ಹತ್ತಿಕ್ಕಲು ಹವಣಿಸಿದಷ್ಟು ಪ್ರಖರವಾಗುತ್ತಿರುವ ಟಿಪ್ಪು

0
373
ರವೀಂದ್ರ ಎನ್ ಎಸ್ - ಲೇಖಕರು

ಟಿಪ್ಪು ಈ ಹೆಸರಲ್ಲಿ ಅದೆಂಥ ಬೆಂಕಿ ಇದೆ‌ಯೋ ಗೊತ್ತಿಲ್ಲ ಯಾವ ಪಕ್ಷ ಅಧಿಕಾರಕ್ಕೆ ಬಂದರೂ ಈ ಹೆಸರಲ್ಲಿ ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳೊ ಕೆಲಸ ಮಾಡ್ತನೆ ಇವೆ. ಒಂದು ರಾಜಕೀಯ ಪಕ್ಷ ಅಧಿಕಾರಕ್ಕೆ ಬಂದಾಗ ಟಿಪ್ಪು ಜಯಂತಿ ಆಚರಣೆ ಶುರು ಮಾಡಿದ್ರೆ ಇನ್ನೊಂದು ಪಕ್ಷ ಅಧಿಕಾರಕ್ಕೆ ಬಂದಾಗ ಟಿಪ್ಪು ಜಯಂತಿಯನ್ನು ರದ್ದು ಗೊಳಿಸುತ್ತದೆ ಅಂತಿಮವಾಗಿ ಎರಡೂ ಪಕ್ಷಗಳ ಉದ್ದೇಶ ಒಂದೇ ಒಂದು ಟಿಪ್ಪುಗೆ ಜೈಕಾರ ಹಾಕಿ ಓಟು ತಗೊಳೋದು ಇನ್ನೊಂದು ಟಿಪ್ಪುವನ್ನು ನಿಂದಿಸಿ ಓಟು ತಗೊಳೋದು ನಿಜವಾಗಿಯೂ ರಾಜಕೀಯ ಪಕ್ಷಗಳಿಗೆ ಟಿಪ್ಪು ಒಂದು vote Bank ಆಗಿ ಹೋಗಿದೆ ಹಾಗಾದ್ರೆ ಟಿಪ್ಪು ಇವರಿಗೆ ಯಾಕೆ ಬೇಕು ? ಉತ್ತರ ತುಂಬ ಸಿಂಪಲ್ ರಾಜಕಾರಣಕ್ಕಾಗಿ.

ತನ್ನ ಜೀವನದುದ್ದಕ್ಕೂ ಯುದ್ದ ಭೂಮಿಯಲ್ಲೇ ಕಾಲ ಕಳೆದ ಟಿಪ್ಪು. ತನ್ನ ಪ್ರಜೆಗಳ ಅಭ್ಯುದಯಕ್ಕಾಗಿ ಕನ್ನಂಬಾಡಿ ಕನಸು ಕಂಡ. ರೈತರ ಹಿತಕ್ಕಾಗಿ ರೇಶ್ಮೆ ತಂದ. ರೈತರಿಗಾಗಿ ಬಡ್ಡಿ ರಹಿತ ಸಾಲ ಸೌಲಭ್ಯ ದೊರಕಿಸಿದ. ಭೂಮಾಲಿಕರ ಕೈಲಿದ್ದ ಸಾವಿರಾರು ಎಕರೆ ಭೂಮಿಯನ್ನು ಕಿತ್ತು ಕೃಷಿಕರಿಗೆ ಹಂಚಿದ ಟಿಪ್ಪು. ಆದರೆ ಇವತ್ತು ಅದೇ ಕೃಷಿಕರ ಮಕ್ಕಳು ಮರಿ ಮೊಮ್ಮಕ್ಕಳು ಟಿಪ್ಪುವನ್ನ ಹಿಂದೂ ಧರ್ಮ‌ ದ್ರೋಹಿಯಂತೆ ಕಾಣುತ್ತಿದ್ದಾರಂದರೆ ಇದಕ್ಕಿಂತ‌ ದುರಂತ ಇದೆಯೇ ? ಮೊಲೆಗಳ ಗಾತ್ರದ ಮೇಲೆ ತೆರಿಗೆ ವಸೂಲಿ ಮಾಡುತ್ತಿದ್ದ ನಂಬೂದರಿ ನಾಯರ್ ಗಳ‌ ಬೆಂಡೆತ್ತಿ ಮೇಲ್ವಸ್ತ್ರ ಇಲ್ಲದೇ ತಿರುಗಾಡಬೇಕಿದ್ದ ಶೂದ್ರ (SC ST ಎಲ್ಲ obc) ಹೆಣ್ಮಕ್ಳಿಗೆ ಸೆರಗು ಹೊದಿಸಿದ ಟಿಪ್ಪು ಬಲಾತ್ಕಾರಿ ಮತಾಂಧ ಕ್ರೂರಿ ಇವೇ ಮೊದಲಾದ ನಿಂದನೆಗಳಿಗೆ ತುತ್ತಾಗುತ್ತ ಇದ್ದಾನೆ ಟಿಪ್ಪು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡುತ್ತಿದ್ದ. ಜನಗಳನ್ನು ಇಸ್ಲಾಂ ಗೆ ಮತಾಂತರ ಮಾಡುತ್ತಿದ್ದ. ಮಹಿಳೆಯರ ಮೇಲೆ ಬಲಾತ್ಕಾರ ಮಾಡುತ್ತಿದ್ದ. ಮೂರು ಲಕ್ಷ ಕೊಡವರ ಹತ್ಯೆ ಮಾಡಿದ ಇವೇ ಮೊದಲಾದ ಆರೋಪಗಳನ್ನು ವ್ಯವಸ್ಥಿತವಾಗಿ ಟಿಪ್ಪು ಮೇಲೆ ಹೊರಿಸಲಾಗುತ್ತಿದೆ.

