ಜಾಹೀರಾತು ನೀತಿ–2026 ವಿರುದ್ಧ ಪತ್ರಿಕೆಗಳ ಆಕ್ರೋಶ: ನೀತಿ ಸ್ಥಗಿತಕ್ಕೆ ಒತ್ತಾಯ” ಜಿಲ್ಲಾಧಿಕಾರಿಗಳಿಗೆ ಮನವಿ

Newspapers' outrage against Advertising Policy-2026: Appeal to the District Magistrate, demanding the suspension of the policy

ವಿಜಯಪುರ: ರಾಜ್ಯ ಸರ್ಕಾರವು 2026–27ನೇ ಹಣಕಾಸು ವರ್ಷದಿಂದ ಜಾರಿಗೆ ತರಲು ಉದ್ದೇಶಿಸಿರುವ ಕರ್ನಾಟಕ ಜಾಹೀರಾತು ನೀತಿ–2026 ವಿರುದ್ಧ ರಾಜ್ಯದ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಈ ನೀತಿಯಲ್ಲಿ ಅಳವಡಿಸಿರುವ ಅನೇಕ ಅಂಶಗಳು ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಬೆಳವಣಿಗೆಗೆ ಮಾರಕವಾಗಿದ್ದು, ಅವುಗಳ ಅಸ್ತಿತ್ವಕ್ಕೂ ಧಕ್ಕೆಯುಂಟುಮಾಡುವ ಸಾಧ್ಯತೆ ಇದೆ ಎಂದು ಸಂಘಟನೆಗಳು ಆತಂಕ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿತು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ದಶಕಗಳಿಂದ ಜನರ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿವೆ. ಆದರೆ ಹೊಸ ಜಾಹೀರಾತು ನೀತಿಯಲ್ಲಿ ಈ ಪತ್ರಿಕೆಗಳ ಹಿತಾಸಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ. ವಿಶೇಷವಾಗಿ, ಈ ನೀತಿಯನ್ನು ರೂಪಿಸುವ ವೇಳೆ ಯಾವುದೇ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸದೆ ಏಕಪಕ್ಷೀಯವಾಗಿ ತಯಾರಿಸಿರುವುದು ವಿಷಾದನೀಯವಾಗಿದೆ ಎಂದು ತಿಳಿಸಿದೆ.
ಈ ನೀತಿಯ ಪ್ರಮುಖ ಸಮಸ್ಯೆಗಳಾಗಿ, ಪ್ರಸಾರ ಸಂಖ್ಯೆಗೆ ಸಂಬಂಧಿಸಿದ ಕಠಿಣ ನಿಯಮಗಳನ್ನು ಅಳವಡಿಸಿರುವುದು, ಪ್ರಾದೇಶಿಕ ಪತ್ರಿಕೆಗಳನ್ನು ಅವೈಜ್ಞಾನಿಕವಾಗಿ ಪಂಗಡ ಎ ಮತ್ತು ಬಿ ಎಂದು ವರ್ಗೀಕರಿಸಿರುವುದು, ಜಾಹೀರಾತು ದರ ಪರಿಷ್ಕರಣೆಯನ್ನು ಸಮರ್ಪಕವಾಗಿ 6 ವರ್ಷಗಳಿಂದ ಮಾಡದೇ ಇರುವುದನ್ನು ಸಂಘಟನೆಗಳು ಗುರುತಿಸಿವೆ. ಕೋವಿಡ್ ನಂತರ ಹಾಗೂ ಡಿಜಿಟಲ್ ಮಾಧ್ಯಮಗಳ ಹೆಚ್ಚುತ್ತಿರುವ ಪ್ರಭಾವದಿಂದಾಗಿ ಈಗಾಗಲೇ ಸಣ್ಣ ಪತ್ರಿಕೆಗಳು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಇಂತಹ ನಿಯಮಗಳು ಅವುಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಉಂಟುಮಾಡಲಿವೆ ಎಂದು ಅಭಿಪ್ರಾಯಪಟ್ಟಿವೆ.
ಇದಲ್ಲದೆ, ಎಲ್ಲ ಬೆಲೆಗಳು ಗಗನಕ್ಕೆ ಏರುತ್ತಿರುವಾಗ ಜಾಹೀರಾತು ದರಗಳನ್ನು ಇಳಿಸುವ ಕ್ರಮ ಯಾವ ನ್ಯಾಯ, ಪತ್ರಿಕೆಗಳ ಅಭಿವೃದ್ದಿಗಾಗಿ ಪೆÇ್ರೀತ್ಸಾಹ ರೂಪದ ಜಾಹೀರಾತುಗಳನ್ನು ನೀಡುತ್ತಿರುವಾಗ ಪೆÇ್ರೀತ್ಸಾಹ ರೂಪದ ಜಾಹೀರಾತುಗಳನ್ನು ‘ಸನ್ಸೆಟ್ ಕ್ಲಾಜ್’ ಅಳವಡಿಸಿ ಜಾಹೀರಾತು ನಿಲ್ಲಿಸುವ ಕ್ರಮ ಹಾಗೂ ಟೆಂಡರ್ ಜಾಹೀರಾತುಗಳ ಹಂಚಿಕೆಯಲ್ಲಿ ಕಡಿತ ಮಾಡುವ ಕ್ರಮಗಳು ಸಣ್ಣ ಪತ್ರಿಕೆಗಳ ಆದಾಯ ಮೂಲಗಳನ್ನು ಕುಂಠಿತಗೊಳಿಸಲಿವೆ ಎಂದು ಸಂಘಟನೆಗಳು ಎಚ್ಚರಿಸಿವೆ. ಗಡಿ ಭಾಗದ ಕನ್ನಡ ಪತ್ರಿಕೆಗಳಿಗೆ ನೀಡಲಾಗುತ್ತಿದ್ದ ಜಾಹೀರಾತು ಬೆಂಬಲವನ್ನು ಮುಂದುವರಿಸಬೇಕೆಂಬ ಬೇಡಿಕೆಯನ್ನೂ ಸಂಘಟನೆಗಳು ಮುಂದಿಟ್ಟಿವೆ.
