ನಿನ್ನೊಳಗೊಂದು ಎನೋ ಕದನವಿದೆಯಲ್ಲ.

0
215

ಕದನವೆನ್ನುವುದು ಪ್ರತಿಯೊಬ್ಬ ಮನುಷ್ಯನಲ್ಲಿರುತ್ತದೆ.ಕದನ ಪ್ರೀತಿಯಿಂದ ಇದ್ದರೆ ಅದು ಯಾರನ್ನು ಸುಡುವುದಿಲ್ಲ. ಕದನ ಕದನದಿಂದ ಕೂಡಿದ್ದರೆ ಅದು ತನ್ನನ್ನು ಅಷ್ಟೆ ಅಲ್ಲ ತನ್ನ ಸುತ್ತಲೂ ಹಣೆದುಕೊಂಡಿರುವವರಿಗೂ ಸುಡುತ್ತದೆ.ಎಲ್ಲರ ಜೀವನದಲ್ಲಿ ಎರಡು ರಂಗಗಳನ್ನು ಗುರುತಿಸಬಹುದು.ಒಂದು ಅಂತರಂಗ ಇನ್ನೊಂದು ಬಹಿರಂಗ, ಬಹಿರಂಗ ವಿಷಯದಲ್ಲಿ ವ್ಯಕ್ತಿ ಕದನ ಮಾಡುತ್ತಿದ್ದರೆ ಅದನ್ನು ತಡೆಗಟ್ಟುವ ಸಾಧ್ಯತೆಯಿದೆ. ಅಥವಾ ಬಹಿರಂಗ ಕದನದಿಂದ ಅವನ ಮನಸ್ಸಿಗೆ ಅಘಾತವಾಗಿದ್ದರೆ ಸಾಧ್ಯವಿದ್ದ ಮಟ್ಟಿಗೆ ಪರಿಹಾರ ನೀಡುವುದು ಕಷ್ಟ. ಅದು ಯಾರು ಎನೆ ಹೇಳಿದರೂ ಅವನಂತರಂಗದಲ್ಲಿ ನಿಲ್ಲುವುದೆ ಇಲ್ಲ. ಇನ್ನೊಬ್ಬರ ವಿಷಯ ಎನಾದರಾಗಲಿ ನಿನ್ನೊಳಗೊಂದು ನಡೆದಿರುವ ಅಂತರಂಗ ಕದನದಲ್ಲಿ ನೀನು ಜಯಶಾಲಿಯಾಗು.

ನಿನ್ನಂತರಂಗದೊಳಗೊಂದು ಯಾವುದೋ ಕದನ ಪ್ರಾರಂಬವಾದರೆ ನಿದ್ದೆ, ಊಟ, ನೀರಡಿಕೆ, ಪ್ರಪಂಚ ಎಲ್ಲಾ ಬೇಡವಾಗಿ ಬಿಡುತ್ತದೆ. ಅಲ್ಲವೇ? ನಿನ್ನ ಅತ್ಯಮೂಲ್ಯವಾದ  ಬುದ್ದಿ ಶಕ್ತಿಯನ್ನೆಲ್ಲ ಆ ಕದನವನ್ನು ತಡೆಗಟ್ಟಲು ಉಪಯೋಗಿಸುವಿ ಆದರೂ ನಿನಗದು ಸಾಧ್ಯವಾಗುವುದಿಲ್ಲ. ನಿನ್ನಂತರಂಗದೊಳಗಿರುವ ಕದನ ನಿನ್ನನ್ನು ಎಂದಿಗೂ ಸೋಲುವುದಿಲ್ಲ. ಅದು ಸೋಲಿಸದಿದ್ದರೂ ನಾನೇ ಸೋತೆನೆಂದು ಒಪ್ಪಿಕೊಳ್ಳುವಿ. ನಿನ್ನಂತರಂಗದಲ್ಲಿ ಕದನ ಪ್ರಾರಂಭವಾದರೆ ಸೋಲು ಒಪ್ಪಿಕೊಳ್ಳಬೇಡ. ಯಾಕೆಂದರೆ ಆ ಕದನ ನಡೆಯುತ್ತಿರುವುದು ನಿನ್ನನ್ನು ಸೋಲಿಸಲು ಅಲ್ಲ, ನಿನ್ನಲ್ಲಿರುವ ಗಟ್ಟಿತನ, ಧೈರ್ಯ ನೀನು ವಿಚಾರಿಸುವ ವಿಧಾನ ನೋಡಲು ನಡೆಯತ್ತಿರುವ ಯಾವುದೋ ಘಟನೆ ಕುರಿತು ನಿನ್ನಂತರಂಗದೊಳಗೆ ಕದನ ನಡೆದಾಗ ಜಗತ್ತಿನಲ್ಲಿ ಸನ್ನಿವೇಶಗಳು ನಿನಗೆ ನಿರುತ್ಸಾಹ, ಜಿಗುಪ್ಸೆ ಹುಟ್ಟಿಸಬಹುದು ಆಗ ಜಗತ್ತು ನಿನಗೆ ಜಡವಾಗಿ ಕಾಣಬಹುದು, ನಿನಗೆ ಜಗತ್ತು ಜಡವಾಗಿ ಕಂಡರೆ ಜಗತ್ತೆ ನಿನಗೆ ಜಡವಾಗಿ ನೋಡುವುದು.