ಹಾಗಾದರೆ ಈ ಆರೋಪಗಳು ಎಲ್ಲ ಸತ್ಯವೇ ? ಒಂದೊಂದಾಗಿ ವಿಮರ್ಶೆ ಮಾಡೋಣ. ಟಿಪ್ಪು ಶ್ರೀರಂಗ ಪಟ್ಟಣವನ್ನು ಆಳಿದ್ದು 1782 ರಿಂದ 1799 ರ ವರೆಗೆ ಆತ ಈ 17 ವರ್ಷದ ಅವಧಿಯಲ್ಲಿ ಬ್ರಿಟಿಷರು, ಹೈದರಾಬಾದಿನ ನಿಜಾಮ, ಮರಾಠರು, ಮಲಬಾರಿನ ನಾಯರ್ ಗಳ ಕಿರುಕುಳಗಳನ್ನು ನಿರಂತರ ಎದುರಿಸುತ್ತಲೇ ಇದ್ದ ಆತ ತನ್ನ ಬದುಕಿನ ಬಹುಕಾಲ ಯುದ್ಧ ಭೂಮಿಯಲ್ಲೆ ಕಳೆದದ್ದು ಬಹುತೇಕ ಟಿಪ್ಪುವನ್ನು ವಿರೋಧಿಸುವವರಿಗೆ ತಿಳಿದಂತಿಲ್ಲ. ಟಿಪ್ಪು ದೇವಸ್ಥಾನಗಳನ್ನು ಒಡೆದು ಹಾಕುತ್ತಿದ್ದ ಆತ ಹಿಂದೂ ವಿರೋಧಿಯಾಗಿದ್ದ ಎಂಬ ಸುಳ್ಳು ಇತಿಹಾಸ ಸೃಷ್ಟಿಸುವವರಿಗೆ ಆತ ಶೃಂಗೆರಿ ಮಠಕ್ಕೆ ಅಪಾರ ಪ್ರಮಾಣದಲ್ಲಿ ಕಾಣಿಕೆಗಳನ್ನು ಕೊಟ್ಡಿದ್ದು. ನಂಜನಗೂಡು ತಾಲೂಕಿನ ಕಹಳೆ ಗ್ರಾಮದ ಲಕ್ಷ್ಮೀಕಾಂತ ದೇವಾಲಯಕ್ಕೆ ಬೆಳ್ಳಿ ಬಟ್ಟಲುಗಳು ಬೆಳ್ಳಿ ತಟ್ಟೆ ಕಾಣಿಕೆ ನೀಡಿದ್ದು, ಮೇಲುಕೋಟೆ ನಾರಾಯಣಸ್ವಾಮಿ ದೇವಸ್ಥಾನಕ್ಕೆ ಆಭರಣಗಳು ನಗಾರಿ 1785 ರಲ್ಲಿ ಹನ್ನೆರಡು ಆನೆಗಳನ್ನು ಕಾಣಿಕೆ ನೀಡಿದ್ದು, ನಂಜನಗೂಡಿನ ನಂಜುಂಡೇಶ್ವರನ ದೇವಸ್ಥಾನಕ್ಕೆ ಐದು ಅಮೂಲ್ಯ ರತ್ನದ ಹರಳುಗಳು ರತ್ನದ ಬಟ್ಟಲು ಗಳನ್ನು ನೀಡಿರುವ ಮಾಹಿತಿ ಲಭ್ಯವಿದೆ.

