ಹೆಣ್ಣು ಮಾಯಾ ಜಿಂಕೆಯಾದರೆ,ಗಂಡೇನು…….?

0
284

ಹೃದಯದ ಹಳೆಯ ಜೀವವೇ, ಹೆಣ್ಣನ್ನು ಮಾಯಾ ಜಿಂಕೆಗೆ ಹೊಲಿಸುವಿಯಲ್ಲ! ಯಾಕೆ?ಒಂದು ಸಲ ಯೋಚಿಸು, ಹೆಣ್ಣು ಮಾಯಾ ಜಿಂಕೆಯಾದರೆ, ಗಂಡೇನು….? ಇದರ ಬಗ್ಗೆ ಯೋಚಿಸುವ ಸಮಯ ನಿನಗೆಲ್ಲಿ ಸಿಗಬೇಕು. ಜಗತ್ತಿನಲ್ಲಿ ಎಂದು ಮಾನವನ ಉಗಮವಾಯಿತೋ ಅಂದಿನಿಂದ ಈ ಕ್ಷಣದವರೆಗೆ ಗಂಡಸರು ಹೆಣ್ಣಿನ ಬಗ್ಗೆ ಯೋಚಿಸುತ್ತ ಬಂದಿದ್ದಾರೆ. ಒಂದು ಕ್ಷಣವೂ ಅವರು ತಮ್ಮ ಬಗ್ಗೆ ಯೋಚಿಕೊಂಡಿಲ್ಲ. ನಮ್ಮ ಪ್ರಾಚೀನ ಕಾಲದ ವೇದ, ಪುರಾಣಗಳು, ಶಾಸ್ತ್ರಗಳು ದೊಡ್ಡ ದೊಡ್ಡ ದಾರ್ಶನಿಕರು, ಋಷಿಗಳು, ಯೋಗಿಗಳು, ತ್ಯಾಗಿಗಳು ಎಲ್ಲರೂ ಹೆಣ್ಣನ್ನೂ ಮಾಯಾ ಜಿಂಕೆಗೆ ಹೋಲಿಸಿದ್ದಾರೆ. ಯಾಕೆಂದರೆ, ಹೆಣ್ಣಿನ ಬಗ್ಗೆ ಅವರಿಗೆ ಸರಿಯಾಗಿ ಯೋಚಿಸುವ ದಾರಿಗಳು ಕಂಡಿಲ್ಲ. ಯಾವುದೋ ಒಂದು ದಾರಿಯಲ್ಲಿ ವಿಚಾರಿಸಲು ಹೋಗಿ, ಪಡಬಾರದೆಲ್ಲ ಯಾತನೆಯನ್ನು ಪಟ್ಟಿದ್ದಾರೆ. ಅವರ ಯಾವ ವಿಚಾರಕ್ಕೂ ಹೆಣ್ಣಿನ ಆಳ ಸಿಕ್ಕಿಲ್ಲ. ಹೆಣ್ಣಿನ ಆಳ ತಿಳಿದುಕೊಳ್ಳವುದೇನು ಮಹಾ ದೊಡ್ಡ ಕಾರ್ಯವೆಂದು ತಿಳಿದುಕೊಳ್ಳಬೇಡ. ನೀನು ನನ್ನನ್ನು ಪ್ರೀತಿಸಬೇಕಾದರೆ ನನ್ನೆಲ್ಲಾ ಆಳ ತಿಳಿದುಕೊಂಡೆ ಪ್ರೀತಿಸುತ್ತೇನೆಂದು ಹೇಳಿದಿಯಲ್ಲ. ಇದಕ್ಕಿಂತ ಬೇರೆ ಉದಾಹರಣೆ ಬೇಕಾ? ನಮಗೂ ನಿಮ್ಮಂಥ ಮನಸ್ಸು, ಹೃದಯ ಎಲ್ಲವೂ ಇದೆ. ಒಂದು ಸೊಳ್ಳೆ ಕಚ್ಚಿದರೆ ನಿಮಗೆಷ್ಟು ನೋವಾಗುತ್ತದೆಯೋ ಅಷ್ಟೇ ನೋವು ನಮಗೂ ಆಗುತ್ತದೆ. ಅಲ್ಲವೇ? ನೋವು ಎನ್ನುವುದು ಎಲ್ಲರಿಗೂ ಅಷ್ಟೇ ಅಂದ ಹಾಗಾಯಿತು.