ಈ ಪ್ರಪಂಚದಲ್ಲಿ ಪ್ರತಿಯೊಂದಕ್ಕೂ ಮಿತಿ ಇದೆ. ಇದು ನಿನಗೆ ಗೊತ್ತಿಲ್ಲ ಮತ್ತು ನಿನ್ನಾಸೆಗಳಿಗೆ ಯಾವ ಮಿತಿಯೂ ಇಲ್ಲ. ಇದು ಸಹ ನಿನಗೆ ಗೊತ್ತಿಲ್ಲ. ಗೊತ್ತಿಲ್ಲದೆ ಎನಾದರೂ ಮಾಡಿದರೆ ನಿನ್ನೊಳಗೊಂದು ಕದನ ಪ್ರಾರಂಭವಾಗುತ್ತದೆ. ಅದನ್ನೇ ನೀನು ಚಿಂತೆ ಎಂದು ಕೆರೆಯುವಿ. ಚಿಂತೆ ಮಾಡುವ ಮೊದಲು ಒಂದು ಸಲ ವಿಚಾರಿಸು ಮಾಡುವ ಚಿಂತೆಗೆ  ಪರಿಹಾರವಿದ್ದರೆ ಚಿಂತಿಸು.

ನೀನು ಎಷ್ಟೆ ಚಿಂತಿಸಿದರೂ ಪರಿಹಾರ ಇರದಿದ್ದರೆ ಚಿಂತಿಸಬೇಡ ಸುಮ್ಮನೆ ಇದ್ದು ಬಿಡು, ಯಾಕೆಂದರೆ ನಿನ್ನೆದೆಯೊಳಗೆ ಹುಟ್ಟಿಕೊಂಡ ಚಿಂತೆಯಾಗಲಿ ಕದನವಾಗಲಿ ನಿನ್ನಿಂದ ದೂರ ಹೊಗುತ್ತದೆ. ನಿನ್ನೆದೆಯೊಳಗಿನ ಕದನ ನಿಲ್ಲುತ್ತದೆ. ಆಗ ನೀನು ಮೊದಲಿನಂತೆ ಆಗಬಹುದು. ಈ ಭೂಮಿಯಲ್ಲಿ ಹುಟ್ಟಿಕೊಂಡ ಜೀವಿಗಳಿಗೆಲ್ಲ ನಾಶವಿದೆ. ಇದು ನಿನಗೂ ಗೊತ್ತಿದೆ. ಆದರೂ ನಿನ್ನನ್ನು ಹೊರತು ಪಡಿಸಿ ಭೂಮಿ ಮೇಲಿರುವುದೆಲ್ಲ ಶಾಶ್ವತವೆಂದು ಚಿಂತಿಸುವಿ ಹೀಗೆ ಚಿಂತಿಸುವುದರಿಂದ ಮತ್ತೆ ಯಾವುದೋ ಘಟನೆಯನ್ನು  ನೀನು ಗೆಲ್ಲಬೇಕೆಂದು ಹಂಬಲಿಸುವಿ. ಅದೆ ವಿಷಯ ಕುರಿತು ನಿನ್ನೊಳಗೊಂದು ಕದನ ಪ್ರಾರಂಭವಾಗುವುದು. ಈ ಕದನದಲ್ಲಿ ನಿನ್ನ ಮೇಲೆ ನೀನೆ ಅಪನಂಬಿಕೆ ಹುಟ್ಟಿಸಿಕೊಳ್ಳುವಿ. ಈ ಪ್ರಪಂಚದಲ್ಲಿ ನಿನಗಿಂತ ಶ್ರೇಷ್ಟವಾದದ್ದೂ ಯಾವುದೂ ಇಲ್ಲ. ನೀನೆ ಶ್ರೇಷ್ಟ. ನೀನು ಇಷ್ಟೊಂದು ಶ್ರೇಷ್ಟವಾಗಿರಬೇಕಾದರೆ ಕನಿಷ್ಟದರ ಬಗ್ಗೆ ಏಕೆ ಚಿಂತಿಸುವಿ. ನೀನು ಶ್ರೇಷ್ಟವಾಗಿರುವುದರಿಂದ ನಿನ್ನ ವಿಚಾರಗಳೂ ಶ್ರೇಷ್ಟವಾಗಿರಬೇಕು. ಶ್ರೇಷ್ಟವೆಂದರೆ ಯಾವುದು ಎಂದು ಚಿಂತಿಸಬೇಡ , ಯಾಕೆಂದರೆ ನಿನ್ನೊಳಗೊಂದು ಮತ್ತೆ ಕದನ ಪ್ರಾರಂಭವಾಗಿ ಪ್ರಾರಂಭವಾಗಿ ಬಿಡಬಹುದು. ಹಾಗಾದರೆ ಮತ್ತೆ ಶ್ರೇಷ್ಟ ಯಾವುದೆಂದು ಯೊಚಿಸುವೆಯಾ? ನಿನ್ನೆದೆಯೊಳಗೆ ಯಾವುದೇ ಕದನ ನಡೆದರೂ ನೀನು ಕೊರಗದಿದ್ದರೆ ಅದುವೇ ಶ್ರೇಷ್ಟವಾದದ್ದು. ಈ ಸೃಷ್ಠಿಯೊಳಗೆ ನಿನ್ನನ್ನು ಎಲ್ಲವೂ ಮೆಚ್ಚುವಂತಿರಲು ಸಾಧ್ಯವಿಲ್ಲ. ನಿನ್ನನ್ನು ಪ್ರತಿಯೊಬ್ಬರು ಮೆಚ್ಚಿಕೊಳ್ಳಬೇಕೆಂದು ಭಾವಿಸಬೇಡ ಮೊದಲು ನಿನ್ನನ್ನು ನೀನು ಮೆಚ್ಚಿಕೊ.