ಶೃಂಗೇರಿ ಶಾರದಾ ಪೀಠದ ಜಗದ್ಗುರುಗಳಿಗೆ ಕಾಲಕಾಲಕ್ಕೆ ಶಾರದಾಂಬೆಯ ಪ್ರಸಾದ ಮಂತ್ರಾಕ್ಷತೆಯನ್ನು ಕಳುಹಿಸಿ ಕೊಡುವಂತೆ ಪ್ರಾರ್ಥಿಸಿಕೊಂಡು ಕಾಲ ಕಾಲಕ್ಕೆ ಶಾರದಾ ಪೀಠಕ್ಕೆ ಕಾಣಿಕೆಗಳನ್ನು ಅರ್ಪಿಸುತ್ತಿದ್ದ ಟಿಪ್ಪು ಅದ್ಯಾವ ರೀತಿಯಲ್ಲಿ ಹಿಂದೂ ವಿರೋಧಿಯಾದನೋ ಗೊತ್ತಿಲ್ಲ, ದಾನ ದತ್ತಿಗಳನ್ನು ನೀಡುತ್ತಿದ್ದ ಟಿಪ್ಪು ಅದು ಹೇಗೆ ದೇವಸ್ಥಾನಗಳನ್ನು ಒಡೆದು ಹಾಕಿದನೋ ಕಂಡವರಿಗೇ ಗೊತ್ತು .

ಟಿಪ್ಪು ಧರಿಸುತ್ತಿದ್ದ ‘ರಾಮ್’ ಎಂದು ಬರೆದ ಉಂಗುರ

ಯಾವುದೇ ಒಬ್ಬ ರಾಜನ ಸೈನ್ಯ ಬೇರೆ ರಾಜನ ಮೇಲೆ ದಾಳಿ ಮಾಡಿದರೆ ಅಲ್ಲಿನ ದೇವಸ್ಥಾನ ಮಾತ್ರ ಅಲ್ಲ ಮನೆಗಳನ್ನು ಲೂಟಿ ಮಾಡುವುದು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅವರನ್ನು ಹೊತ್ತೊಯ್ಯುವುದು ಆ ಕಾಲಕ್ಕೆ ಎಲ್ಲ ರಾಜರುಗಳ ಸೈನ್ಯ ಮಾಡುವುದು ಸಾಮಾನ್ಯ ವಿಷಯವೇ ಆಗಿತ್ತು‌ ಅಷ್ಟೇ ಅಲ್ಲ ಅದು ಇವತ್ತಿಗೂ ಕೂಡ ಮುಂದುವರಿದಿದೆ , ಇವತ್ತೂ ಕೂಡ ಯಾವುದೇ ಪ್ರಾಂತ್ಯಕ್ಕೆ ಸೈನ್ಯ ನುಗ್ಗಿದರೆ ಅಲ್ಲಿನ ನಾಗರಿಕರ ಮೇಲೆ ಲೂಟಿ, ಹಿಂಸಾಚಾರ ಅತ್ಯಾಚಾರ ಮಾಡೇ ಮಾಡುತ್ತಾರೆ Indian Army ಕೂಡ ಈ ಆರೋಪದಿಂದ ಹೊರತಾಗಿಲ್ಲ. ಹೀಗಿದ್ದ ಮೇಲೆ ಒಬ್ಬ ಟಿಪ್ಪು ಮತ್ತು ಆತನ ಸೈನ್ಯ ಮಾತ್ರ ಲೂಟಿ, ಬಲಾತ್ಕಾರ ಮಾಡ್ತ ಇತ್ತು ಎನ್ನುವುದು ಅರ್ಥಹೀನ ಆರೋಪವಾಗುತ್ತದೆ. ಇನ್ನು ಟಿಪ್ಪು ಮೂರು ಲಕ್ಷ ಕೊಡವರ ಹತ್ಯೆ ಮಾಡಿದ ಎಂಬ ಶುದ್ದ ಸುಳ್ಳುಗಳನ್ನು ಹರಿಬಿಡುವ ಅವಿವೇಕಿ ಜನಗಳಿಗೆ ಬಹುಶಃ ಈ ಅಂಕಿ ಅಂಶಗಳು ಗೊತ್ತಿರಲಿಕ್ಕಿಲ್ಲ.

