ವಿಜಯಪುರ: 12 ಕೋಟಿ 7 ಲಕ್ಷ ರೂಗಳ ಪ್ರೋತ್ಸಾಹಧನ ವಿತರಣೆ -ಸಚಿವ ಎಸ್.ಟಿ ಸೋಮಶೇಖರ

0
185

ವಿಜಯಪುರ ಜೂನ್ 26: ಕೋವಿಡ್-19 ಸಾಂಕ್ರಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಕೋವಿಡ್ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸರ್ಕಾರದಿಂದ ಪ್ರೋತ್ಸಾಹಧನ ವಿತರಿಸಲಾಗುತ್ತಿದ್ದು, ಅದರ ಜೊತೆಗೆ ಸಹಕಾರಿ ಇಲಾಖೆಯಿಂದ ಮತಷ್ಟು ನೆರವು ನೀಡುವ ನಿಟ್ಟಿನಲ್ಲಿ ರಾಜ್ಯದ್ಯಂತ 12 ಕೋಟಿ 2 ಲಕ್ಷ ರೂಗಳನ್ನು ಪ್ರೋತ್ಸಾಹಧನ ರೂಪದಲ್ಲಿ ನೀಡಲಾಗುತ್ತಿದೆ ಎಂದು ಸಹಕಾರಿ ಸಚಿವ ಎಸ್.ಟಿ ಸೋಮಶೇಖರ ಅವರು ಹೇಳಿದರು.

ನಗರದ ಡಿ.ಸಿ.ಸಿ ಬ್ಯಾಂಕ್ ಆವರಣದಲ್ಲಿ ಸಹಕಾರಿ ಇಲಾಖೆ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್‍ಗಳ ಸಂಯುಕ್ತಾಶ್ರಯದಲ್ಲಿ ನಡೆದ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಪ್ರೋತ್ಸಾಹಧನ ವಿತರಿಸಿ ಮಾತನಾಡಿದ ಅವರು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ವಾರಿಯರ್ಸ್‍ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ಸರ್ಕಾರ ಅವರಿಗೆ ಪ್ರೋತ್ಸಾಹಧನ ವಿತರಣೆ ಮಾಡುತ್ತಿದೆ, ಮಾನ್ಯ ಮುಖ್ಯಮಂತ್ರಿಗಳ ಸಲಹೆ ಮೇರೆಗೆ ಸಹಕಾರ ಇಲಾಖೆಯ ಸಹಯೋಗದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಲಾಭದಾಯಕ ಸಹಕಾರಿ ಬ್ಯಾಂಕ್‍ಗಳಿಂದ ಸಹಾಯಧನ ಪಡೆದು ರಾಜ್ಯಾದ್ಯಂತ ಆಶಾ ಕಾರ್ಯಕರ್ತೆಯರಿಗೆ ವಿತರಿಸಲಾಗುತ್ತಿದೆ ಎಂದರು.

ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ಸಹಕಾರಿ ಇಲಾಖೆಯಿಂದ ಸೂಮಾರು 52 ಕೋಟಿ ರೂಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಲಾಗಿದ್ದು ಇದರ ಜೊತೆಗೆ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನವಾಗಿ ಲಾಭದಲ್ಲಿರುವ ಬ್ಯಾಂಕುಗಳ ಸಹಾಯದಿಂದ ಸುಮಾರು 12 ಕೋಟಿ 7 ಲಕ್ಷರೂಗಳನ್ನು ನೀಡಲಾಗಿದೆ. ವಿಜಯಪುರದ ಡಿ.ಸಿ.ಸಿ ಬ್ಯಾಂಕ್ ಇಂದ ಸುಮಾರು 15 ಲಕ್ಷ ರೂಗಳನ್ನು ಸಹಾಯವನ್ನು ಮಾಡಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕೋವಿಡ್ ಸಂಕಷ್ಟದ ಪರಿಸ್ಥಿಯಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಸಹಕಾರ ಕ್ಷೇತ್ರದಲ್ಲಿ ಲಾಭಾಂಶ ಪಡೆಯುತ್ತಿರುವ ಬ್ಯಾಂಕುಗಳಿಂದ ಹಾಗೂ ಹಾಲು ಒಕ್ಕೂಟಗಳಿಂದ ಪ್ರೋತ್ಸಾಹದ ರೂಪದಲ್ಲಿ 3000ರೂಗಳ ಪ್ರೋತ್ಸಾಹಧನವನ್ನು ಮುಖ್ಯಮಂತ್ರಿಗಳ ಒಪ್ಪಿಗೆ ಮೇರೆಗೆ ವಿತರಣೆ ಮಾಡಲಾಗುತ್ತಿದ್ದು, ಈಗಾಗಲೆ ವಿಜಯಪುರ ಸೇರಿ ಒಟ್ಟು 19 ಜಿಲ್ಲೆಗಳಲ್ಲಿ ಸಾಂಕೇತಿಕವಾಗಿ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಒಟ್ಟು 41,500 ಆಶಾ ಕಾರ್ಯಕರ್ತೆಯರಿಗೆ ಸುಮಾರು 12 ಕೋಟಿ 7 ಲಕ್ಷ ರೂಗಳನ್ನು ನೀಡಲು ಪ್ರಾರಂಭಿಸಲಾಗಿದೆ. ಆಶಾ ಕಾರ್ಯಕರ್ತೆಯರಿಗೆ ಸಹಕಾರಿ ಸಂಘಗಳನ್ನು ಸ್ಥಾಪಿಸುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದ್ದು, ಅವರು ಸಹ ಆರ್ಥಿಕವಾಗಿ ಸದೃಡರಾಗುವ ಉದ್ದೇಶ ಹೊಂದಲಾಗಿದ್ದು, ಶೂನ್ಯ ಬಡ್ಡಿದರದಲ್ಲಿ 50 ಸಾವಿರ ರೂಗಳ ವರೆಗೆ ಸಾಲ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಕೋವಿಡ್ ಸಮಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕು. ಮಹಾರಾಷ್ಟ್ರ ಹಾಗೂ ಬೇರೆ ರಾಜ್ಯಗಳಿಂದ ಬಂದವರಲ್ಲಿ ಸಾಮಾನ್ಯವಗಿ ಹೆಚ್ಚು ಸೊಂಕು ಕಾಣಿಸಿಕೊಳ್ಳುತ್ತಿದ್ದು, ಅವರ ಮೇಲೆ ನಿಗಾ ಇಡುವ ಕಾರ್ಯ ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದು ತಮ್ಮ ಆರೋಗ್ಯದ ಬಗ್ಗೆಯು ಕಾಳಜಿ ವಹಿಸಿ ಎಂದು ಹೇಳಿದರು.

