ಕಂಟೇನ್ಮೆಂಟ್ ಪ್ರದೇಶದಲ್ಲಿ ಅನಾವಶ್ಯಕ ಓಡಾಡುವವರನ್ನು ಸಹ ಹೋಮ್ ಕ್ವಾರಂಟೈನ್ ಮಾಡಲಾಗುವುದು -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

0
123

ವಿಜಯಪುರ ಎ.18: ನಗರದಲ್ಲಿ ಕೋವಿಡ್-19 ಸೋಂಕಿತರು ದಾಖಲಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಘೋಷಿಸಿದ ಕಂಟೇನ್ಮೆಂಟ್ ವಲಯದಲ್ಲಿ ಅನಾವಶ್ಯಕವಾಗಿ ಓಡಾಡುವವರು ಕಂಡುಬಂದಲ್ಲಿ ಅಂತಹವರನ್ನು ಕೂಡ ಹೋಮ್ ಕ್ವಾರಂಟೈನ್ ಮಾಡುವಂತಹ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ಕೋವಿಡ್-19 ಮುನ್ನೆಚ್ಚರಿಕೆಯಾಗಿ ಲಾಕ್‍ಡೌನ್ ಜಾರಿ ಹಿನ್ನೆಲೆಯಲ್ಲಿ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ಮುಂದೆ ಕಂಟೇನ್ಮೆಂಟ್ ಏರಿಯಾದಲ್ಲಿ ಅನಾವಶ್ಯಕವಾಗಿ (ವೈದ್ಯಕೀಯ ಕಾರಣ ಹೊರತು ಪಡಿಸಿ) ಓಡಾಡುವುದು ಕಂಡುಬಂದಲ್ಲಿ ಅಂತಹವರನ್ನು 28 ದಿನಗಳ ಕಾಲ ಹೋಮ್ ಕ್ವಾರಂಟೈನ್ ಮಾಡುವಂತಹ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವವರು ಮತ್ತು 50 ವರ್ಷ ವಯೋಮಾನ ಮೇಲ್ಪಟ್ಟವರು ಯಾವುದೇ ರೀತಿಯ ತೀವ್ರತರಹದ ಉಸಿರಾಟದ ತೊಂದರೆ, ನೆಗಡಿ, ಜ್ವರ, ಕೆಮ್ಮು ಕಂಡು ಬಂದ ತಕ್ಷಣ ಗಮನಕ್ಕೆ ತರುವಂತೆ ತಿಳಿಸಿದ ಅವರು ಇದಕ್ಕೆ ನಿರ್ಲಕ್ಷ್ಯ ತೋರಿದ್ದಲ್ಲಿ ರೋಗ ಬಾಧಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಅವಶ್ಯಕ ಮುನ್ನೆಚ್ಚರಿಕೆ ಮತ್ತು ಸಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಈ ರೋಗದಿಂದ ದೂರ ಇರುವಂತೆ ಸಲಹೆ ನೀಡಿದ್ದಾರೆ.

ಕೊರೋನಾ ವೈರಸ್ ವಿರುದ್ಧ ನಾವು ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ, ಗಂಭೀರ ಕಾಯಿಲೆ ಇರುವವರು ಮತ್ತು ಮಕ್ಕಳಿಗೆ ಇದು ಶೀಘ್ರ ಅಪಾಯ ಒಡ್ಡುವುದರಿಂದ ಅವಶ್ಯಕ ಮುಂಜಾಗ್ರತೆ ಮತ್ತು ಕಾಳಜಿಯಿಂದ ಇರುವಂತೆ ತಿಳಿಸಿದ ಅವರು ಈ ರೋಗದ ಬಗ್ಗೆ ಭಯ ಬೇಡ, ಎಚ್ಚರಿಕೆ ವಹಿಸುವಂತೆ ಮತ್ತು ರೋಗ ಲಕ್ಷಣಗಳ ಬಗ್ಗೆ ಸೂಕ್ತ ಜಾಗೃತಿ ವಹಿಸುವಂತೆ ಅವರು ತಿಳಿಸಿದ್ದಾರೆ.