1871 ರ ಜನಗಣತಿಯ ಮಾಹಿತಿ ಪ್ರಕಾರ ಕೊಡಗಿನ ಜನಸಂಖ್ಯೆ ಕೇವಲ 168312 ಒಟ್ಟು ಜನಸಂಖ್ಯೆ ಒಂದು ಲಕ್ಷ ಅರವತ್ತೆಂಟು ಸಾವಿರ ಮುನ್ನೂರ ಹನ್ನೆರಡು ಇರುವಾಗ ( ಟಿಪ್ಪು ಮರಣದ ನಂತರ) ಅದು ಹೇಗೆ ಮೂರು ಲಕ್ಷ ಜನಗಳನ್ನು ಹತ್ಯೆ ಮಾಡಲು ಸಾಧ್ಯ ? ಮೂರು ಲಕ್ಷ ಜನಗಳ ಹತ್ಯೆ ಮಾಡಿದ್ದು ನಿಜ ಆಗಿದ್ದರೆ ಆಗ ಕೊಡಗಿನಂಥ ಚಿಕ್ಕ ಪ್ರದೇಶದಲ್ಲಿ ಇದ್ದ ಜನ ಸಂಖ್ಯೆ ಎಷ್ಟು ? ಇದೇ Calculation ಟಿಪ್ಪು ಆಳ್ವಿಕೆಯ ಇತರ ಪ್ರದೇಶಗಳಲ್ಲಿ ಹಾಕಿ ಯೋಚನೆ ಮಾಡಿ. ಇಲ್ಲಿ ಟಿಪ್ಪು ಕೊಡವರನ್ನು ಹತ್ಯೆ ಮಾಡಿಯೇ ಇಲ್ಲ ಅಂತ ಹೇಳಲ್ಲ ಟಿಪ್ಪು ಜೊತೆಗೆ ನಡೆದ ಕಾಳಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಕೊಡವರ ಹತ್ಯೆಯಾಗಿದ್ದು ನಿಜ. ಆದರೆ ಅದು ಸಾಮ್ರಾಜ್ಯ ವಿಸ್ತಾರಕ್ಕಾಗಿ ನಡೆಸಿದ ಯುದ್ಧ ಅಲ್ಲ. ಕೇರಳದಿಂದ ಶ್ರೀರಂಗಪಟ್ಟಣಕ್ಕೆ ಬ್ರಿಟಿಷ್ ಸೈನ್ಯ ಸಾಗಿಸಲು ಕೊಡಗಿನ ರಾಜರು ಅವಕಾಶ ಮಾಡಿಕೊಟ್ಟಿದ್ದರು ಎನ್ನುವ ಕಾರಣಕ್ಕೆ ಟಿಪ್ಪು ಕೊಡಗಿನ ರಾಜರ ಮೇಲೆ ದಂಡೆತ್ತಿ ಬಂದಿದ್ದು.

ಅವತ್ತು ಬ್ರಿಟಿಷರ ಸೈನ್ಯಕ್ಕೆ ಸ್ಥಳಾವಕಾಶ ಕೊಟ್ಟ ಜಾಗಕ್ಕೆ ಆ ನೆನಪಿಗಾಗಿ ಇಟ್ಟ ಹೆಸರು ‘ವಿರಾಜಪೇಟೆ’. ಇನ್ನು ಟಿಪ್ಪು ಮಾತ್ರ ಕೊಡವರ ಹತ್ಯೆ ಮಾಡಿದ ಎನ್ನುವ ಜನಗಳ ಗಮನಕ್ಕೆ ಇನ್ನೊಂದು ಮಾಹಿತಿ ಕೊಡಲೇಬೇಕು , ಕೊಡಗನ್ನು ಆಳುತ್ತಿದ್ದ ಹಾಲೇರಿ ಅರಸರು ಕೊಡವರ ಮೇಲೆ ಅತೀ ಹೆಚ್ಚು ದೌರ್ಜನ್ಯ ಎಸಗಿರುವುದು ಇತಿಹಾಸದಲ್ಲಿ ದಾಖಲಿದೆ. ಎರಡನೇ ದೊಡ್ಡವೀರ ರಾಜ 5000 ಕೊಡವರನ್ನು ಕೊಂದು ಹಾಕಿದ ನಂತರ ಪಟ್ಟಕ್ಕೆರಿದ ಲಿಂಗರಾಜ (1811-20) ಎರಡುಸಾವಿರ ಕೊಡವರ ಹತ್ಯೆ ಮಾಡಿದ ನಂತರ ಅತೀ ಕ್ರೂರಿಯಾಗಿದ್ದ ಚಿಕವೀರರಾಜ ಮೂರುಸಾವಿರ ಕೊಡವರನ್ನು ಕೊಂದು ಹಾಕಿದ. ಈ ಹತ್ಯೆಗಳ ಬಗ್ಗೆ ಮಾತನಾಡದೇ ಕೇವಲ ಟಿಪ್ಪು ಬಗ್ಗೆ ಆರೋಪಗಳನ್ನು ಮಾಡೋದು ಎಷ್ಟು ಸರಿ ?

