ವಿಜಯಪುರ: ಸಿನಿಮಾಗಳಲ್ಲಿ ನಟಿಸುವ ನಟ - ನಟಿಯರು ಹೀರೋಗಳಲ್ಲ ಅವರು ಕೇವಲ ನಟರು ಮಾತ್ರ ನಿಜವಾದ ಹೀರೋಗಳೆಂದರೆ ನಮ್ಮ ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಹೋರಾಟಗಾರರು ಹಾಗೂ ದೇಶದ ಗಡಿಯಲ್ಲಿ ನಿಂತು ನಮ್ಮನ್ನು ರಕ್ಷಿಸುತ್ತಿರುವ ಸೈನಿಕರು ನಿಜವಾದ ಹೀರೋಗಳು ಎಂದು ವಾಗ್ಮಿಗಳಾದ ಬಸವರಾಜ ಹಂಚಲಿ ಮಾತನಾಡಿದರು.
ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಭಗತ್ ಸಿಂಗ್ ರಾಜಗುರು ಸುಖದೇವ ಅವರ ಬಲಿದಾನ ದಿವಸದ ಅಂಗವಾಗಿ ಹಮ್ಮಿಕೊಂಡಿದ್ದ ಉಘೇ ವೀರಭೂಮಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕರಾಗಿ ಮಾತನಾಡಿದ ಅವರು ಭಾರತದ ದೇಶದ ಶ್ರೇಷ್ಠತೆ ಮತ್ತು ಪರಂಪರೆ ನಮಗೆಲ್ಲ ಪ್ರೇರಣೆ ಆಗಬೇಕು, ಈ ಮೂರು ಜನ ತರುಣರು ತಮ್ಮ ಚಿಕ್ಕ ವಯಸ್ಸಿನಲ್ಲಿ ಭಾರತ ಮಾತೆಯನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಮುಕ್ತ ಮಾಡಬೇಕೆಂದು ಕ್ರಾಂತಿಕಾರಿ ಹೋರಾಟವನ್ನು ಮಾಡಿದರು, ತಾವು ಗಲ್ಲಿಗೇರುವ ಸಮಯದಲ್ಲಿ ನಗುತ್ತಾ ಘೋಷಣೆಗಳನ್ನು ಮೊಳಗಿಸುತ್ತಾ ಭಯವಿಲ್ಲದೆ ಗಲ್ಲಿಗೇರಿದ ಮಹಾನ್ ರತ್ನಗಳು ಇವರನ್ನು ಇಂದಿನ ಯುವಕರು ಸ್ಮರಿಸಿಕೊಳ್ಳಬೇಕು ಇವರು ನಮಗೆ ಪ್ರೇರಣೆ ಆಗಬೇಕು ಎಂದರು.
