ಅಕ್ಷರ ಮಾಂತ್ರಿಕ, ಪತ್ರಕರ್ತ ರವಿ ಬೆಳಗೆರೆ ಇನ್ನಿಲ್ಲ

0
188

ಬೆಂಗಳೂರು ನ.13: ಎಂತವರನ್ನು ಓದುವಂತೆ ಮಾಡುವ ಮೋಹಕ ಬರವಣಿಗೆ ಶೈಲಿ, ಯುವ ಜನಾಂಗವನ್ನು ತಮ್ಮ ‘ಓ ಮನಸ್ಸೇ’   ಎಂಬ ಪಾಕ್ಷಿಕದಿಂದ ನಾಡಿನ ಅದೆಷ್ಟೋ ಓದುಗರ ಜೀವನಾಡಿಯಾಗಿದ್ದ ಅವರ ಬರವಣಿಗೆ ಯುವ ಮನಸ್ಸುಗಳಿಗೆ ಓದಿನ ಹಂಬಲ ಹುಟ್ಟುಹಾಕಿದ ಅಕ್ಷರ ಮಾಂತ್ರಿಕ ರವಿ ಬೆಳಗೆರೆ. ಬರಹಗಾರರಿಗೆ ಸ್ಪೂರ್ತಿಯಾಗಿದ್ದ ನಾಡಿನ ಖ್ಯಾತ ಪತ್ರಕರ್ತ, ಬರಹಗಾರ, ಕಾದಂಬರಿಕಾರ ರವಿ ಬೆಳಗೆರೆ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ. 62 ವರ್ಷದ ರವಿ ಬೆಳಗೆರೆಯವರಿಗೆ ಮಧ್ಯರಾತ್ರಿ ಹನ್ನೆರಡರ ಸುಮಾರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅದಾಗಲೇ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ.

Ravi Belagere

ಪದ್ಮನಾಭ ನಗರದ ತಮ್ಮ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗಲೇ ಬೆಳಗೆರೆಯವರಿಗೆ ಹೃದಯಾಘಾತವಾಗಿದ್ದು, ಅಲ್ಲಿನ ಸಿಬ್ಬಂದಿ ಕೂಡಲೇ ಅಪೋಲೋ ಆಸ್ಪತ್ರೆಗೆ ಅವರನ್ನು ದಾಖಲಿಸಿದರೂ ಬೆಳಗಿನ ಜಾವ 2.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಹಾಯ್ ಬೆಂಗಳೂರು ವಾರಪತ್ರಿಕೆ ಮೂಲಕ ಭಾರಿ ಖ್ಯಾತಿ ಗಳಿಸಿದ್ದ ರವಿ ಬೆಳಗೆರೆ, ಕನ್ನಡದ ಪ್ರಮುಖ ಬರಹಗಾರರ ಪೈಕಿ ಮೊದಲ ಸಾಲಿನಲ್ಲಿ ನಿಲ್ಲುವಂತವರಾಗಿದ್ದರು. ಪ್ರಾರ್ಥನಾ ಶಾಲೆ ಅವರ ಅದ್ಭುತ ಕೊಡುಗೆ. ಭೂಗತ ಲೋಕದಲ್ಲಿ ಅವರ ಬರಹ ಭಾರಿ ಪ್ರಸಿದ್ಧವಾಗಿತ್ತು. ಪ್ರತಿ ವಿಷಯದ ಕುರಿತು ಸಹ ತಮ್ಮದೇ ನಿಲುವನ್ನು ಪ್ರತಿಪಾದಿಸುತ್ತಿದ್ದರು. 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದ್ದ ಅವರು, ಬಳ್ಳಾರಿಯಲ್ಲಿ ಶಿಕ್ಷಣ ಮುಗಿಸಿದರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದರು. ಅಲ್ಪಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.

ಕನ್ನಡ ಸಾಹಿತಿ, ಚಿತ್ರಕಥೆ, ಬರಹಗಾರ, ಈ ಟಿವಿ ವಾಹಿನಿಯ ಜನಪ್ರಿಯ ಕ್ರೈಂ ಡೈರಿ ಕಾರ್ಯಕ್ರಮದ ನಿರೂಪಕರಾಗಿ ಹಾಗೂ ಜನಶ್ರೀ ವಾಹಿನಿಯ ಮುಖ್ಯಸ್ಥರಾಗಿ, ಕಾರ್ಯಕ್ರಮಗಳ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಮತ್ತು ಭಾಷಾಂತರಿಸಿರುವ ರವಿ ಬೆಳಗೆರೆ, ಭಾವನಾ ಪ್ರಕಾಶನ, ಭಾವನಾ ಆಡಿಯೋ ರೀಚ್ ಮತ್ತು ಪ್ರಾರ್ಥನಾ ಶಾಲೆಯ ಸಂಸ್ಥಾಪಕರಾಗಿದ್ದರು. ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಸಹ ಕೆಲಸ ಮಾಡಿದ್ದರು.ಓ ಮನಸೇ ಮೂಲಕ ಜನಪ್ರಿಯರಾಗಿದ್ದ ಇವರು, ಕಾದಂಬರಿ,ಅನುವಾದ, ಜೀವನ ಕಥನ ಸೇರಿದಂತೆ ಇನ್ನಿತರ ಬರಹಗಳನ್ನು ಬರೆದಿದ್ದ ಬೆಳಗೆರೆಯವರ ಪುಸ್ತಕಗಳು ಅಚ್ಚರಿಯ ರೀತಿಯಲ್ಲಿ ಮಾರಾಟವಾಗುತ್ತಿದ್ದವು.

ಇಂತಹ ಬರಹಗಾರನ ನಿಧನ ನಿಜಕ್ಕೂ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾಗದ ನಷ್ಟ. ಕನಸಿನ ಪ್ರಾರ್ಥನಾ ಶಾಲೆಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ತಿಳಿದುಬಂದಿದೆ. ಬೆಳಗೆರೆ ನಿಧನದಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಲಕ್ಷಾಂತರ ಅಭಿಮಾನಿಗಳು ಶೋಕಸಾಗರದಲ್ಲಿ ಮುಳುಗಿದ್ದಾರೆ.


LEAVE A REPLY

Please enter your comment!
Please enter your name here