ಇನ್ನು ಟಿಪ್ಪು ಬಲವಂತದ ಮತಾಂತರ ಮಾಡುತ್ತಿದ್ದ ಎನ್ನುವ ಆರೋಪದ ಬಗ್ಗೆ ಹೇಳಬೇಕು ಆತ ಒಬ್ಬ ರಾಜನಾಗಿದ್ದ ಆತನಿಗೆ ತನ್ನ ಧರ್ಮದ ಮೇಲೆ ಅಭಿಮಾನ ಇತ್ತು ನಿಜ ಹಾಗೇ ತನ್ನ ಧರ್ಮ ಹರಡಬೇಕು ಎನ್ನುವ ಉದ್ದೇಶದಿಂದ ಮತಾಂತರಕ್ಕೆ ಅವಕಾಶ ಕೊಟ್ಟಿರಬಹುದು ಮತಾಂತರ ಆಗಿಯೇ ಇಲ್ಲ ಎಂದು ತಳ್ಳಿ ಹಾಕಲು ಸಾಧ್ಯ ಇಲ್ಲ, ಸಮ್ರಾಟ್ ಅಶೋಕನ ಕಾಲದಿಂದ ಬೌದ್ಧ, ಜೈನ ರಾಜರುಗಳು ತಮ್ಮ ತಮ್ಮ ಧರ್ಮಕ್ಕೆ ಒತ್ತು ಕೊಟ್ಟು ಮತಾಂತರ ಮಾಡಿಸಿದ್ದು ಇತಿಹಾಸದಲ್ಲಿ ಇದೆ ಹಾಗೇ ಟಿಪ್ಪು ಕೂಡ ಮಾಡಿದ್ದರಲ್ಲಿ ತಪ್ಪೆನಿದೆ ? ಆದರೆ ಆತ ಲಕ್ಷಾಂತರ ಜನಗಳನ್ನು ಬಲವಂತದಿಂದ ಮತಾಂತರ ಮಾಡಿದ ಎನ್ನುವುದು ತಪ್ಪಾಗುತ್ತೆ (ಮಂಗಳೂರಿನ ಕ್ರಿಶ್ಚಿಯನ್ನರ ವಿಷಯ ಹೊರತು ಪಡಿಸಿ) ಕೊಡಗಿನ ಉದಾಹರಣೆಯನ್ನೇ ತೆಗೆದುಕೊಳ್ಳಿ ಕೊಡಗಿನ (1871 census ಪ್ರಕಾರ) ಒಟ್ಟು ಜನಸಂಖ್ಯೆ 168312 ಅದರಲ್ಲಿ ಹಿಂದುಗಳ ಸಂಖ್ಯೆ 154474 . ಕೇವಲ 11304 ಮುಸಲ್ಮಾನರು ಮತ್ತು 2410 ಕ್ರಿಶ್ಚಿಯನ್ನರು 112 ಜೈನರು. ಟಿಪ್ಪು ಲಕ್ಷಾಂತರ ಜನಗಳನ್ನು ಮತಾಂತರ ಮಾಡಿದ ಮುಸಲ್ಮಾನರು ಎಲ್ಲಿ ಹೋದರು ?

ಟಿಪ್ಪು ಮೇಲಿರುವ ಇನ್ನೊಂದು ಆರೋಪ ಎಂದರೆ ಆತ ಮಹಿಳೆಯರ ಮೇಲೆ ಬಲಾತ್ಕಾರ ಮಾಡುತ್ತಿದ್ದ, ಎಂಥ ಕೀಳು ಮಟ್ಟದ ಆರೋಪ ಇದು !! ಆತ ಒಬ್ಬ ರಾಜ ತನಗೆ ಬೇಕಾದ ದೇಶದಿಂದ ತನ್ನ ಅರಮನೆಗೆ ಹೆಂಗಸರನ್ನು ತಂದಿಟ್ಟು ಅರಮನೆಯಲ್ಲಿ ಇರಿಸಿಕೊಳ್ಳುವ ಶಕ್ತಿ ಆತನಲ್ಲಿತ್ತು ಅದೆಲ್ಲ ಬಿಟ್ಟು ಒಬ್ಬ ರಾಜ ಕಂಡ ಕಂಡ ಹೆಂಗಸರನ್ನ ಬಲಾತ್ಕಾರ ಮಾಡುತ್ತ ಹೋಗೋಕೆ ಸಾಧ್ಯವಿದೆಯೇ ? ಮೊದಲೇ ಹೇಳಿದ ಹಾಗೆ ಆತ ತನ್ನ 17 ವರ್ಷಗಳ ಅವಧಿಯಲ್ಲಿ ಬಹುತೇಕ ಸಮಯ ಯುದ್ಧ ಭೂಮಿಯಲ್ಲಿಯೇ ಕಳೆದ. ತನ್ನ ಅರಮನೆಯಲ್ಲಿ ಹೆಂಡತಿ ಮಕ್ಕಳ ಜೊತೆ ಕಾಲ ಕಳೆಯೋಕಾಗದಷ್ಟು Busy ಆಗಿದ್ದ ಒಬ್ಬ ರಾಜ ಬಲಾತ್ಕಾರ ಮಾಡ್ತ ಹೋಗ್ತಾನ ? ಎಂಥ ಕುಚೋದ್ಯ.