ಈ ಪ್ರಪಂಚದಲಿ ನೋವು, ನಿರಾಶೆ, ದುಃಖ, ಭಯ ನಿನಗಷ್ಟೆ ಇಲ್ಲ ಪ್ರಪಂಚವೇ ದುಃಖದಿಂದ ಕೂಡಿದೆ.

ಈ ದುಃಖದಿಂದ ಕೂಡಿರುವ ಪ್ರಪಂಚದ ಮುಂದೆ ನಿನ್ನ ದುಃಖ ಕೇಳುವವರಾರು? ನಿನಗೆ ಅವರಿವರ ಮಾತು ಕೇಳುವುದರಿಂದ ಸಂತೋಷ ಸಿಗುವುದಾ? ಸಿಗುವುದಿಲ್ಲ. ನಿನಗೆ ಸಂತೋಷ ಸಿಗಬೇಕೆಂದರೆ ನೋವು ಅನುಭವಿಸಬೇಡ. ಕಷ್ಟಪಟ್ಟಾಗಲೆ ಸಂತೋಷ ಸಿಗುವುದು ಎಂಬ ಮಾತೊಂದಿದೆಯಲ್ಲವೇ ಎಂದು ಯೋಚಿಸುವೆಯಾ ಹಾಗಾದರೆ ಯಾವುದನ್ನು ಕಷ್ಟವೆಂದು ತಿಳಿದುಕೊಳ್ಳುವಿ?  ಇದಕ್ಕೆಲ್ಲ ನಿನಗೆ  ಉತ್ತರ ಸಿಗುವುದಿಲ್ಲ ಇಂತ ಪ್ರಶ್ನೆಗಳಿಗೆಲ್ಲ ಉತ್ತರ ಹುಡುಕುತ್ತ ಕುಳಿತರೆ ಮತ್ತೆ ನಿನ್ನೊಳಗೊಂದು ಎನೊ ಕದನ ಪ್ರಾರಂಭವಾಗಿ ಬಿಡುತ್ತದೆ. ಅದಕ್ಕಾಗಿ ನಿನ್ನಂತರಂಗದೊಳಗೆ ಕದನ ಮಾಡುವ ಸನ್ನಿವೇಶಗಳಿಗೆ ಆಸ್ಪದ ಕೊಡಬೇಡ. ನಿನ್ನೆದೆಯನ್ನು ರಣರಂಗದ ತಾಣ ಮಾಡಬೇಡ. ಯಾಕೆಂದರೆ ಅಲ್ಲಿ ನಾಶವಿದೆ. ನಿನ್ನಂತರಂಗ ರಣರಂಗದೊಳಗೆ ಯಾವ ಕದನವೂ ನಡೆಯದಿದ್ದರೆ ಗೆಲವು ನಿನಗಿದೆ. ಅದಕ್ಕಾಗಿ ನಿನ್ನಂತರಂಗದ ಮನಸ್ಸು ಹೇಗೆ ಇರಬೇಕೆಂಬುದು ನಿನಗೆ ಬಿಟ್ಟದ್ದು.

ಶಶಿಕಾಂತ ಯಂಭತ್ನಾಳ ,ಕಾದಂಬರಿಕಾರರು.

LEAVE A REPLY

Please enter your comment!
Please enter your name here