ಎಬಿವಿಪಿಯ ಕೇಂದ್ರೀಯ ಕಾರ್ಯಸಮಿತಿ ಸದಸ್ಯ ಸಚಿನ ಕುಳಗೇರಿ ಮಾತನಾಡಿ ಭಾರತದ ಸ್ವತಂತ್ರ ಹೋರಾಟದಲ್ಲಿ ಸಾವಿರಾರು ಜನ ಯುವಕರ ಹೋರಾಟ, ಹಾಗೂ ಬಲಿದಾನವಾಗಿದೆ, ಸ್ವಾತಂತ್ರ್ಯ ನಂತರದ ಯುವಶಕ್ತಿ ದೇಶಕ್ಕಾಗಿ ಬದುಕುವ ಅವಶ್ಯಕತೆ ಇದೆ, ಆದರೆ ಇಂದಿನ ಯುವಕರು ಡ್ರಗ್ಸ್, ಗುಟ್ಕಾ, ಮದ್ಯಪಾನಕ್ಕೆ ದಾಸರಾಗಿ ತಮ್ಮ ಅಮೂಲ್ಯ ಶಕ್ತಿಯನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ, ಇದರಿಂದ ದೂರವಾಗಿ, ಸಶಕ್ತ, ಸದೃಢ, ಸ್ವಾಭಿಮಾನಿ ಭಾರತವನ್ನು ನಿರ್ಮಾಣ ಮಾಡುವಲ್ಲಿ ನಾವೆಲ್ಲರೂ ಪಾತ್ರರಾಗಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾ ವಿಜಯಕುಮಾರ ಭಾವಿ ಮಾತನಾಡಿ ಸ್ವಾಭಿಮಾನಿ, ಸ್ವದೇಶಿ, ಭಾರತವನ್ನು ನಿರ್ಮಾಣ ಮಾಡಬೇಕು, ನಮ್ಮ ದೇಶ ಇಂದು ಬಹಳಷ್ಟು ಮುಂದುವರೆಯುತ್ತಿದೆ ಅದಕ್ಕೆ ಯುವಶಕ್ತಿ ಬೆಂಬಲವಾಗಿ ನಿಂತು ವಿಶ್ವಗುರು ಭಾರತವನ್ನು ನಿರ್ಮಾಣ ಮಾಡಬೇಕು. ಈ ರೀತಿಯ ಕಾರ್ಯಕ್ರಮಗಳ ಆಯೋಜನೆ ಮೂಲಕ ಎಬಿವಿಪಿ ವಿದ್ಯಾರ್ಥಿಗಳಲ್ಲಿ ಉತ್ತಮವಾದ ವಿಚಾರವನ್ನು ತುಂಬುವ ಕಾರ್ಯ ಮಾಡುತ್ತಿದೆ ಎಂದರು.
ಎಬಿವಿಪಿಯ ಜಿಲ್ಲಾ ಸಂಚಾಲಕ ಸಂದೀಪ ಅರಳಗುಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರಾಂತ ಕಾರ್ಯಸಮಿತಿ ಸದಸ್ಯರಾದ ಡಾ. ಅಮಿತಕುಮಾರ ಬಿರಾದಾರ, ನಗರ ಕಾರ್ಯದರ್ಶಿ ಸ್ನೇಹಾ ಹಿರೇಮಠ, ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ, ವಕೀಲರಾದ ಬಸವರಾಜ ಯಾದವಾಡ, ಸಿದ್ದು ಮದರಕಂಡಿ, ಸುರೇಖಾ ಕುಲಕರ್ಣಿ, ಮಂಜುನಾಥ ಹಳ್ಳಿ, ನಾಗೇಶ ಸಿಂಧೆ, ಸುಮಾ ಬೋಳರಡ್ಡಿ, ಓಂಕಾರ ನಾವಿ ಇತರರು ಉಪಸ್ತಿತರಿದ್ದರು. ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕತಿಕ ಕಾರ್ಯಕ್ರಮಗಳು ನಡೆದವು.
ವಿದ್ಯಾರ್ಥಿಗಳಲ್ಲಿ ಸ್ಕ್ರಿನ್ ಟೈಂನಿAದ ಆಕ್ಟಿವಿಟಿ ಟೈಮ್ ಗೆ ಪರಿವರ್ತನೆ ಮಾಡಲು ಎಬಿವಿಪಿ ಹಲವಾರು ಚಟುವಟಿಕೆಗಳನ್ನು ಮಾಡುತ್ತಿದೆ, ವಿದ್ಯಾರ್ಥಿಗಳಲ್ಲಿ ಮೊಬೈಲ್ ಬಳಕೆಯ ಸಮಯವನ್ನು ಕಡಿಮೆ ಮಾಡಿ, ಕ್ರೀಡೆ, ಅಧ್ಯಯನ, ಪರಿಸರ ಕಾಳಜಿ, ರಾಷ್ಟ್ರದ ಪರ ಚಿಂತನೆ ಮಾಡುವ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು ಎಂದರು.