ಇನ್ನು ಟಿಪ್ಪುವನ್ನು ಒಬ್ಬ ಹೇಡಿ ಆತ ಹುಲಿ ಅಲ್ಲ ಇಲಿ ಆತ ಪ್ರಾಣ ಭಯದಿಂದ ಮಕ್ಕಳನ್ನು ಒತ್ತೆ ಇಟ್ಟ ಎಂದು ಹಿಯಾಳಿಸಿ ಪಾರಿತೋಷಕ ಪಡೆದುಕೊಳ್ಳುವ ವ್ಯಕ್ತಿಗಳ ಗಮನಕ್ಕೆ ಇರಲಿ ಟಿಪ್ಪು ಮಾಡಿದ್ದು ನಾಲ್ಕು ಆಂಗ್ಲೋ ಮೈಸೂರು ಯುದ್ಧಗಳ ಜೊತೆ ಲೆಕ್ಕವಿಲ್ಲದಷ್ಟು ಕದನಗಳು ಇತಿಹಾಸದಲ್ಲಿ ದಾಖಲಿವೆ. ಅವಷ್ಟೇ ಸಾಕು ಟಿಪ್ಪು ಪರಾಕ್ರಮಿಯೋ ಹೇಡಿಯೋ ಅಂತ ತಿಳಿದುಕೊಳ್ಳುವುದಕ್ಕೆ ಟಿಪ್ಪುವನ್ನು ಎದುರಿಸಿದವರಿಗೆ ಗೊತ್ತು ಟಿಪ್ಪು ಇಲಿಯೋ ಹುಲಿಯೋ ಎನ್ನುವುದು, ಒಬ್ಬ ರಾಜ ಯುದ್ಧ ನಷ್ಟ ಭರ್ತಿಗೆ ಹಣ ಇಲ್ಲದೆ ತನ್ನ ಮಕ್ಕಳನ್ನು ಒತ್ತೆ ಇಟ್ಟರೂ ಸಹ ತನ್ನ ರಾಜ್ಯದಲ್ಲಿ ಸರಾಯಿ ಮಾರಾಟ ಮತ್ತು ವೆಶ್ಯಾವಾಟಿಕೆ. ಜೂಜು ಮುಂತಾದ ಸಮಾಜಕ್ಕೆ ಮಾರಕವಾಗಿರುವ ವ್ಯವಹಾರಗಳಿಗೆ ಅವಕಾಶ ನೀಡಿದ್ದಲ್ಲಿ ಸಾಕಷ್ಟು ಆದಾಯ ಪಡೆದುಕೊಳ್ಳಲು ಅವಕಾಶ ಇತ್ತು ಆದರೆ ಟಿಪ್ಪು ಅವುಗಳಿಗೆ ಅವಕಾಶ ನೀಡದೇ ಇದ್ದಿದ್ದು ಆತ ತನ್ನ ಮಕ್ಕಳಿಗಿಂತ ಪ್ರಜೆಗಳ ಬಗ್ಗೆ ಎಷ್ಟು ಕಾಳಜಿ ಹೊಂದಿದ್ದ ಎನ್ನುವುದು ಅರ್ಥವಾಗುತ್ತದೆ.

