ಎಲ್ಲ ಸಮಸ್ಯೆಯ ಪರಿಹಾರ ಆತ್ಮ ವಿಶ್ವಾಸ

0
123

ಯಾವುದೇ ಒಂದು ಕಾರ್ಯವನ್ನು ಮಾಡಬೇಕಾದರೆ ಒಂದಿಲ್ಲ ಒಂದು ತೊಡಕುಗಳು ಎದುರಾಗುತ್ತವೆ. ಇಂಥ ತೊಡಕುಗಳು ಪದೇ ಪದೇಯಾಗಿ ಬರಲಾರಂಭಿಸಿದರೆ, ಯಾವುದೇ ವ್ಯಕ್ತಿಯಾಗಲಿ ಭಯಭೀತನಾಗುತ್ತಾನೆ. ತಾನು ನಂಬಿಕೆ ಇಟ್ಟುಕೊಂಡ ಕೆಲಸದ ಬಗ್ಗೆ ವಿಶ್ವಾಸ ಕಳೆದುಕೊಳ್ಳುತ್ತಾನೆ. ಯಾವುದೇ ವ್ಯಕ್ತಿಯಾಗಿರಲಿ ವಿಶ್ವಾಸ ಕಳೆದುಕೊಂಡಾಗ ಅವನಿಂದ ಯಾವ ಕಾರ್ಯಗಳು ಯಶಸ್ವಿಯಾಗುವುದಿಲ್ಲ. ಅವನ ಕಾರ್ಯಗಳು ಯಶಸ್ವಿಯಾಗದಿದ್ದಾಗ ಅವನಲ್ಲಿ ನಿರುತ್ಸಾಹ ಭಾವನೆ ಮೂಡುತ್ತದೆ. ಚಿಂತೆಯ ನೆರಳು
ಆದಾ ಅವನನ್ನು ಕಾಡುತ್ತಲೇ ಇರುತ್ತದೆ. ನಾವು ಯಾವುದೇ ಕಾರ್ಯ ಸಾಧನೆಯಲ್ಲಿ ತೊಡಗಿದಾಗ ನಮ್ಮಿಂದ ಹಲವಾರು ತಪ್ಪುಗಳುಂಟಾಗಿ ಸಮಸ್ಯೆಗಳನ್ನು ಎದುರಿಸುವ ಸಂಧರ್ಬ ತಂದುಕೊಳ್ಳಬಹುದು. ಅಥವಾ ಇನ್ಯಾವುದೋ ಕಾರಣದಿಂದ ಸಮಸ್ಯೆಯನ್ನು ಎದುರಿಸುವಂತಾಗುತ್ತದೆ. ಸಂಧರ್ಬ ಯಾವುದೇ ಇರಲಿ, ಅದೆಲ್ಲದಕ್ಕೂ ಒಂದೆ ಪರಿಹಾರ ಆತ್ಮ ವಿಶ್ವಾಸ. ಯಾವನಲ್ಲಿ ಆತ್ಮ ವಿಶ್ವಾಸ ಶಕ್ತಿ ಬಹಳಷ್ಟು ಗಟ್ಟಿಯಾಗಿರುತ್ತದೆಯೋ ಅವನು ಪ್ರಪಂಚದ ಯಾವುದೇ ಮೂಲೆಯಲ್ಲಿ ಬದುಕುತ್ತಾನೆ. ಆತ್ಮ ವಿಶ್ವಾಸ ಇದ್ದವರಲ್ಲಿ ಮಾತ್ರ ಗುರಿ ತಲುಪುವ ಶಕ್ತಿ ಇರುತ್ತದೆ. ಕೆಲಸ ಎಷ್ಟೆ ದೊಡ್ಡದಾಗಿದ್ದರೂ, ಎಷ್ಟೆ ಕಷ್ಟಕರವಾಗಿದ್ದರೂ ಅದರ ಬಗ್ಗೆ ಅನುಮಾನಿಸಬಾರದು. ಅನುಮಾನ ಮನುಷ್ಯನ ಮೂಲ ಶಕ್ತಿಯನ್ನೆಲ್ಲ ತಗ್ಗಿಸಿ ಬಿಡುತ್ತದೆ.
ಆತ್ಮ ವಿಶ್ವಾಸ ಇದ್ದವನು ಯಾವುದೇ ಸಮಸ್ಯೆ ಇದ್ದರು ಅವರು ಯಾವುದಕ್ಕೂ ಸಂಶಯ ವ್ಯಕ್ತಪಡಿಸುವುದಿಲ್ಲ. ಅವರಲ್ಲಿ ಮುನ್ನುಗ್ಗುವ ಶಕ್ತಿಯೊಂದೆ ಇರುತ್ತದೆ. ಜೀವನವೆಂದರೆ, ಯಾವಾಗಲೂ ಮುನ್ನುಗ್ಗುತ್ತಿರಬೇಕು. ಅದು ಮುಗ್ಗರಿಸಿ ಬೀಳಬಾರದು. ಆತ್ಮ ವಿಶ್ವಾಸವೆನ್ನುವುದು ಯಾವಾಗಲೂ ಧೈರ್ಯವಂತರಲ್ಲಿ ಇರುತ್ತದೆ. ಹೇಡಿಗಳಲ್ಲಿ ಭಯದ ಭಾವನೆ ಇರುತ್ತದೆ. ಯಾವುದೇ ಒಬ್ಬ ವ್ಯಕ್ತಿ ಆತ್ಮ ವಿಶ್ವಾಸ ಬೆಳೆಸಿಕೊಳ್ಳಬೇಕಾದರೆ, ಅವನಲ್ಲಿ ಅವನ ಕೆಲಸದ ಬಗ್ಗೆ ಪ್ರಾಮಾಣಿಕತೆ, ನಿಷ್ಠೆ, ಸ್ವಾಭಿಮಾನ, ಇರಬೇಕು. ಯಾವನಲ್ಲಿ ಈ ಗುಣಗಳು ಇರುತ್ತವೆಯೋ ಅವನು ಎಲ್ಲ ಸಮಸ್ಯೆಗಳಿಗೆ ಪರಿಹಾರಕಂಡುಕೊಳ್ಳುತ್ತಾನೆ.

ನಾವೂಂದು ಕೆಲಸ ಮಾಡಬೇಕೆಂದು ನಿರ್ಧರಿಸಿದಾಗ ನಮ್ಮ ಮನಸ್ಸಿನಲ್ಲಿ ಗೆಲುವಿನ ವಿಚಾರಗಳೆ ತುಂಬಿರಬೇಕು. ಆದರೆ ಅನವಶ್ಯಕವಾದ ವಿಚಾರಗಳಿಂದ ನಮ್ಮ ಮೇಲೆ ನಾವೇ ಅಪನಂಬಿಕೆ ಹುಟ್ಟಿಸಿಕೊಳ್ಳುವಂತಾಗಬಾರದು. ಇದು ನನ್ನಿಂದ ಸಾಧ್ಯವಾಗದ ಮಾತು ಎಂದುಕೊಳ್ಳುತ್ತೇವೆ. ಯಾವುದೇ ಪ್ರಯತ್ನ ಮಾಡದೆ ಬಹುಬೇಗ ಶರಣಾಗುವಂತ ಹಂತಕ್ಕೆ ಬಂದು ನಿಲ್ಲುತ್ತೇವೆ. ಆತ್ಮ ವಿಶ್ವಾಸವಿದ್ದವರೂ ತಮ್ಮ ಕೆಲಸದಲ್ಲಿ ಎಂದು ಶರಣಾಗುವುದಿಲ್ಲ. ಅವರು ತಮ್ಮ ಬದುಕಿನ ಕೊನೆಯುದ್ದಕ್ಕೂ ಹೋರಾಡುತ್ತಲೇ ಇರುತ್ತಾರೆ. ಸತತವಾದ ಪ್ರಯತ್ನ, ಪರಿಶ್ರಮ, ನಿಶ್ಚಲವಾದ ಆತ್ಮ ವಿಶ್ವಾಸದಿಂದ ತಮ್ಮ ಗುರಿ ತಲುಪುತ್ತಾರೆ ಎಂಬ ನಂಬಿಕೆಯಿಂದ ಬಾಳುತ್ತಾರೆ. ಅಂಥವರೆಲ್ಲ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯವಿದೆ. ಅಂಥವರು ತಮ್ಮ ಶಕ್ತಿಯ ಬಗ್ಗೆ ಯಾವಾಗಲೂ ಸಂಶಯ ಪಡುವುದಿಲ್ಲ. ತಮ್ಮ ಸಮಸ್ಯೆಗೆ ಯಶಸ್ವಿ ಹಾದಿ ಯಾವುದೆಂದು ಶೋಧಿಸುತ್ತಾರೆ.
ಯಾವುದೇ ಸಮಸ್ಯೆ ಎದುರಾದಾಗ ಮುಖ್ಯವಾಗಿ ಗಮನಿಸಬೇಕಾದದ್ದು ಏನೆಂದರೆ, ಸಮಸ್ಯೆಯ ಗಂಭೀರತೆ ಹಾಗೂ ಯೋಗ್ಯತೆ ಎರಡನ್ನು ಗಮನದಲ್ಲಿಟ್ಟುಕೊಂಡು ನಮ್ಮ ಯೋಗ್ಯತೆಗೆ ತಕ್ಕಂತೆ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಹೋಗಬೇಕು. ಕೆಲವೋಂದು ಜಟಿಲವಾದ ಸಮಸ್ಯೆಗಳಿಗೆ ಪರಿಹಾರ ಅಷ್ಟು ಸುಲಭವಾಗಿ ಸಿಗುವುದಿಲ್ಲ. ಆಗ ಸಮಸ್ಯೆಕ್ಕಿಂತಲೂ ನಮ್ಮ ಚಿಂತೆ ಇಮ್ಮಡಿಯಾಗುತ್ತಾ ನಡೆಯುತ್ತದೆ. ಇದರಿಂದ ಮತ್ತಷ್ಟು ಸಮಸ್ಯೆ ಆಳವಾಗುತ್ತಾ ಹೋಗುತ್ತದೆ. ಸಮಸ್ಯೆ ಎಂಥದ್ದೆ ಇರಲಿ ಅದರಿಂದ ಸ್ವಲ್ಪವಾದರೂ ಚಿಂತೆ ಎನಿಸುತ್ತದೆ.ಯಾವುದೇ ಕಾರಣಕ್ಕೂ ಭಯದ ಭಾವನೆ ಬರದಿದ್ದರೆ ಸಾಕು. ನಿಮ್ಮ ಸಮಸ್ಯೆ ಅರ್ಧವಾಸಿ ಆದಂತೆ.
ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಆ ಮಿತಿಯೊಳಗೆ ಎಲ್ಲವೂ ನಡೆಯಬೇಕಾಗುತ್ತದೆ. ಯಾವೂದು ಮಿತಿ ದಾಟಿ ಹೋಗುತ್ತದೆಯೋ ಅದರಿಂದ ಅನಾಹುತ ಕಟಿಟ್ಟ ಬುತ್ತಿ. ಅತಿಯಾದ ಆತ್ಮ ವಿಶ್ವಾಸ ಇದ್ದರೂ ಒಳ್ಳೆಯದಲ್ಲ. ಆರೋಗ್ಯಕರವಾದ ಆತ್ಮ ವಿಶ್ವಾಸ ಇದ್ದರೆ ಒಳ್ಳೆಯದು. ದುರಭಿಮಾನ ಇದ್ದರೆ, ಅದು ನಮ್ಮನ್ನು ಅಡ್ಡ್ ದಾರಿ ಹಿಡಿಸುತ್ತದೆ. ಮನುಷ್ಯರನ್ನು ಅಧೋಗತಿಗೆ ಒಯ್ಯುತ್ತದೆ. ಆತ್ಮ ವಿಶ್ವಾಸದ ಬಗ್ಗೆ ಸಹಜವಾದ ಅಭಿಮಾನವಿದ್ದರೆ, ಅದರಿಂದ ಅತಿಯಾದ ಆನಂದ ಸಿಗುವುದು. ಮನಸ್ಸು ನೆಮ್ಮದಿಯಾಗಿರಬಲ್ಲದು.

ಸಮಸ್ಯೆ ಯಾವುದೇ ಇರಲಿ ನಿರಾಶೆಯನ್ನ ತಂದುಕೊಳ್ಳಬೇಡಿ, ಈ ಕ್ಷಣ ನಮಗೆ ಕೆಟ್ಟದ್ದಾಗಿದ್ದರೆ, ಮುಂಬರುವ ಕ್ಷಣಗಳು ಒಳ್ಳೆಯದಾಗಿರುತ್ತವೆ. ಯಾಕೆಂದರೆ, ಜೀವನದಲ್ಲಿ ಸುಖ-ಕಷ್ಟ ಎರಡನ್ನು ಸ್ವೀಕರಿಸಬೇಕು. ಮನುಷ್ಯನ ಹೊಸ ಹೊಸ ಕನಸುಗಳು ಜಿಗುಪ್ಸೆಯ ಭಾವನೆಯಿಂದಲೇ ನಾಶವಾಗುತ್ತದೆ. ಮಹಾ ಸಾಧನೆಗಳ ಹಿಂದೆ ನಿರಾಶೆಯ ಛಾಯೆ ಇರುವುದಿಲ್ಲ. ಆತ್ಮ ವಿಶ್ವಾಸವೊಂದಿದ್ದರೆ. ಎಲ್ಲ ಕಷ್ಟಗಳಿಂದ, ಸಮಸ್ಯೆಗಳಿಂದ, ಮಾನಸಿಕ ಖಿನ್ನತೆಯಿಂದ ಪಾರಾಗುವುದೇನು ದೊಡ್ಡ ಮಾತಲ್ಲ.
ಎಸ್.ಪಿ.ಯಂಭತ್ನಾಳ, ಸಾಹಿತಿ

LEAVE A REPLY

Please enter your comment!
Please enter your name here