ಆತ್ಮ ನಿರ್ಭರ ಯೋಜನೆಯಡಿ ಮೇ, ಜೂನ್ ತಿಂಗಳುಗಳಿಗೆ ಅಕ್ಕಿ ಮತ್ತು ಕಡಲೆಕಾಳು ವಿತರಣೆ

0
128

ವಿಜಯಪುರ ಮೇ. 29: ಕೇಂದ್ರ ಸರ್ಕಾರವು ಕೋವಿಡ್-19 ಹಿನ್ನೆಲೆಯಲ್ಲಿ ಪಡಿತರ ಚೀಟಿ ಹೊಂದದೆ ಇರುವ ಕಡು ಬಡವರು ಹಾಗೂ ಬೇರೆ ರಾಜ್ಯದಿಂದ ವಲಸೆ ಬಂದಿರುವ ಕಾರ್ಮಿಕರಲ್ಲಿ ಪಡಿತರ ಚೀಟಿಯನ್ನು ಹೊಂದದೇ ಇರುವವರಿಗೆ ಆತ್ಮ ನಿರ್ಭರ ಯೋಜನೆಯಡಿ ಮೇ ಹಾಗೂ ಜೂನ್ ಎರಡು ತಿಂಗಳುಗಳಿಗೆ ಮಾತ್ರ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿ ಹಾಗೂ ಕುಟುಂಬಕ್ಕೆ 2 ಕೆ.ಜಿ ಕಡಲೆ ಕಾಳು ವಿತರಣೆ ಮಾಡಲು ಸರ್ಕಾರವು ಆದೇಶಿಸಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಅದರಂತೆ ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಹಂಚಿಕೆಯಾಗಿರುವ 4175 ಕ್ವಿಂಟಲ್ ಅಕ್ಕಿಯನ್ನು ಭಾರತ ಆಹಾರ ನಿಗಮದಿಂದ ಎತ್ತುವಳಿ ಮಾಡಿ ಆಯಾ ತಾಲೂಕಿನ ಸಗಟು ಮಳಿಗೆಗಳಲ್ಲಿ ದಾಸ್ತಾನು ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗಳಿಗೆ ಸಾಗಾಣಿಕೆ ಮಾಡುವ ಪ್ರಕ್ರಿಯೆಯು ಭರದಿಂದ ಸಾಗಿದೆ.

ಬೇರೆ ರಾಜ್ಯದಿಂದ ದುಡಿಯಲು ವಲಸೆ ಬಂದಿರುವ ಕಾರ್ಮಿಕರು ದೇಶದಲ್ಲಿನ ಯಾವುದೇ ಪ್ರದೇಶದಲ್ಲಿ ಪಡಿತರ ಚೀಟಿಯನ್ನು ಹೊಂದಿರದಿದ್ದಲ್ಲಿ ಹಾಗೂ ಯಾವುದೇ ಪಡಿತರ ಚೀಟಿಯನ್ನು ಹೊಂದಿದರೆ ಇರುವ ಕಡುಬಡತನದ ಕುಟುಂಬದವರು ಆತ್ಮ ನಿರ್ಭರ ಯೋಜನೆಯಡಿ ಬಿಡುಗಡೆ ಮಾಡಿರುವ ಅಕ್ಕಿಯನ್ನು ಪಡೆಯಲು ಅರ್ಹತೆಯನ್ನು ಹೊಂದಿರುತ್ತಾರೆ.

ಇಂಥವರು ಕೂಡಲೇ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ತಮ್ಮ ಆಧಾರ್ ಕಾರ್ಡ್ ನಂಬರ್ ಒದಗಿಸಿ ಪಡಿತರ ಚೀಟಿಯನ್ನು ಹೊಂದಿರದೆ ಇರುವ ಕುರಿತು ದೃಢಪಟ್ಟಲ್ಲಿ ನ್ಯಾಯಬೆಲೆ ಅಂಗಡಿಯಿಂದ ಮೇ ತಿಂಗಳಿಗೆ ಪ್ರತಿಯೊಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನು ಪಡೆಯಬಹುದಾಗಿದೆ. ಕಡಲೆ ಕಾಳು ಇನ್ನೂ ಸರಬರಾಜು ಹಂತದಲ್ಲಿರುವ ಕಾರಣ ಸಾರ್ವಜನಿಕರಿಗೆ 2020ನೇ ಜೂನ್ ತಿಂಗಳಲ್ಲಿ ವಿತರಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here