ವಿಜಯಪುರ: ಬುಡಕಟ್ಟು ವೇಷ ಧರಿಸಿ ಪ್ರತಿಭಟನೆ

0
214

ವಿಜಯಪುರ: ತಳವಾರ ಮತ್ತು ಪರಿವಾರ ಎಸ್‍ಟಿ ಮೀಸಲಿಗೆ ಸಂಬಂಧಿಸಿದಂತೆ ಸರ್ಕಾರದ ವಿಳಂಬ ನೀತಿ ಖಂಡಿಸಿ ಇಂದು ತಳವಾರ ಹಾಗೂ ಪರಿವಾರ ಸಮುದಾಯದ ಸಾವಿರಾರು ಜನರು ಬುಡಕಟ್ಟು ವೇಷ ಧರಿಸಿ ಪ್ರತಿಭಟನೆ ಮಾಡಿ, ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ ಅವರಿಗೆ ಮನವಿ ಸಲ್ಲಿಸಿದರು.

ತಳವಾರ ಹಾಗೂ ಪರಿವಾರ ಎರಡೂ ಸಮುದಾಯದ ನಾಯಕರು ಇದೀಗ ಸಮುದಾಯದ ಸಾಂಪ್ರದಾಯಿಕ ಆಚರಣೆ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದು, ನಗರದ ಸಿಂದಗಿ ನಾಕಾದಿಂದ ಪ್ರಾರಂಭವಾದ ಪ್ರತಿಭಟನೆ ದರ್ಬಾರ ಶಾಲಾ ಮೈದಾನದಲ್ಲಿ ಅಂತ್ಯಗೊಂಡಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ, ಸರ್ಕಾರದ ಗಮನ ಸೆಳೆಯಲು ಮುಂದಾದರು.

ಜಿಲ್ಲೆಯ ಅನೇಕ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಹಮ್ಮಿಕೊಂಡಿದ್ದು, ಇಂದು ಜಿಲ್ಲೆಯಲ್ಲಿ ಸಾವಿರಾರು ಜನರು ಬೇವಿನ ಉಡುಗೆ, ದೊಣ್ಣೆ ಹಿಡಿದು ಹೋರಾಟದಲ್ಲಿ ಪಾಲ್ಗೊಂಡು, ವಿಶೇಷ ರೀತಿಯಲ್ಲಿ ಇಂದು ಪ್ರತಿಭಟನೆ ಕೈಗೊಂಡರು.
ಇದೇ ಸಂದರ್ಭದಲ್ಲಿ ಮಾತನಾಡಿದ ವಿಜಯಪುರ ಜಿಲ್ಲಾ ತಳವಾರ ಪರಿವಾರ ಹಿತರಕ್ಷಣ ಸಮಿತಿಯ ಅದ್ಯಕ್ಷ ಶಿವಾಜಿ ಮೆಟೆಗಾರ ಮಾತನಾಡಿ ತಳವಾರ ಮತ್ತು ಪರಿವಾರ ಎಂಬುದು ನಾಯಕ ಮತ್ತು ನಾಯಕಡ ಸಮುದಾಯದ ಪರ್ಯಾಯ ಪದ ಎಂದು ರಾಜ್ಯ ಪತ್ರದಲ್ಲಿ ಸ್ಪಷ್ಟವಾಗಿ ನಮೂದಿಸಲಾಗಿದೆ. ಆದರೆ, ರಾಜ್ಯ ಸರ್ಕಾರ ತಳವಾರ ಮತ್ತು ಪರಿವಾರ ಎಂಬುದು ಪ್ರತ್ಯೇಕ ಜಾತಿ ಎಂಬಂತೆ ಬಿಂಬಿಸುತ್ತಿದೆ. ರಾಜ್ಯದಲ್ಲಿ ತಳವಾರ ಎಂಬುದು ಒಂದೇ ಜಾತಿ. ಅದು ನಾಯಕ ಮತ್ತು ನಾಯಕಡ ಜಾತಿಯ ಮೂಲ ಎಂಬುವು ಕುಲಶಾಸ್ತ್ರೀಯ ಅಧ್ಯಯನ ಸಹ ಸ್ಪಷ್ಟವಾಗಿದೆ ಹೇಳಿದೆ. ಅದಾಗ್ಯೂ ಅನವಶ್ಯಕ ಗೊಂದಲ ಸೃಷ್ಟಿಸಿ ಮೀಸಲಾತಿಯಿಂದ ವಂಚಿತಗೊಳಿಸುತ್ತಿರುವುದು ತೀವ್ರ ಖಂಡನೀಯ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಹೋರಾಟ ರೂಪಿಸಲಾಗುತ್ತಿದ್ದು ಬರುವ ಅಧಿವೇಶನದ ಹೊತ್ತಿಗೆ ಹೋರಾಟ ರಾಜ್ಯವ್ಯಾಪಿ ವಿಸ್ತರಿಸಲಾಗುತ್ತಿದೆ ಎಂದು ಮನವಿ ಸಂದರ್ಭದಲ್ಲಿ ತಿಳಿಸಿದರು.

ಕಳೆದ ನಾಲ್ಕು ತಿಂಗಳಿಂದ ಸಮುದಾಯದವರು ಜಾತಿ ಪ್ರಮಾಣ ಪತ್ರಕ್ಕಾಗಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಶಾಲೆ-ಕಾಲೇಜ್ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದ್ದು ಅಧಿಕಾರಿಗಳು ಸ್ಪಷ್ಟಿಕರಣ ನೆಪದಲ್ಲಿ ಪ್ರಮಾಣ ಪತ್ರ ತಡೆಹಿಡಿದಿದ್ದಾರೆ. ಇದರಿಂದ ಸಾಮಾನ್ಯ ವರ್ಗದಡಿ ಪ್ರವೇಶ ಪಡೆಯುವ ಅನಿವಾರ್ಯತೆ ಎದುರಾಗಿದೆ. ಹೀಗಾಗಿ ಉಗ್ರ ಹೋರಾಟಕ್ಕೆ ಅಣಿಯಾಗುವ ಅನಿವಾರ್ಯತೆ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ತಮ್ಮ ಮನವಿಯನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಹಾಗೂ ತಮ್ಮ ಬೇಡಿಕೆಗೆ ಸ್ಪಂದಿಸುವುದಾಗಿ ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾದಿಕಾರಿ ಅನುಪಮ್ ಅಗರವಾರ ಅವರು ಇದ್ದರು.


 

LEAVE A REPLY

Please enter your comment!
Please enter your name here