ವಿಜಯಪುರ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 129ನೇ ಜಯಂತಿ ಆಚರಣೆ

0
102

ವಿಜಯಪುರ ಎ.14: ಭಾರತ ರತ್ನ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ ನೇತೃತ್ವದ ಸಮಿತಿಯು ನಮ್ಮ ದೇಶಕ್ಕೆ ವಿಶ್ವದ ಶ್ರೇಷ್ಠವಾದ ಸಂವಿಧಾನ ನೀಡಿದ್ದು, ಈ ಸಂವಿಧಾನದ ಮೂಲಕ ರೂಪಿಸಲಾದ ಕಾನೂನುಗಳು ನಮಗೆಲ್ಲರಿಗೂ ನೆರವಾಗಿವೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರ 129 ನೇ ಜಯಂತಿ ಅಂಗವಾಗಿ ಅಂಬೇಡ್ಕರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ ಅವರು ಭಾರತದ ಸಂವಿಧಾನವು ಶ್ರೇಷ್ಠವಾಗಿದೆ. ಈ ಸಂವಿಧಾನದ ಮೂಲಕ ನೀಡಿದ ಕಾನೂನಿನ ಅಡಿಯಲ್ಲಿ ಇಂದು ನಾವೆಲ್ಲರೂ ಕಾರ್ಯನಿರ್ವಹಿಸುತ್ತಿದ್ದು, ಕೊರೋನಾದಂತಹ ಮಹಾಮಾರಿಯ ವಿರುದ್ಧ ಹೋರಾಡುವ ಶಕ್ತಿ ಲಭಿಸಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕರ್ತವ್ಯಗಳು, ನಡತೆ ಹಾಗೂ ಸಂವಿಧಾನ ಆಧಾರಿತ ಕಾನೂನುಗಳು ಭಾರತೀಯರಿಗೆ ನೆರವಾಗಿದ್ದು, ಈ ಸಂವಿಧಾನದ ವಿರುದ್ಧ ಯಾವುದೇ ಪರ್ಯಾಯ ಕಾನೂನು ರೂಪಿಸಿದ್ದಲ್ಲಿ ಅದು ತನ್ನಷ್ಟಕ್ಕೆ ತಾನೇ ಬಿದ್ದು ಹೋಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಡಾ. ಬಿ.ಆರ್ ಅಂಬೇಡ್ಕರ್ ಅವರ ಜಯಂತಿ ದಿನವು ವಿಶ್ವಕ್ಕೆ ದಲಿತರ ದಿನವಾಗಿದೆ. ಸ್ವಾತಂತ್ರ್ಯಾನಂತರ ಹಾಗೂ ಈವರೆಗೆ ಸುಮಾರು 130 ಕೋಟಿ ಜನಸಂಖ್ಯೆಯಲ್ಲಿ ಸಾವಿರಾರು ಜಾತಿ,ಧರ್ಮ,ಬಡ,ಶ್ರೀಮಂತ ಎಂಬ ಬೇಧಭಾವವಿಲ್ಲದೆ ನಾವೆಲ್ಲರೂ ಒಂದೇ ಎಂಬ ತಳಹದಿಯ ಮೇಲೆ ಒಗ್ಗಟ್ಟಾಗಿ ನಿಲ್ಲಿಸುವಲ್ಲಿ ಸಂವಿಧಾನ ಮಾರ್ಗದರ್ಶಿಯಾಗಿದ್ದು, ನಾವೆಲ್ಲರೂ ಅಂತಹ ಸಂವಿಧಾನಕ್ಕೆ ಬದ್ಧರಾಗಿ ನಡೆಯೋಣ ಎಂದು ತಿಳಿಸಿದರು.
ಭಾರತದ ಸಂವಿಧಾನವು ಶ್ರೇಷ್ಠ ಸಂವಿಧಾನವಾಗಿದ್ದು, ಭಾರತೀಯರೆಲ್ಲರೂ ನೆಮ್ಮದಿಯಿಂದ ಬದುಕಲು ಮಾರ್ಗದರ್ಶಿಯಾಗಿದೆ. ಇಂದಿನ ಕೊರೋನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಎಲ್ಲರೂ ಧೈರ್ಯದಿಂದ ಈ ಮಹಾಮಾರಿಯನ್ನು ಎದುರಿಸುವ ಶಕ್ತಿಯನ್ನು ನಮಗೆ ಸಂವಿಧಾನ ನೀಡಿದ್ದು, ಕಾನೂನಿನ ವ್ಯಾಪ್ತಿಯಲ್ಲಿ ಎಲ್ಲರೂ ನಿಯಮಗಳನ್ನು ಪಾಲಿಸುವ ಮೂಲಕ ವಿಶೇಷವಾಗಿ ಕೊರೋನಾ ನಿಯಂತ್ರಣಕ್ಕೆ ನೆರವಾಗುವ ಸಾಮಾಜಿಕ ಅಂತರ ಇತರೆ ನಿಯಮ ಪಾಲನೆಯ ಮೂಲಕ ಈ ಮಹಾಮಾರಿಯ ನಿಯಂತ್ರಣಕ್ಕೆ ನೆರವಾಗುವ ಸಲಹೆ ನೀಡಿದರು.

ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರು ಹೇಳಿದಂತೆ ಸಂವಿಧಾನವನ್ನು ಗೌರವಿಸಿದರೆ ನನ್ನನ್ನು ಗೌರವಿಸಿದಂತೆ, ಭಾರತದ ಕಟ್ಟಕಡೆಯ ವ್ಯಕ್ತಿಗಾಗಿ ಈ ಸಂವಿಧಾನ ಎಂಬ ಅವರ ಧ್ಯೇಯವಾಕ್ಯಗಳು ಸಮಾಜಕ್ಕೆ ಸ್ಪೂರ್ತಿಯಾಗಿದ್ದು, ಎಲ್ಲರೂ ಸಂವಿಧಾನ ಬದ್ಧವಾಗಿ ನಡೆಯುವ ಮೂಲಕ ಈ ದೇಶದ ಸಮಗ್ರತೆ, ಐಕ್ಯತೆ ಹಾಗೂ ಅಭಿವೃದ್ಧಿಗೆ ಶ್ರಮಿಸೋಣ ಎಂದು ಹೇಳಿದರು.

ಇದಕ್ಕೂ ಮುನ್ನ ಡಾ.ಬಿ.ಆರ್ ಅಂಬೇಡ್ಕರ್ ಮೂರ್ತಿಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸಮಾಜದ ಮುಖಂಡರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

LEAVE A REPLY

Please enter your comment!
Please enter your name here