“ವಿದೇಶಿಗರೊಂದಿಗೆ ಸಂಪರ್ಕದಲ್ಲಿದ್ದ ಮೂವರ ಗಂಟಲುದ್ರವ ಪರೀಕ್ಷಾ ವರದಿ ನೆಗೆಟಿವ್’’ -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್

0
95

ವಿಜಯಪುರ  ಎ – 02: ಮಲೇಷಿಯಾ ಮತ್ತು ಇಂಡೋನೆಷಿಯಾ ದಿಂದ ಬಂದು ವಿಜಯಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಇವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಜಿಲ್ಲೆಯ ನಾಲ್ವರ ಸ್ವಾಬ್‍ಗಳ (ಗಂಟಲು ದ್ರವ) ಮಾದರಿಯನ್ನು ಪರೀಕ್ಷಿಸಲಾಗಿ ಮೂವರ ನೆಗೆಟಿವ್ ವರದಿ ಬಂದಿದ್ದು, ಇನ್ನೊಬ್ಬರ ವರದಿ ಬರಬೇಕಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ  ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಅಧಿಕಾರಿಗಳೊಂದಿಗೆ ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಸಭೆ ನಡೆಸಿದ ಅವರು ದೆಹಲಿ ತಬ್ಲಿಘ ಸಾಮೂಹಿಕ ಪ್ರಾಥನೆಗೆ ಹೋಗಿ ಬಂದ ಇನ್ನೂ 10 ಜನರ ಗಂಟಲು ದ್ರವ ಮಾದರಿ ಸಹ ಕಳುಹಿಸಲಾಗಿದ್ದು, ಇನ್ನೂ ವರದಿ ಬರಬೇಕಾಗಿದೆ. ಅದರಂತೆ ಪೊಲೀಸ್ ಇಲಾಖೆಯ ಪ್ರಾಥಮಿಕ ಮಾಹಿತಿ ಅನ್ವಯ ದೆಹಲಿಯಿಂದ ಇನ್ನೂ 17 ಜನ ವಿಜಯಪುರ ಜಿಲ್ಲೆಗೆ ಮಾರ್ಚ 8 ರಂದು ಮರಳಿದ್ದು ಇವರೆಲ್ಲರನ್ನು ಶಿಷ್ಠಾಚಾರ ಮತ್ತು ಮಾರ್ಗಸೂಚಿಯನ್ವಯ ಹೋಮ್‍ಕ್ವಾರಂಟೈನ್ ಮತ್ತು ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯಾದ್ಯಂತ ಈ ರೀತಿ ಕೊರೋನಾ ಪೀಡಿತ ಜಿಲ್ಲೆ ಮತ್ತು ರಾಜ್ಯಗಳಿಂದ ಬಂದವರ ಬಗ್ಗೆ ತಕ್ಷಣ ಜಿಲ್ಲಾಡಳಿತದ ಗಮನಕ್ಕೆ ತರುವಂತೆ ತಿಳಿಸಿರುವ ಅವರು ಸಾರ್ವಜನಿಕರ ಮತ್ತು ಜಿಲ್ಲೆಯ ಜನತೆಯ ಹಿತದೃಷ್ಠಿಯಿಂದ ಜಿಲ್ಲಾಡಳಿತಕ್ಕೆ ಸಹಕರಿಸಿ, ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದೆಂದು ಮನವಿ ಮಾಡಿದ್ದಾರೆ.
ಸರ್ಕಾರವು ಘೋಷಿತ ಮತ್ತು ಅಘೋಷಿತ ಕೊಳಚೆ ನಿವಾಸಿಗಳು, ಕಟ್ಟಡ ಕಾರ್ಮಿಕರ ವಸತಿ ತಾಣಗಳು ಹಾಗೂ ವಲಸಿಗ ಕಾರ್ಮಿಕರಿಗೆ ಇಂದಿನಿಂದ ಎಪ್ರೀಲ್ 14ರ ವರೆಗೆ ಪ್ರತಿಕುಟುಂಬಕ್ಕೆ ಹಾಲನ್ನು ವಿತರಿಸಲು ಸೂಚಿಸಿದ ಅವರು, ಜಿಲ್ಲೆಯ 82668 (20 ಸಾವಿರ ಕುಟುಂಬಗಳು) ಸ್ಲಂ ನಿವಾಸಿಗಳಿಗೆ ಎಸ್.ಎಚ್.ಜಿ ಗುಂಪುಗಳ ಮೂಲಕ ಅಥವಾ ಅವಶ್ಯಕ ಮೂಲಗಳ ಮೂಖಾಂತರ ಹಾಲು ಪುರೈಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಅದರಂತೆ ಜಿಲ್ಲಾದ್ಯಂತ 2 ತಿಂಗಳ ಪಡಿತರ ಅಕ್ಕಿ, ಗೋಧಿ ಮತ್ತು ಆಹಾರ ಧಾನ್ಯಗಳನ್ನು ಅರ್ಹ ಬಿ.ಪಿ.ಎಲ್ ಕುಟುಂಬಗಳಿಗೆ ಪುರೈಸಬೇಕು. ಅದರಂತೆ ಅಂತ್ಯೋದಯ ಪಡಿತರ ಚೀಟಿದಾರರಿಗೆ ನಿಗದಿತ ಪ್ರಮಾಣದ ಆಹಾರ ಧಾನ್ಯ ಪುರೈಸುವಂತೆ ಆಹಾರ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದ ಅವರು ಸಾರ್ವಜನಿಕರು ಕೂಡಾ ಗುಂಪು-ಗುಂಪಾಗಿ ಪಡೆಯದೆ, ಸಾಮಾಜಿಕ ಅಂತರದೊಂದಿಗೆ ಪಡೆದು ಕೋವಿಡ್-19 ಕುರಿತು ಮುನ್ನೆಚ್ಚರಿಕೆ ವಹಿಸಲು ಕೋರಿದ್ದಾರೆ. ಪಡಿತರಕ್ಕೆ ಸಂಬಂಧಸಿದ ಯಾವುದೇ ದೂರುಗಳಿದ್ದಲ್ಲಿ ಆಯಾ ತಹಶಿಲ್ದಾರರು ಅಥವಾ ಆಹಾರ ಇಲಾಖೆ ಜಂಟಿ ನಿರ್ದೇಶಕರಿಗೆ ಅಥವಾ ಅನಿವಾರ್ಯ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ಸಲ್ಲಿಸಬಹುದಾಗಿದೆ ಎಂದು ಹೇಳಿದರು.