ಖಾಸಗಿ ನರ್ಸಿಂಗ್ ಸಿಬ್ಬಂದಿ ಮತ್ತು ಲ್ಯಾಬ್ ಟೆಕ್ನಿಶನ್‍ಗಳಿಗೆ ಸರ್ಕಾರದ ಪ್ರಮಾಣ ಪತ್ರ ನೀಡಲಾಗಿದೆ. ಕೆ.ಪಿ.ಎಮ್.ಎ ಕಾಯ್ದೆಯಡಿ ತಮಗೆ ಸಂಪೂರ್ಣ ಅಧಿಕಾರವಿದ್ದರೂ ಕೂಡ ಮಾನವೀಯತೆ ದೃಷ್ಟಿಯಿಂದ ಕರ್ತವ್ಯ ನಿರ್ವಹಿಸುವಂತೆ ಮನವಿ ಮಾಡಿದ್ದು, ಇದಕ್ಕೆ ಒಪ್ಪದಿದ್ದಲ್ಲಿ ಮುಂದಿನ ದಿನಗಳಲ್ಲಿ ನಿರ್ದಾಕ್ಷಿಣ್ಯ ಕ್ರಮ ಮತ್ತು ನೋಂದಣಿ ರದ್ದತಿಯಂತಹ ಕ್ರಮ ಸಹ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದ ವಾಹನಗಳನ್ನು ಅನಾವಶ್ಯಕ ಓಡಾಟಕ್ಕೆ ನಿರ್ಬಂಧ ಇದ್ದು, ಈ ಕುರಿತಂತೆ ಯಾವುದೇ ದೂರು ಬಂದಲ್ಲಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಅನುಮತಿಯಿಲ್ಲದೆ ಜಾತ್ರೆ, ಸಮಾರಂಭ, ಮದುವೆಗೆ ಈಗಾಗಲೇ ನಿರ್ಬಂಧಿಸಲಾಗಿದ್ದು, ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ಅವರು ಸೀಲ್‍ಡೌನ್ ಪ್ರದೇಶದಲ್ಲಿರುವ ಜನರು ತಮ್ಮ, ತಮ್ಮ ಕುಟುಂಬದ, ಹಾಗೂ ನಾಗರೀಕರ ಹಿತದೃಷ್ಟಿಯಿಂದ ಮನೆಯಿಂದ ಹೊರಗೆ ಬರದಂತೆ ಅವರು ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ವಿದೇಶ ಮತ್ತು ಇತರ ಪ್ರದೇಶಗಳಿಂದ ಬಂದ 912 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 360 ಜನರು ಹೋಮ್ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿದ್ದು, 471 ಜನರು ಹೋಮ್ ಕ್ವಾರಂಟೈನ್‍ದಲ್ಲಿದ್ದಾರೆ. ಈವರೆಗೆ 555 ಜನರ ಗಂಟಲುದ್ರವ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿ 433 ನೆಗೆಟಿವ್ ವರದಿ ಬಂದಿದೆ. ಈವರೆಗೆ ಒಟ್ಟು 21 ಜನರು ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಇದರಲ್ಲಿ ಇತ್ತೀಚೆಗೆ ಒಬ್ಬರು ಮೃತಪಟ್ಟಿದ್ದಾರೆ. ಇಂದು ಮೃತಪಟ್ಟ ವ್ಯಕ್ತಿಗೆ ಸಂಬಂಧಪಟ್ಟಂತೆ ಇನ್ನೂ ಸಂಪೂರ್ಣ ಕಾರಣ ತಿಳಿಸು ಬಂದಿಲ್ಲ. ಸರ್ಕಾರದ ನಿರ್ದೇಶನದ ನಿರೀಕ್ಷೆಯಲ್ಲಿದ್ದೇವೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಅದರಂತೆ ಇನ್ನೂ 101 ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ತಿಳಿಸಿದ ಅವರು ಕೋವಿಡ್-19 ಪಾಸಿಟಿವ್ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಂಪರ್ಕದಲ್ಲಿದ್ದವರನ್ನು ಗುರುತಿಸುವ ಕಾರ್ಯ ತೀವ್ರಗತಿಯಲ್ಲಿ ನಡೆದಿದೆ ಎಂದು ಹೇಳಿದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಗೋವಿಂದ ರೆಡ್ಡಿಯವರು ಈವರೆಗೆ ಅಂತರಾಜ್ಯದಿಂದ 15000 ಹಾಗೂ ಅಂತರ (ಹೊರ) ಜಿಲ್ಲೆಗಳಿಂದ 30000 ಸೇರಿದಂತೆ ಒಟ್ಟು 45000 ಜನರು ಜಿಲ್ಲೆಗೆ ಮರಳಿದ್ದು, ಇವರನ್ನು ಹೋಮ್ ಕ್ವಾರಂಟೈನ್ ಮಾಡಿ ಸ್ಟ್ಯಾಪಿಂಗ್, ಮನೆಗಳಿಗೆ ಪೋಸ್ಟರ್ ಅಂಟಿಸುವುದು, ನಿರಂತರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ ಎಂದು ತಿಳಿಸಿದರು.


 

LEAVE A REPLY

Please enter your comment!
Please enter your name here