ಅಲ್ಲ ಪೆದ್ದ ನಾನೀಗ ನಿನಗೊಂದು ಪ್ರಶ್ನೆ ಕೇಳುತ್ತೇನೆ. ನಿಮ್ಮ ಗಂಡಸರ ಜಾತಿ, ಹೆಣ್ಣನ್ನ ಸುಂದರವಾದ ಮಾಯಾ ಜಿಂಕೆಗೆ ಹೋಲಿಸಿತು. ಆದರೆ, ನಿಮ್ಮನ್ನು ಯಾವುದಕ್ಕೂ ಯಾಕೆ ಹೋಲಿಸಿಕೊಳ್ಳಲಿಲ್ಲ? ನೀವು ಯಾವುದಾದರೊಂದು ಜಿಂಕೆಯಾಗಬಹುದಿತ್ತಲ್ಲ. ನಿಮಗೆಲ್ಲಿ ಬರಬೇಕು ಆ ಯೋಗ ! ಮಾಯಾ ಜಿಂಕೆಯಾಗುವುದೆಂದರೆ, ಸುಮ್ಮನೆ ! ಹೆಣ್ಣು ಮಾಯೆ ಅಲ್ಲ. ಮಾಯೆ ಎಲ್ಲ ತುಂಬಿಕೊಂಡಿರುವುದು ನಿಮ್ಮ ಮನಸ್ಸಿನಲ್ಲಿ ಅದು ಹೇಗೆ ಅಂತಿಯಾ? ನಿರ್ಜಿವವಾಗಿ ಬಿದ್ದಿರುವ ಬಂಡೆಗಲ್ಲಿಗೆ ಹೆಣ್ಣಿನ ರೂಪ ಕೊಟ್ಟು ಅದರಲ್ಲಿ ಯಾವುದೋ ಒಂದು ಜೀವ ಕಾಣಲು ನೋಡುವ ಜಾತಿ ನಿಮ್ಮದು. ನೀನು ಎಷ್ಟೋ ಸಲ ನನ್ನನ್ನು ಬೇಲೂರ ಶಿಲಾಬಾಲಿಕೆಗೆ ಹೋಲಿಸಿಯಲ್ಲ. ಶಿಲೆಯಲ್ಲಿ ಕೆತ್ತಿರುವ ಅಲ್ಲಿಯ ಶಿಲಾಬಾಲಿಕೆಯರನ್ನು ನೋಡಿದರೆ, ಅವುಗಳನ್ನೇ ಮುಟ್ಟಿ ಮುದ್ದಾಡಬೇಕು ಅನ್ನಿಸುತ್ತದೆ ಎಂದು ಎಷ್ಟು ಬಾರಿ ಹೇಳಿದ್ದಿ ನೆನಪಿದೇಯಾ? ಹೆಣ್ಣು ಅಂದರೆ ಮಾಯಾ ಜಿಂಕೆಯೆಂದು ನನ್ನೊಂದಿಗೆ ಮನಸ್ತಾಪ ಮಾಡಿಕೊಂಡು ಹೋಗಿರುವಿಯಲ್ಲ. ಅದಕ್ಕಿಂತ ಮೊದಲು ನಾನು ಮಾಯಾ ಜಿಂಕೆಯಾಗಿ ಕಾಣಲಿಲ್ಲವೇ?


