ಕರಿಜನ ವರದಿ
ವಿಜಯಪುರ : ಮಹಿಳೆಯ ಸ್ಥಾನ ಅತ್ಯಂತ ಹಿರಿದಾಗಿದ್ದು, ಕುಟುಂಬದ ಅಷ್ಟೇ ಅಲ್ಲ ಸಮಾಜದ ಉನ್ನತಿಗೆ ಆಕೆಯ ಕೊಡುಗೆ ಅಪಾರ ಎಂದು ಖ್ಯಾತ ಪ್ರಸೂತಿ ತಜ್ಞೆ ಡಾ.ಜಯಶ್ರೀ ಮಂಗಲಗಿ ಹೇಳಿದರು.
ವಿಜಯಪುರದ ಹಳಕೇರಿ ಗಲ್ಲಿಯಲ್ಲಿರುವ ಗಾಯಿ ಬಡಾವಣೆಯ ಬಕುಲ ಧಾಮದಲ್ಲಿ ಸಿರಿಗನ್ನಡ ವೇದಿಕೆ ಮಹಿಳಾ ಘಟಕದ ನೇತೃತ್ವದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಶ್ರೇಯೋಭಿವೃದ್ಧಿ ಸಮಾಲೋಚನಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮಹಿಳೆ ತ್ಯಾಗದ ಪ್ರತೀಕ, ಕರುಣೆಯ ಗಣಿ, ವಾತ್ಸಲ್ಯದ ಪ್ರತಿಬಿಂಬ, ಮಹಿಳೆ ಸಹನೆಯ ಮೂರ್ತಿ, ಆದರೆ ಅದು ಆಕೆಯ ದೌರ್ಬಲ್ಯವಲ್ಲ, ಮಹಿಳೆ ಅಪಾರ ಶಕ್ತಿವಂತಳು, ಅಸಾಧ್ಯವಾದುದನ್ನು ಸಾಧಿಸುವ ತೋರಿಸುವ ಛಲಗಾರಿಕೆ ಮಹಿಳೆಯಲ್ಲಿದೆ ಎಂದರು.
ಶಿಕ್ಷಣ ಇಲಾಖೆಯ ವಿಶ್ರಾಂತ ಅಧಿಕಾರಿ ವಿಮಲಾ ಹಂದಿಗೋಳ ಮಾತನಾಡಿ, ಜೀವನದಲ್ಲಿ ಯಾವುದೇ ಬಗೆಯ ತೊಂದರೆ ಬಂದರೂ ಅದನ್ನು ಧೈರ್ಯದಿಂದ ಎದುರಿಸುವ ಗುಣವನ್ನು ಮಹಿಳೆ ಹೊಂದಿದ ಕಾರಣ ಮಹಿಳೆ ಸಬಲೆ, ಆಕೆ ಅಬಲೆಯಲ್ಲ, ಎಲ್ಲ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಗಾಯಕಿ ನಂದಾ ಮಿರ್ಜಿ ಮಾತನಾಡಿದರು. ರೇಖಾ ಮುಜುಮದಾರ, ಆರ್.ವೈ. ಕಾಂಬಳೆ, ಎಂ.ಎಂ. ಬಾಗೇವಾಡಿ, ಎಸ್.ವಿ. ಕದಂ, ಜಿ.ವೈ. ಕುಬಕಡ್ಡಿ, ಸುನಂದಾ ಹೊಕ್ರಾಣಿ ಉಪಸ್ಥಿತರಿದ್ದರು.
ವೈಶಾಲಿ ಥೊಬ್ಬಿ ಪ್ರಾರ್ಥಿಸಿದರು. ಜ್ಯೋತಿ ಕುಲಕರ್ಣಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕಿ ಅನಿತಾ ಗಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಪಿ. ಕಡ್ಲಿ ಕಾರ್ಯಕ್ರಮ ನಿರೂಪಿಸಿದರು. ವಿ.ಬಿ. ದಿವಾಣಜಿ ವಂದಿಸಿದರು.