ಇಂತಹ ಒಬ್ಬ ರಾಜನನ್ನು ಕೇವಲ ಮುಸಲ್ಮಾನ ಎನ್ನುವ ಕಾರಣಕ್ಕೆ ದೇಶ ದ್ರೋಹಿ ಮತಾಂಧ ಎನ್ನುವಂತೆ ಸುಳ್ಳುಗಳನ್ನು ಸೃಷ್ಟಿಸಿ ನೈಜ ಇತಿಹಾಸಕ್ಕೆ ಕಳಂಕ ಅಂಟಿಸಿದ್ದು ಕೆಲ ಬ್ರಿಟಿಷ್ ಲೇಖಕರು ಜೊತೆಗೆ ಧರ್ಮದ ಅಫೀಮು ತಿಂದ ಕೆಲ ಭಾರತೀಯ ಲೇಖಕರು, ಆದರೆ ಸತ್ಯ ಯಾವತ್ತೂ ಸೂರ್ಯ ಚಂದ್ರರ ಹಾಗೆ ಅದನ್ನು ಬಹಳ ಕಾಲ ಹಿಡಿದು ಇಡಲು ಸಾಧ್ಯಇಲ್ಲ ಒಂದಲ್ಲ ಒಂದು ದಿವಸ ಆಚೆ ಬಂದೇ ಬರುತ್ತದೆ. ಇವತ್ತು ಸರ್ಕಾರಗಳು ಧರ್ಮಾಂಧ ವ್ಯಕ್ತಿಗಳು ಟಿಪ್ಪುವನ್ನು ಎಷ್ಟೇ ತಿರಸ್ಕರಿಸಿದರೂ ಪಠ್ಯ ಪುಸ್ತಕಗಳಿಂದ ಕಿತ್ತು ಹಾಕಿದರೂ ಸಂವಿಧಾನದ ಪುಟಗಳಲ್ಲಿರುವ ಟಿಪ್ಪುವನ್ನು ಕಿತ್ತಿ ಹಾಕಲು ಸಾಧ್ಯವೆ ? ಭಾರತದ ಸಂವಿಧಾನ ಟಿಪ್ಪುವಿಗೆ ಅಂತಹ ಗೌರವ ನೀಡಿದೆ. ಸಂವಿಧಾನ ಮಾತ್ರವಲ್ಲ ಯಾವ ಬ್ರಿಟಿಷ್ ರಿಗೆ ಟಿಪ್ಪು ಸಿಂಹ ಸ್ವಪ್ನವಾಗಿ ಕಾಡಿದ್ದನೋ ಅದೇ ಬ್ರಿಟೀಷರು ಟಿಪ್ಪುವಿನ ಶಸ್ತ್ರಾಸ್ತ್ರಗಳನ್ನಿಟ್ಟು ಮಾಡಿರುವ Museum ಅನ್ನು ಕಿತ್ತು ಹಾಕಲು ಸಾಧ್ಯವೇ ?

ಟಿಪ್ಪುವನ್ನು ತಮ್ಮ ಮೊದಲ ಮತ್ತು ಏಕೈಕ ವೈರಿ ಎಂದುಕೊಂಡಿದ್ದ ಅದೇ ಬ್ರಿಟೀಷರು ತಮ್ಮದೇ ನೆಲ Birmingham ನಲ್ಲಿ ಟಿಪ್ಪು ಹೆಸರಿನ ಭವ್ಯವಾದ Restaurant ಒಂದನ್ನು ಆರಂಭಿಸಿದ್ದಾರೆಂದರೆ ಅದಕ್ಕೆ ಕಾರಣ ಆತನ ಶೌರ್ಯ ಸ್ವಾಭಿಮಾನವೇ ಹೊರತು ಆತನ ಹೇಡಿತನ ಅಲ್ಲ‌ ಇದಿಷ್ಟೇ ಅಲ್ಲ ಬ್ರಿಟೀಷರು ಟಿಪ್ಪುವಿಗೆ ಇನ್ನೂ ಹೆಚ್ಚಿನ ಗೌರವ ಸಲ್ಲಿಸಿದ್ದಾರೆ ಜಗತ್ತಿನ ಅತೀ ದುಬಾರಿ ಕಾರುಗಳ ತಯಾರಕರಾದ ಬ್ರಿಟನ್ ನ ರೋಲ್ಸ್ ರಾಯ್ಸ್ ಕಂಪನಿ ತನ್ನ special addition ಕಾರ್ ಒಂದಕ್ಕೆ ‘ಟಿಪ್ಪು’ ಎಂದು ಹೆಸರು ನೀಡಿದ್ದಾರೆ ಎಂದರೆ ಅದು ಬರೀ ಮೈಸೂರಿನ ಹೆಮ್ಮೆಯಲ್ಲ ಭಾರತದ ಹೆಮ್ಮೆ.

ಇವಿಷ್ಟು ಸಾಕಲ್ಲವೇ ಟಿಪ್ಪು ಸ್ವಾಭಿಮಾನಿ, ಪರಾಕ್ರಮಿಯೋ ಇಲ್ಲ ರಣ ಹೇಡಿಯೋ ಎನ್ನುವುದನ್ನು ತಿಳಿದುಕೊಳ್ಳಲು. ಯಾಕೆಂದರೆ ಯಾರೇ ಆಗಲಿ ತಮ್ಮ ಮನೆಗಳಿಗೆ, ಹೋಟಲ್ ಗಳಿಗೆ, ಮಕ್ಕಳಿಗೆ ವೀರ ಪರಾಕ್ರಮಿಗಳ ಹೆಸರಿಡುತ್ತಾರೆ ಹೊರತು ಹೇಡಿಗಳ ಹೆಸರನ್ನು ಯಾವ ಕಾಲಕ್ಕೂ ಇಡಲ್ಲ ಹಾಗೇ ಸತ್ತ ಮೆಲೂ ಬೆಲೆ ಇರೋದು ಹುಲಿಗಷ್ಟೇ ಹೊರತು ನಾಯಿ ನರಿಗಳಿಗಲ್ಲ. ನಮ್ಮದೇ ನೆಲದ ಕೆಲವು ಧರ್ಮಾಂಧರ ಕಣ್ಣಿಗೆ ಟಿಪ್ಪು ಹೇಗೆ ಕಾಣುತ್ತಾನೆ ಅನ್ನೊದಕ್ಕಿಂತ ಆತ ಸತ್ತ ಮೇಲೆ ತನ್ನ ವೈರಿಗಳ ಕಣ್ಣಲ್ಲಿ ಹುಲಿ ಯಾಗಿ ಕಾಣುತ್ತಿದ್ದಾನಲ್ಲ ಅದೇ ನಿಜವಾದ ಇತಿಹಾಸ.