ಅದರಂತೆ ಪ್ರಧಾನಮಂತ್ರಿ ಕಿಸಾನ ಸಮ್ಮಾನ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ತಲಾ 2 ಸಾವಿರ ಮತ್ತು ಪ್ರಧಾನಮಂತ್ರಿ ಜನ-ಧನ ಯೋಜನೆಯಡಿ 500 ರೂಪಾಯಿ ಒದಗಿಸುತ್ತಿದ್ದು, ಪ್ರತಿ ಗ್ರಾಮಗಳಲ್ಲಿ ಬ್ಯಾಂಕ್ ಮಿತ್ರರು ಫಲಾನುಭವಿಗಳೊಂದಿಗೆ ಸಮನ್ವಯತೆ ಸಾಧಿಸಲಿದ್ದಾರೆ. ಸಾರ್ವಜನಿಕರು ಕೂಡಾ ಬ್ಯಾಂಕ ಮತ್ತು ಎ.ಟಿ.ಎಮ್‍ಗಳಿಗೆ ಗುಂಪು-ಗುಂಪಾಗಿ ಹೋಗದಂತೆಯೂ ಸಹ ಅವರು ಸಲಹೆ ನೀಡಿದ್ದಾರೆ.
ಇಂದು ಪೂರ್ವಾಹ್ನವರೆಗೆ 337 ಜನ ವಿದೇಶದಿಂದ ಬಂದಬಗ್ಗೆ ವರದಿಯಾಗಿದೆ. 93 ಜನ 28 ದಿನಗಳ ಅವಧಿ ಪೂರ್ಣಗೊಳಿಸಿದ್ದಾರೆ. 216 ಜನರು 15 ರಿಂದ 28 ದಿನಗಳ ರಿಪೋರ್ಟಿಂಗ್ ಅವಧಿಯಲ್ಲಿದ್ದಾರೆ. 28 ಜನ ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ. ವಿದೇಶದಿಂ ಬಂದವರನ್ನು ಹೊರತುಪಡಿಸಿ 11 ಜನರ ಮೇಲೆ ತೀವ್ರ ನಿಗಾ ಇಡಲಾಗಿದೆ. 16 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. 1 ಗಂಟಲು ದ್ರವ ಮಾದರಿಯ ಪರೀಕ್ಷಾ ವರದಿ ಬರಬೇಕಾಗಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಮಾತನಾಡಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ವೇತನವನ್ನು ಎಪ್ರೀಲ 1 ರಿಂದ 275 ರೂ ವರೆಗೆ ಸರ್ಕಾರ ಹೆಚ್ಚಿಸಿದ್ದು, ವಯ್ಯಕ್ತಿಕ, ಕೃಷಿ ಹೊಂಡ, ಬದು ನಿರ್ಮಾಣ,ಸಾಮುಹಿಕ ಕಾರ್ಯಗಳಿಗೆ ಕೇವಲ 5 ಜನರ ಗುಂಪುದೊಂದಿಗೆ ಪ್ರತ್ಯೇಕವಾಗಿ ಈ ರೀತಿ 5 ಜನರ ಗುಂಪುಗಳಾಗಿ ಕೆಲಸ ನಿರ್ವಹಿಸಲು ಸರ್ಕಾರ ಸೂಚಿಸಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಔದ್ರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಹೇಂದ್ರ ಕಾಪ್ಸೆ, ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿ ಮುಕುಂದ ಗಲಗಲಿ, ಜಿಲ್ಲಾಸ್ಪತ್ರೆ ಸರ್ಜನ್ ಶರಣಪ್ಪ ಕಟ್ಟಿ, ಆಹಾರ ಇಲಾಖೆ ಜಂಟಿ ನಿರ್ದೇಶಕಿ ಕುಮಾರಿ ಸುರೇಖಾ, ಜಿಲ್ಲಾ ಸರ್ವೆಕ್ಷಣಾಧಿಕಾರಿ ಮಲ್ಲನಗೌಡ ಬಿರಾದಾರ, ಕುಷ್ಟರೋಗ ನಿಯಂತ್ರಾಧಿಕಾರಿ ಸಂಪತಕುಮಾರ ಗುಣಾರೆ, ಡಾ. ಧಾರವಾಡಕರ, ಶ್ರೀ ಲಕ್ಕಣ್ಣವರ್, ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಪ್ರಾಣೇಶ ಜಾಹಗೀರದಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here