಿಗೆ ತನ್ನ ಕಾಯಿದೆಯಿಂದ ಜನರ ಆದಾಯದ ಮೂಲಕ್ಕಾದ ನಷ್ಟವನ್ನು ಸರ್ಕಾರ ಯಾವ ರೀತಿ ಭರಿಸಿಕೊಡಲಿದೆ ಅಥವಾ ಅದಕ್ಕೆ ಏನು ಪರ್ಯಾಯ ವ್ಯವಸ್ಥೆ ಮಾಡಿಕೊಡಲಿದೆ ಅನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಡವೇ?

9. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಧಾರ್ಮಿಕವಾಗಿ ಪರಿಣಾಮಗಳನ್ನುಂಟುಮಾಡುವ ಇಂತಹ ಕಾಯಿದೆಗಳನ್ನು ಚರ್ಚೆ ಇಲ್ಲದೆಯೇ, ಪ್ರಧಾನ ವಿರೋಧ ಪಕ್ಷವೊಂದರ ಅನುಪಸ್ಥಿತಿಯಲ್ಲಿ ಜಾರಿ ಮಾಡುವುದು ಒಂದು ವಿಧದಲ್ಲಿ ಹೇಡಿತನವೂ ಮತ್ತೊಂದು ವಿಧದಲ್ಲಿ ದರ್ಪವೂ, ಇನ್ನೊಂದು ವಿಧದಲ್ಲಿ ಮೂರ್ಖತನವೂ ಆಗಿರುತ್ತದೆ. ಕೃಷಿ ತಜ್ಞರು, ಪಶು ತಜ್ಞರು, ಸಾಮಾಜ ತಜ್ಞರು, ಆರ್ಥಿಕ ತಜ್ಞರುಗಳಾರ ಅಭಿಪ್ರಾಯ, ಸಲಹೆಗಳನ್ನೂ ಕೇಳದೇ ಕೇವಲ ಧಾರ್ಮಿಕ ವ್ಯಕ್ತಿಗಳ ಅಭಿಪ್ರಾಯಕ್ಕಾಗಿ ಇಂತಹ ಅನರ್ಥಕಾರಿ ಕಾಯಿದೆಗಳನ್ನು ತರುವುದು ಸರ್ಕಾರದ ಬೌದ್ದಿಕ ದಿವಾಳಿತನವನ್ನು ತೋರುತ್ತದೆ.

10. ತನ್ನ ಕಾಯಿದೆಯನ್ನು ಬಹುಪಾಲು ಜನರು ವಿರೋಧಿಸುತ್ತಿಲ್ಲ ಎಂದು ಸರ್ಕಾರ ಬಿಂಬಿಸಿಕೊಳ್ಳುವುದನ್ನು ಬಿಡಬೇಕು. ವಿರೋಧಿಸುತ್ತಿಲ್ಲ ಎಂದ ಮಾತ್ರಕ್ಕೆ ಬೆಂಬಲಿಸಿದ್ದಾರೆ ಎಂದು ಅದರ ಅರ್ಥವಲ್ಲ.
ಭಾರತದಂತಹ ಅನೇಕ ಜಾತಿಗಳಿರುವ ದೇಶದಲ್ಲಿ ಇಂತಹ ಯಾವುದೇ ಕಾಯಿದೆಯ ಪರ ಅಥವಾ ವಿರೋಧವಾಗಿ ಅಭಿಪ್ರಾಯ ವ್ಯಕ್ತಪಡಿಸಲು ಜನರಿಗೆ ಹಲವು ತೊಡಕುಗಳಿರುತ್ತವೆ. ವ್ಯಕ್ತಿಯೊಬ್ಬನ ಅಭಿಪ್ರಾಯಕ್ಕೆ ತನ್ನ ಸುತ್ತಲಿನ ಸಮಾಜ ಹೇಗೆ ಪ್ರತಿಕ್ರಿಯಿಸುವುದೋ ಅನ್ನುವ ಗೊಂದಲ ಅವನಲ್ಲಿರುತ್ತದೆ.

ಈಗ ಗೋಹತ್ಯಾ ನಿಷೇಧ ಕಾಯಿದೆಯನ್ನೇ ತೆಗೆದುಕೊಂಡರು, ರೈತನೊಬ್ಬ ಕಾಯಿದೆ ಪರವಾಗಿ ಮಾತನಾಡಿದರೆ ತನ್ನ ಆದಾಯಕ್ಕೆ ಕಂಟಕ, ವಿರೋಧವಾಗಿ ಮಾತನಾಡಿದರೆ ‘ಇವನು ಕದ್ದುಮುಚ್ಚಿ ಗೋಮಾಂಸ ಸೇವಿಸುವವನೋ?’ ಅನ್ನುವ ಗುಮಾನಿ ಅಕ್ಕಪಕ್ಕದವರಿಗೆ ಬಂದೀತೋ ಅನ್ನುವ ಆತಂಕ. ಇದೊಂದು ಉದಾಹರಣೆ ಅಷ್ಟೇ. ಇಂತಹ ಅನೇಕ ತೊಡಕುಗಳು ಜನರಿಗೆ ಇರುತ್ತವೆ.
ಜನರ ಇಂತಹ ಸಂದಿಗ್ಧತೆಗಳನ್ನೇ ಸರ್ಕಾರ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವ ಪ್ರವೃತ್ತಿ ಬಿಡಬೇಕು.