ಏಲೋ ! ಹುಚ್ಚಾ ಮಾಯಾ ಜಿಂಕೆ ಎನ್ನುವ ಪದವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿರುವಿ. ಹೆಣ್ಣಿಗೆ ಮಾಯಾ ಜಿಂಕೆಯೆಂಬ ಪಟ್ಟ ಏಕೆ ಕಟ್ಟಿದ್ದಾರೆ ಗೊತ್ತಾ? ಮಾಯಾ ಜಿಂಕೆ ಎನ್ನುವ ಪದ ಎಷ್ಟೊಂದು ಮಧುರವಾಗಿದೆ.! ಎಷ್ಟೊಂದು ಮನೋಹರವಾಗಿದೆ. ಈ ಪದ ಕಿವಿಗೆ ಬಿದ್ದ ತಕ್ಷಣ ಏಷ್ಟೊಂದು ಆಹ್ಲಾದ ಸಿಗುತ್ತದೆ ಗೊತ್ತಾ? ನನಗನಿಸುತ್ತೆ ನಿನ್ನಂತ ಗಂಡಸರೇ ಈ ಮಾಯಾ ಜಿಂಕೆ ಎಂಬ ಪದ ಬಳಸಿರಬೇಕು. ಯಾಕೆಂದರೆ, ಆ ಪದ ಕೇಳುವುದರಲ್ಲಿಯೇ ಪರಮಾನಂದವಿದೆ. ಈ ಪರಮಾನಂದ ಪಡೆಯಲಿಕ್ಕೆ ಹೆಣ್ಣನ್ನು ಮಾಯಾ ಜಿಂಕೆಗೆ ಹೋಲಿಸಿರಬಹುದಲ್ಲ. ಹೆಣ್ಣು ನಿಜವಾಗಲೂ ಮಾಯೆ ಆಗಿದ್ದರೆ, ಗಂಡು ಏನಾಗಿರಬಹುದೆನುವಿ…..?
ಗಂಡಸರು ಹೆಣ್ಣಿನ ಮೇಲೆ ಏನೆಲ್ಲ ಅಸ್ತ್ರಗಳನ್ನೂ ಉಪಯೋಗಿಸಿದರೂ ಅವರಿಗಿನ್ನು ಹೆಣ್ಣು ಅಂದರೆ ಏನು ಎಂಬುದೇ ಗೊತ್ತಾಗಿಲ್ಲ. ಯಾಕೆಂದರೆ ಅವರ ಆಸೆ ಆಮಿಷಕ್ಕೆಂದು ಮಿತಿ ಇರಬೇಡವೇ? ಈ ಮನುಷ್ಯ ಪ್ರಪಂಚದಲ್ಲಿ ಏನಾಗಿದ್ದಾನೆಂದರೆ, ಬಾರದಿರುವ ವಿಷಯಕ್ಕೆಲ್ಲ ಯೋಚಿಸಿ ಯೋಚಿಸಿ ಯಾತನೆ ಅನುಭವಿಸುತ್ತಿದ್ದಾನೆ. ನೀನು ಹಾಗೆ ಬಾರದಿರುವ ವಿಷಯಕ್ಕೆಲ್ಲ ಯೋಚಿಸಿ, ಯಾತನೆ ಅನಿಭವಿಸುತ್ತಿರುವಿ. ನೀನು ಅನುಭವಿಸುವ ವೇದನೆ ಕಂಡು ನಾನೂ ವೇದನೆ ಅನುಭವಿಸುವಂತಾಗಿದೆ. ನನ್ನಂತ ಸುಂದರವಾದ ಮಾಯಾ ಜಿಂಕೆ ನನಗೆ ಸಿಗಬೇಕಾದರೆ ನಿನ್ನ ಪುಣ್ಯ ದೊಡ್ಡದು. ಈ ಸುಂದರವಾದ ಮಾಯಾ ಜಿಂಕೆಯೊಂದಿಗೆ ಒಂದಿಷ್ಟು ಕಾಲ ನೆಮ್ಮದಿಯಾಗಿಬಾಳುವ ಅವಕಾಶ ಆ ದೇವರಲ್ಲಿ ಕೇಳಿಕೊಂಡು ಬರಬಾರದೆ.? ನಾವಿಬ್ಬರೂ ಪ್ರೇಮಿಗಳು ಕಣೋ, ನಮ್ಮಿಬ್ಬರಲ್ಲಿ ಮಧುರವಾದ ಭಾವನೆಗಳಿರಬೇಕು. ಕ್ಷಣ ಕ್ಷಣಕ್ಕೂ ಹಂಬಲದ ಹೊಳೆ ಹರಿಯುತ್ತಿರಬೇಕು. ಇಬ್ಬರ ಕೆನ್ನೆಗಳಲ್ಲಿ ಜೇನು ತುಪ್ಪ ಸುರಿಯುತ್ತಿರಬೇಕು. ನಾನೀಗ ಅರಳಿದ ಹೂವು ಕಣೋ, ನೀನು ನನ್ನ ದುಂಬಿ ಈ ಹೂವ ಸ್ಪರ್ಶ ಮಾಡುವ ಅಧೀಕಾರ ನಿನ್ನದು ಇದನ್ನೆಲ್ಲ ಬಿಟ್ಟು ಗೂಬೆಯ ಹಾಗೆ ಮುಖ ಗಂಟ್ಟಿಕ್ಕಿಕೊಂಡು ಹೋಗಿರುವಿಯಲ್ಲ ಏನದರರ್ಥ…..?
ನನ್ನೊಂದಿಗೆ ಕಳೆದ ಕ್ಷಣಗಳನ್ನು ನೀನೆಂದೂ ಮರೆಯಲಾರಿ. ಯಾಕೆಂದರೆ, ಪ್ರೇಮಿಗಳ ಮಧ್ಯದಲ್ಲಿ ಕೊನೆಗೆ ಉಳಿಯುವುದು ನೆನಪೊಂದೆ. ನಿನಗೆ ನೆನಪುಗಳು ಬೇಕಾ ಅಥವಾ ನಾನು ಬೇಕಾ ? ಆಯ್ಕೆ ನಿನ್ನದು. ಎರಡು ಬೇಡವೇನಲು ಸಾಧ್ಯವಿಲ್ಲ. ಒಂದು ವೇಳೆ ನೀನು ಸಾಧ್ಯವೆಂದು ಹೇಳಿದರೆ, ನಿನ್ನ ಆತ್ಮಕ್ಕೆ ನೀನೆ ಕಳಂಕ ತಂದುಕೊಂಡಂತೆ.