ಪ್ರೋತ್ಸಾಹ ರೂಪದ ಜಾಹೀರಾತುಗಳನ್ನು ಹಾಗೂ ಗಡಿ ಭಾಗದ ಜಾಹೀರಾತುಗಳನ್ನು ಎರಡು ಮುಂದುವರೆಸಬೇಕು ಹಾಗೂ ಒಂದು ಕುಟುಂಬಕ್ಕೆ ಮತ್ತು ಆವೃತ್ತಿಗಳಿಗೂ ಒಂದೇ ಸೌಲಭ್ಯ ಎಂದು ಹೇಳುವಾಗ, ಎಲ್ಲ ಖರ್ಚು ಮಾಡಿ ಪತ್ರಿಕೆಗಳು ಸಮಾಜದ ಮುಖವಾಣಿಯಾಗಿರುವಾಗ ಈ ನೀತಿ ಏಕೆ? ಈಗಿನ ಸೌಲಭ್ಯಗಳು ನಿರಂತರವಾಗಿ ಪತ್ರಿಕೆಗಳಿಗೆ ಮುಂದುವರೆಯಬೇಕು ಎಂದು ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಿಕೊಂಡು, ಕರ್ನಾಟಕ ಜಾಹೀರಾತು ನೀತಿ–2026 ಅನ್ನು ತಕ್ಷಣ ಸ್ಥಗಿತಗೊಳಿಸಿ, ಜಿಲ್ಲಾ ಹಾಗೂ ಪ್ರಾದೇಶಿಕ ಪತ್ರಿಕೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಪುನರ್ ಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿವೆ. ಪತ್ರಿಕೆಗಳ ಬೆಳವಣಿಗೆಗೆ ಪೂರಕವಾಗುವ ರೀತಿಯಲ್ಲಿ ನೀತಿಯಲ್ಲಿ ತಿದ್ದುಪಡಿ ಮಾಡಬೇಕು ಎಂದು ತಿಳಿಸಿವೆ.
ಒಟ್ಟಿನಲ್ಲಿ, ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳನ್ನು ಉಳಿಸುವುದು ಪ್ರಜಾಪ್ರಭುತ್ವದ ಬಲವರ್ಧನೆಗೆ ಅತ್ಯಗತ್ಯವಾಗಿದ್ದು, ಸರ್ಕಾರವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘಟನೆಗಳು ಆಗ್ರಹಿಸಿವೆ.
ಈ ಸಂದರ್ಭದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಅಶೋಕ ಯಡಳ್ಳಿ, ಇರ್ಪಾನ್ ಶೇಖ, ಹಿರಿಯ ಸಂಪಾದಕರಾದ ಮೋಹನ ಕುಲಕರ್ಣಿ, ರಶ್ಮಿ ಪಾಟೀಲ, ಪಾಂಡುರಂಗ ಮಮದಾಪುರ, ಮಹೇಶ ಶೆಟಗಾರ, ಮಾಧವರಾವ ಕುಲಕರ್ಣಿ, ಸುಶೀಲೇಂದ್ರ ನಾಯಕ, ಸೀತಾರಾಮ ಕುಲಕರ್ಣಿ, ಇಂದುಶೇಖರ ಮಣೂರ, ಸಂಜೀವ ಕುಲಕರ್ಣಿ, ಶರದ ಅರ್ಜುಣಗಿ, ಸಿದ್ದಣ್ಣ ವಿಜಾಪುರ, ಅವಿನಾಶ ಬಿದರಿ, ಚಿದಂಬರ ಕುಲಕರ್ಣಿ, ಶರಣು ಮಸಳಿ, ಕೆ. ಕೆ. ಕುಲಕರ್ಣಿ, ಗುರು ಗದ್ದನಕೇರಿ, ಫಯಾಜ್ ಕಲಾದಗಿ, ಸಿದ್ದು ವಿಜಾಪುರ, ಕೌಶಲ್ಯ ಪನಾಳಕರ, ರಾಜು ಢವಳಗಿ, ಸಂಜಯ ಕೊಂಡಗೂಳಿ, ಪುಂಡಲಿಕ ಮುರಾಳ ಮುಂತಾದವರು ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು