ಸರ್ಕಾರದ ಶಿಷ್ಠಾಚಾರ ಅನುಸರಿಸಿ: ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಸೂಚನೆ

0
120

ಧಾರವಾಡ ಮಾ.19: ಕೊರೊನಾ ವೈರಸ್ ಕೋವಿಡ್-19 ಸೋಂಕು ತಡೆಯಲು ಖಾಸಗಿ ಆಸ್ಪತ್ರೆಗಳು ಮತ್ತು ವೈದ್ಯರ ಸಹಕಾರವು ಅಗತ್ಯವಾಗಿದೆ. ಕೊರೊನಾ ವೈರಸ್ ಸೋಂಕು ಲಕ್ಷಣಗಳಿರುವವರು ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬಂದರೆ ಕೂಡಲೇ ಆ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗೆ ಮಾಹಿತಿ ನೀಡಬೇಕು. ಎಲ್ಲ ಖಾಸಗಿ ಆಸ್ಪತ್ರೆಗಳು ಸರ್ಕಾರ ಸೂಚಿಸಿರುವ ಶಿಷ್ಠಾಚಾರ ಪಾಲಿಸಬೇಕು. ಕೊರೊನಾ ಶಂಕಿತ ವ್ಯಕ್ತಿಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಕಾರ್ಯ ಪಡೆಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಸ್ಥಿತಿಯನ್ನು ಎದುರಿಸಲು ಖಾಸಗಿ ಆಸ್ಪತ್ರೆಗಳು ಸರ್ಕಾರದೊಂದಿಗೆ ಕೈಜೋಡಿಸಬೇಕು. ಸೋಂಕು ತಡೆಗಟ್ಟುವ ಕ್ರಮಗಳು ಸಮರೋಪಾದಿಯಲ್ಲಿ ಎಲ್ಲ ಹಂತದಲ್ಲಿ ನಡೆಯುತ್ತಿವೆ. ಖಾಸಗಿ ಆಸ್ಪತ್ರೆಗಳು ತಮ್ಮ ದೈನಂದಿನ ಸೇವೆ ನೀಡಬಹುದು. ಆದರೆ ಕೊರೊನಾ ವೈರಸ್ ಸೋಂಕಿತ ಲಕ್ಷಣಗಳಿರುವವರು ಆಸ್ಪತ್ರೆಗಳಿಗೆ ಬಂದರೆ ಅವರ ಬಗ್ಗೆ ಹಾಗೂ ಅವರ ಹಿಂದಿನ 15 ದಿನಗಳ ಪ್ರವಾಸದ ಮಾಹಿತಿಯೊಂದಿಗೆ ತಕ್ಷಣ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ದೂರವಾಣಿ ಸಂಖ್ಯೆ 9449843049 ಅಥವಾ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ದೂರವಾಣಿ ಸಂಖ್ಯೆ 9449843254 ನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು. ಹುಬ್ಬಳ್ಳಿಯ ಕಿಮ್ಸ್‍ನಲ್ಲಿ ಅಂತಹ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ಯಾವುದೇ ಖಾಸಗಿ ಆಸ್ಪತ್ರೆಗಳು ಈ ಪ್ರಕರಣಗಳಲ್ಲಿ ಸದ್ಯಕ್ಕೆ ಚಿಕಿತ್ಸೆ ನೀಡುವುದು ಬೇಡ. ಖಾಸಗಿ ಆಸ್ಪತ್ರೆಗಳ ಸೇವೆ ಅಮೂಲ್ಯ ಆದರೆ ಕೋವಿಡ್-19 ಕೊರೊನಾ ವೈರಸ್ ತಡೆಯಲು ಒಟ್ಟಾಗಿ ಪ್ರಯತ್ನಿಸಬೇಕು ಎಂಬುದು ಸರ್ಕಾರದ ಉದ್ದೇಶವಾಗಿದೆ. ಆಯುಷ್ ವೈದ್ಯರು ಕೂಡ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡಬಾರದು ಆದರೆ ಸಾರ್ವಜನಿಕರಿಗೆ ಈ ಕುರಿತು ಅರಿವು ಮೂಡಿಸಬಹುದು, ರೋಗ ಲಕ್ಷಣ ಇದ್ದವರು ಕಂಡರೆ ಕೂಡಲೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಸಿ ಸತೀಶ ಮಾತನಾಡಿ, ಕೆಪಿಎಮ್‍ಇ ಅಡಿ ನೋಂದಾಯಿಸಲ್ಪಟ್ಟಿರುವ ಎಲ್ಲ ಖಾಸಗಿ ಆಸ್ಪತ್ರೆಗಳ ಸಭೆ ಕರೆದು ಕೊರೊನಾ ವೈರಸ್ ಶಂಕಿತರ ನಿರ್ವಹಣಾ ಕ್ರಮಗಳ ಬಗೆಗೆ ತಕ್ಷಣ ಜಾಗೃತಿ ಮೂಡಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ ಮಾತನಾಡಿ, ಖಾಸಗಿ ಆಸ್ಪತ್ರೆಗಳು ಸದ್ಯಕ್ಕೆ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡುವುದು ಬೇಡ. ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡ್, ವೈದ್ಯರು, ನರ್ಸ್‍ಗಳು ಹಾಗೂ ಸಹಾಯಕರನ್ನು ಪಾಳಿ ಆಧಾರದಲ್ಲಿ ಕರ್ತವ್ಯ ನಿಯೋಜಿಸಲು ಸಿದ್ಧತೆ ಮಾಡಿಕೊಳ್ಳಬೇಕು. ಹಾಗೂ ನಿಯೋಜಿಸಲ್ಪಟ್ಟ ವೈದ್ಯರು ಮತ್ತು ಸಹಾಯಕರ ವಿವರಗಳನ್ನು ಜಿಲ್ಲಾಡಳಿತಕ್ಕೆ ಒದಗಿಸಬೇಕು. ಇಂತಹ ವೈದ್ಯರು ಮತ್ತು ಸಿಬ್ಬಂದಿಗಳು ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಬಾರದು. ಅವರಿಗೆ ಎಲ್ಲ ತರಬೇತಿ ನೀಡಲಾಗುವುದು. ಕೊರೊನಾ ರೋಗಿಗಳ ಚಿಕಿತ್ಸೆಗೆ ಅನುಸರಿಸಬೇಕಾದ ಕ್ರಮ, ರಕ್ಷಣಾ ಮತ್ತು ಜೈವಿಕ ವೈದ್ಯಕೀಯ ಸಾಮಗ್ರಿಗಳ ವಿಲೇವಾರಿ ಕುರಿತು ಮಾರ್ಗದರ್ಶನಕ್ಕಾಗಿ ಜಿಲ್ಲಾ ಆರೋಗ್ಯ ಇಲಾಖೆಯ ಮೈಕ್ರೋ ಬಯೋಲಾಜಿಸ್ಟ್ ಡಾ. ಮಂಜುನಾಥ ಅವರ ದೂರವಾಣಿ ಸಂಖ್ಯೆ 9480816210 ನ್ನು ಸಂಪರ್ಕಿಸಬಹುದು ಎಂದರು.

ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣಕುಮಾರ ಮಾತನಾಡಿ, ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡಲು ಕಿಮ್ಸ್ ಸಜ್ಜಾಗಿದೆ. ಪ್ರಯೋಗಾಲಯ ಮಾದರಿಗಳ ಸಂಗ್ರಹ, ಚಿಕಿತ್ಸಾ ವಿಧಾನ ಕುರಿತು ಸಿಬ್ಬಂದಿಗಳಿಗೆ ತಿಳುವಳಿಕೆ ನೀಡಲಾಗಿದೆ. ಖಾಸಗಿ ಆಸ್ಪತ್ರೆಗಳು ಕೂಡ ಮಾನವ ಸಂಪನ್ಮೂಲ ಮತ್ತು ರಕ್ಷಣಾ ಸಾಮಗ್ರಿಗಳ ಕ್ರೋಢಿಕರಣದಲ್ಲಿ ಸಹಕಾರ ನೀಡಬೇಕು ಎಂದರು.

ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಶಿವಕುಮಾರ ಮಾನಕರ, ಎಸ್‍ಡಿಎಮ್ ಆಸ್ಪತ್ರೆಯ ಡಾ. ವಿಜಯ ಕುಲಕರ್ಣಿ, ಡಾ. ಎಸ್.ಎಮ್. ಹೊನಕೇರಿ, ಡಾ. ಎಸ್.ಎಮ್. ನಿಂಬಣ್ಣವರ, ಡಾ. ತನುಜಾ, ಡಾ. ಸಂಜೀವ ಕುಲಕರ್ಣಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಿನಾಯಕ ಪಾಲನಕರ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here