ನಾನು ಮಾಯಾ ಜಿಂಕೆಯಲ್ಲೋ,ನಿನಗಾಗಿ ಕಾಯುತ್ತಿರುವ ನಿನ್ನ ಹೃದಯದ ಜೀವ. ನೀನು ಮಾಯಾ ಜಿಂಕೆ ಎಂದು ಕರೆದರೆ, ನಾನು ಏನಂತ ಕರೆಯಲಿ ನಿನ್ನ? ನಿನ್ನನ್ನಲ್ಲ ನಿಮ್ಮ ಗಂಡು ಕುಲವನ್ನೇ? ಹೇಳು ನಾನು ಅಳಿದು ಹೋಗುವ ಮುನ್ನ ಒಂದೆ ಒಂದು ಬಾರಿ ಭೇಟಿಯಾಗು. ಆ ಮೇಲೆ ವ್ಯಥೆ ಪಡಬೇಡ. ಚಿಂತೆಗೆ ಒಳಗಾಗಬೇಡ. ಭಾವಗಳ ಉದ್ವೇಗಕ್ಕೆ ಬಳಲಬೇಡ, ನರಳಬೇಡ. ನಾನೂ ಅಳೀಯಬಹುದು.ನನ್ನ ಪ್ರೀತಿ ಅಳಿಯಲಾರದು. ಇದನ್ನು ಸರಿಯಾಗಿ ನೆನಪಿಟ್ಟುಕೊಳ್ಳಿ.
ಮಾಯೆಯ ಮೋಹ ತೊರೆದು ಬಾ ನಾನು ಯಾರೆಂದು ನಿನಗೆ ಗೊತ್ತಾಗಿವುದು. ನಮ್ಮಿಬ್ಬರ ಮಧುರ ಸ್ವರಗಳು ಒಂದುಗೂಡಬಲ್ಲವೂ. ನಮ್ಮಿಬ್ಬರ ಆತ್ಮ ಒಂದಾಗಬಲ್ಲುದು. ಕಳೆದ ಕ್ಷಣಗಳು ಮರಳಿ ಸಿಕ್ಕಾವು. ಮಾಯೆಯ ಮೋಹ ನೀನು ಇಟ್ಟುಕೊಂಡರೆ, ನಿನ್ನನ್ನು ಮೋಹದ ಜಿಂಕೆ ಎಂದು ಕರೆಯಬೇಕಾಗುತ್ತದೆ. ಮಾಯೆಯ ಬ್ರಮೆಯಲ್ಲಿ ಮುಳುಗುವ ಜಾತಿ ಗಂಡಿನದೇನಬೇಕಾದಿತು. ನಮ್ಮಂಥ ಮಾಯಾ ಜಿಂಕೆಗಳಿಂದಲೇ ಈ ಪ್ರಪಂಚದಲ್ಲಿ ಇನ್ನೂ ಒಂದಿಷ್ಟು ರಸಿಕತೆ ಉಳಿದಿದೆ. ಮಾಯಾ ಜಿಂಕೆ ಎನ್ನುವುದಕ್ಕೆ ಹಲವು ಅರ್ಥವುಂಟು. ನೀನು ತಲೆಗೆ ಮುಡಿಸಿ ಹೋದ ಹೂವು ಇನ್ನೂ ಬಾಡಿಲ್ಲ. ಅದು ಬಾಡುವುದು ಇಲ್ಲ. ಈ ಮಾತು ನಿನಗೆ ಅರ್ಥವಾಗಿಲ್ಲ ಅಲ್ಲ? ನನ್ನೆದೆಯ ತುಂಬ ನಿನ್ನದೇ ಪ್ರೇಮ ಬೆಳಕು ತುಂಬಿಕೊಂಡಿದೆ. ನನ್ನ ಪ್ರೀತಿ ನಿನಗೆ ಅರ್ಥವಾಗದಿದ್ದರೂ ಪರವಾಗಿಲ್ಲ. ನಿನ್ನನ್ನು ನೀನು ಅರ್ಥ ಮಾಡಿಕೊಂಡರೆ ಹೆಣ್ಣು ಏನೆಂಬುದು ಗೊತ್ತಾದಿತು. ಗಂಡು ಮಾಯಾ ಜಿಂಕೆಯನ್ನು ಗೆಲ್ಲಲಾಗದೆ ಸೋಲೊಪ್ಪಿಕೊಳ್ಳುವ ಹೇಡಿ ಎಂದು ತಿಳಿದಿತ್ತು.
ನಿನ್ನ ವಾತ್ಸಲ್ಯ.

LEAVE A REPLY

Please enter your comment!
Please enter your name here