ಕಳೆದ ಸಾಲಿನಲ್ಲಿ 22.58 ಲಕ್ಷ ರೈತರಿಗೆ 135777 ಕೋಟಿ ರೂಗಳ ಸಾಲವನ್ನು ಸಹಕಾರಿ ಕ್ಷೇತ್ರದಿಂದ ನೀಡಲಾಗಿದ್ದು, ಈ ಸಾಲಿನಲ್ಲಿ 24.50 ಲಕ್ಷ ರೈತರಿಗೆ 14,500 ರೋಟಿ ರೂಗಳ ಬೆಳೆ ಸಾಲ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದರು. ಈ ವರ್ಷದಲ್ಲಿ ಈವರೆಗೆ 5.42.991 ರೈತರಿಗೆ 3807 ಕೋಟಿ ಕೃಷಿ ಸಾಲ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

ಬ.ಬಾಗೇವಾಡಿ ಶಾಸಕ ಹಾಗೂ ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷರಾದ ಶಿವಾನಂದ ಪಾಟೀಲ ಅವರು ಮಾತನಾಡಿ ರಾಜ್ಯದಲ್ಲಿ ಆಶಾ ಕಾರ್ಯಕರ್ತೆಯರು ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಜಿಲ್ಲೆಯ ಸಹಕಾರಿ ಬ್ಯಾಂಕ್‍ಗಳ ಹಣದ ಸಹಾಯದಿಂದು ಇಂದು ಜಿಲ್ಲೆಯ 1795 ಜನ ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ನೀಡಲಾಗುತ್ತಿದ್ದು ಇಂದು ಒಳ್ಳೆಯ ಸಂಗತಿಯಾಗಿದ್ದು, ಜಿಲ್ಲೆಯ ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಸುಮಾರು 15 ಲಕ್ಷ ರೂಗಳನ್ನು ನೀಡಿದೆ ಎಂದು ಹೇಳಿದರು.

ಸಹಕಾರಿ ಬ್ಯಾಂಕ್‍ಗಳು ರೈತರಿಗೆ, ಆಶಾ ಕಾರ್ಯಕರ್ತೆಯರಿಗೆ, ಹಾಗೂ ಸಮಾಜದ ಎಲ್ಲ ವರ್ಗದವರಿಗೆ ಸಹಕಾರ ನೀಡುವಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದು, ಕೋವಿಡ್-19 ಸಂದರ್ಭದಲ್ಲೂ ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಜಿಲ್ಲಾ ಡಿ.ಸಿ.ಸಿ ಬ್ಯಾಂಕ್ ಸುಮಾರು 1 ಕೋಟಿಗಳಗಳನ್ನು ನೀಡಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಬೆಳಗಾವಿ ಪ್ರಾಂತ್ಯದ ಸಹಕಾರ ಸಂಘಗಳ ಸಂಯುಕ್ತ ನಿಭಂಧಕರ ಶ್ರೀ ಜಿ.ಎಂ ಪಾಟೀಲ, ಡಿ.ಸಿ.ಸಿ ಬ್ಯಾಂಕ್‍ನ ಉಪಾದ್ಯಕ್ಷ ರಾಜಶೇಖ ಗುಡದಿನ್ನಿ, ಡಿ.ಸಿ.ಸಿ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ ರಾಜಣ್ಣ, ವಿಜಯಪು ಸಹಕಾರ ಸಂಘಗಳ ಉಪನಿಭಂಧಕ ಪಿ.ಬಿ ಕಾಳಗಿ ಸೇರಿದಂತೆ ಇತರರಿದ್ದರು.


 

LEAVE A REPLY

Please enter your comment!
Please enter your name here