ಕೊನೆಯದಾಗಿ ಹೇಳುವುದಾದರೆ ‘ಗೋಹತ್ಯಾ ನಿಷೇಧ ಕಾಯಿದೆಯನ್ನು ವಿರೋಧಿಸವವರಿಗೆ ಗೋವಿನ ಬಗ್ಗೆ ಅನುಕಂಪ ಇಲ್ಲವೆಂದೇನೂ ಅಲ್ಲ. ಹೇಳಬೇಕೆಂದರೆ ಗೋಮಾಂಸ ಸೇವನೆ ಮಾಡುವವರಿಗೂ ಗೋವು ಮತ್ತು ಇತರ ಪ್ರಾಣಿಗಳ ಬಗ್ಗೆ ಅನುಕಂಪ ಇದ್ದೆ ಇರುತ್ತದೆ. ಅಷ್ಟೇ ಅಲ್ಲ, ತಾನು ಸಾಕುವ ಯಾವ ಪ್ರಾಣಿಯ ಬಗ್ಗೆಯೂ ಮನುಷ್ಯನಿಗೆ ಅನುಕಂಪ, ಪ್ರೀತಿ ಇರುತ್ತದೆ. ಆದರೆ ಆ ಭಾವನೆಗಳನ್ನು ಮೀರಿ ತನ್ನ ಅಗತ್ಯ ಪೂರೈಸಿಕೊಳ್ಳುವ ಸ್ವಭಾವ ಮನುಷ್ಯನಿಗೆ ಪ್ರಕೃತಿದತ್ತವಾಗಿ ರೂಢಿಯಾಗಿದೆ.

ಮೇಕೆ, ಕುರಿ, ಕೋಳಿಗಳ ಬಗ್ಗೆಗೆ ಮನುಷ್ಯನಿಗೆ ಯಾವ ಭಾವನೆಯೂ ಇರುವುದಿಲ್ಲ, ಎಮ್ಮೆ, ದನಗಳ ಬಗ್ಗೆ ಮಾತ್ರ ವಿಶೇಷ ಭಾವನೆ ಇರುತ್ತದೆ ಅನ್ನುವುದು ಮೂರ್ಖರ ವಾದವೂ ಮತ್ತು ಹಾಸ್ಯಾಸ್ಪದವೂ ಆಗಿರುತ್ತದೆ. ಕುರಿ, ಮೇಕೆಗಳ ವಧೆಗೆ ವಿರೋಧವಿರದೇ ಗೋಮಾತೆ ಎಂಬ ಭಾವನಾತ್ಮಕ ಭ್ರಮೆ ಸೃಷ್ಟಿಸಿ ಆಟವಾಡುವ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳುವುದು ಅತ್ಯಂತ ಅಸಹ್ಯಕರ ನಡವಳಿಕೆ.

ಹಿಂದೂ ಅರಸರುಗಳ ಕಾಲದಿಂದಲೂ, ಸಮಾಜದಲ್ಲಿ ಜಾತಿ ವ್ಯವಸ್ಥೆ ಅತ್ಯಂತ ಬಿಗಿಯಾಗಿದ್ದಾಗಲೂ, ಸಮಾಜದ ಮೇಲೆ ಪಟ್ಟಭದ್ರರ ಹಿಡಿತ ಗಟ್ಟಿಯಾಗಿದ್ದಾಗಲೂ ಇರದಿದ್ದ ಗೋಹತ್ಯೆಗೆ ವಿರೋಧ, ಗೋಮಾತೆಯ ಬಗೆಗಿನ ಪ್ರೇಮ, ವೈಜ್ಞಾನಿಕವಾಗಿ, ತಾಂತ್ರಿಕವಾಗಿ ಮತ್ತು ಬೌದ್ಧಿಕವಾಗಿ ಮುಂದುವರೆದಿರುವ ಈ ನವಯುಗದಲ್ಲಿ ಹೆಚ್ಚಾಗಿದ್ದೇಕೆಂದು ಅರ್ಥಮಾಡಿಕೊಳ್ಳಲಾಗದ ವಿಷಯವೇನಲ್ಲ. ಅದು ಪಟ್ಟಭದ್ರರ ಸ್ವಾರ್ಥ, ರಾಜಕಾರಣಿಗಳ ನೈತಿಕ ಅಧಃಪತನ ಮತ್ತು ಬಂಡವಾಳಶಾಹಿಗಳ ದುರಾಸೆಯ ಮಿಶ್ರ ಫಲ.

ಆಗ ಮಾಂಸದ ರಫ್ತಿನ ಪರಿಕಲ್ಪನೆ ಇರಲಿಲ್ಲ. ಈಗ ರಫ್ತಿಗೆ ವಿಫುಲ ಅವಕಾಶಗಳಿವೆ. ಆಗ ಗೋವಿನ ಹೆಸರಿನಿಂದ ಯಾವ ರಾಜಕೀಯವನ್ನೂ ಮಾಡಲು ಸಾಧ್ಯವಿರಲಿಲ್ಲ, ಈಗ ಗೋವು ಮತಗಳನ್ನು ತರುವ ಅಥವಾ ಕಳೆಯವ ಸಾಧನವಾಗಿದೆ. ಆಗ ಪಟ್ಟಭದ್ರರು ರಾಜರನ್ನು ಪ್ರಭಾವಿಸುತ್ತಿದ್ದರು, ಈಗ ತಮ್ಮ ಮಾತು ಕೇಳುವ ರಾಜಕಾರಣಿಗಳು ಬೇಕಿದೆ..

-ಸೋಮಪ್ರಕಾಶ್ ಆರ್ಯ, ಬೆಂಗಳೂರು


LEAVE A REPLY

Please enter your comment!
Please enter your name here