ವಿಜಯಪುರ ನಗರದಲ್ಲಿ ಕೊರೊನಾ ಒಂದು ಪಾಸಿಟಿವ್ ಪ್ರಕರಣ ದೃಢ : ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಪೂರ್ಣ ಸೀಲ್‍ಡೌನ್

0
125

ವಿಜಯಪುರ ಎ.12: ಜಿಲ್ಲೆಯಿಂದ ಈವರೆಗೆ ಕಳುಹಿಸಲಾದ 81 ಗಂಟಲು ದ್ರವ ಮಾದರಿಗಳ ಪರೀಕ್ಷಾ ವರದಿಯಲ್ಲಿ 80 ಪ್ರಕರಣಗಳ ವರದಿ ನೆಗೆಟಿವ್ ಬಂದಿದ್ದು, ಒಂದು ಪ್ರಕರಣ ವರದಿ ಪಾಸಿಟಿವ್ ಆಗಿ ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ನಗರದ ಚಪ್ಪರ್‍ಬಂದ್ ಪ್ರದೇಶದ ನಿವಾಸಿಯೊಬ್ಬರಿಗೆ ಕೊರೋನಾ ಸೋಂಕು ತಗಲಿರುವ ಬಗ್ಗೆ ದೃಢಪಟ್ಟಿದ್ದು, ರೋಗಿಯ ಆರೋಗ್ಯ ಸ್ಥಿರವಾಗಿದೆ. ರೋಗಿ ಸಂಖ್ಯೆ 221 ತೀವ್ರ ಉಸಿರಾಟ ಸಂಬಂಧಿ ತೊಂದರೆ ಬಗ್ಗೆ ವೈದ್ಯರು ಖಾತ್ರಿಪಡಿಸಿದ್ದು, ಸೋಂಕು ಬಹುಶಃ ಮಹಾರಾಷ್ಟ್ರ ರಾಜ್ಯದಲ್ಲಿ ಸಂಪರ್ಕದಿಂದ ತಗುಲಿರಬಹುದೆಂಬ ಶಂಕೆಯಿದ್ದು, ಈ ಕುರಿತು ಸೂಕ್ತ ತನಿಖೆ ಪೊಲೀಸ್ ಮತ್ತು ಆರೋಗ್ಯ ಇಲಾಖೆಯಿಂದ ಕೈಗೊಳ್ಳಲಾಗಿದೆ.
ಸೋಂಕಿತ ರೋಗಿಯು 60 ವಯೋಮಾನದವರಾಗಿದ್ದು, ರಕ್ತದೊತ್ತಡ, ಸಕ್ಕರೆ ಕಾಯಿಲೆಯಿದ್ದ ಬಗ್ಗೆ ತಿಳಿದು ಬಂದಿದೆ. ಕೊರೋನಾ ಸೋಂಕು ಪಾಸಿಟಿವ್ ವರದಿ ಬಂದ ತಕ್ಷಣ ಜಿಲ್ಲಾಡಳಿತ ಕ್ಷಿಪ್ರ ಕ್ರಮಗಳನ್ನು ಕೈಗೊಂಡಿದ್ದು, ಗೋಲಗುಂಬಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಂತಹ ಪ್ರದೇಶವನ್ನು ಸಂಪೂರ್ಣ ಸೀಲ್‍ಡೌನ್ ಮಾಡಲಾಗಿದೆ.
ಈ ಪ್ರದೇಶದ ಸಾರ್ವಜನಿಕರಿಗೆ ಅಗತ್ಯ ವಸ್ತುಗಳ ತೊಂದರೆಯಾಗದಂತೆ ನೋಡಿಕೊಳ್ಳಲು ಮಹಾನಗರ ಪಾಲಿಕೆಯ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಲಾಗಿದ್ದು, ದಿನಸಿ, ತರಕಾರಿ ಹಾಗೂ ಅರ್ಹ ಬಡ ಕುಟುಂಬಗಳಿಗೆ ಪಡಿತರಗಳನ್ನು ಮನೆಮನೆಗೂ ತಲುಪಿಸುವ ವ್ಯವಸ್ಥೆ ಮಾಡಲಾಗಿದ್ದು, ಸಾರ್ವಜನಿಕರು ಮನೆಯಿಂದ ಹೊರಗೆ ಬರುವ ಅವಶ್ಯಕತೆಯಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here