ಕೊನೆಯದಾಗಿ ಟಿಪ್ಪುವನ್ನು ಮುಸಲ್ಮಾನ ಎನ್ನುವ ಕಾರಣಕ್ಕೆ ದ್ವೇಷ ಮಾಡುವವರು ಆತ ಮುಸಲ್ಮಾನ ಎನ್ನುವ ಕಾರಣಕ್ಕೆ ತಲೆ ಮೇಲೆ ಹೊತ್ಕೊಳ್ಳುವವರು ಇಬ್ಬರೂ ಅವಿವೇಕಿಗಳೇ. ಟಿಪ್ಪು ಒಬ್ಬ ಇತಿಹಾಸ ಪುರುಷ ಅಷ್ಟೇ, ಯಾವುದೇ ಇತಿಹಾಸ ತಗೊಂಡ್ರೂ ಅಲ್ಲಿ ಓದುಗರಿಗೆ ಸಿಗೋದು ರಾಜಪ್ರಭುತ್ವ, ಅಲ್ಲಿ ಕತ್ತಿ, ಕಠಾರಿಗಳದೇ ಪ್ರಾಭಲ್ಯ ತೋಳ್ಬಲ ಕಾದಾಟದ ರಕ್ತ ಸಿಕ್ತ ಅಧ್ಯಾಯ, ಅಂಥ ಇತಿಹಾಸದ ಪ್ರತಿ ಪುಟಕ್ಕೂ ರಕ್ತದ ಕಲೆ ಅಂಟಿಕೊಂಡೇ ಇರುತ್ತೆ ಪ್ರತಿ ಪುಟಗಳನ್ನು ತೆರೆದಾಗಲೂ. ಹೆಣ್ಣಿನ ಚೀತ್ಕಾರ, ಚಿಕ್ಕ ಮಕ್ಕಳ ಆಕ್ರಂದನ, ನೆತ್ತರಿನ ಕಮಟು ವಾಸನೆ ಇವೆಲ್ಲ ಓದುಗನ ಗಮನಕ್ಕೆ ಬಂದೆ ಬರುತ್ತೆ ಯಾಕಂದ್ರೆ ಅಲ್ಲಿ ಅಣ್ಣ ತಮ್ಮನನ್ನು, ಮಗ ತಂದೆಯನ್ನು ಕೊಂದು ಗದ್ದುಗೆ ಏರಿದ ಚರಿತ್ರೆಗಳಿವೆ ಎದುರು ನಿಂತವರನ್ನು ತರಿದು ಹಾಕಿದ ನಿದರ್ಶನಗಳಿವೆ, ಅವುಗಳೆಲ್ಲ ಈಗ ಇತಿಹಾಸದ ಪುಟಗಳನ್ನು ಸೇರಿ ಹೋಗಿವೆ ಈಗ ಅವುಗಳನ್ನು ಬದಲಾಯಿಸುವುದು ಅಸಾಧ್ಯ, ಅವು ಹೇಗಿವೆಯೋ ಹಾಗೇ ಓದ್ಕೊಂಡು ಹೋಗ್ಬೇಕೇ ಹೊರತು ಅದನ್ನು ತಿರುಚುವ ಕೆಲಸ ಮಾಡಬಾರದು ಹಾಗೊಂದು ವೇಳೆ ಯಾರೇ ಅಂಥ ಕೆಲಸ ಮಾಡಿದರೂ ಅದು ಇತಿಹಾಸಕ್ಕೆ ಮಾತ್ರ ಮಾಡುವ ದ್ರೋಹವಲ್ಲ ಮುಂದಿನ ಪೀಳಿಗೆಗೂ ಮಾಡುವ ದ್ರೋಹ.

ರವೀಂದ್ರ ಎನ್ ಎಸ್ – ಲೇಖಕರು


ambedkar image

LEAVE A REPLY

Please enter your comment!
Please enter your name here