ಕರಿಜನ ವರದಿ
ವಿಜಯಪುರ : ಅನುಭವ ಮಂಟಪವು ಶರಣ ಚಳವಳಿಯ ಹೃದಯವಾಗಿತ್ತು. ಇಲ್ಲಿ ಮಹಿಳೆಯರು ಮೌನ ಶ್ರೋತೃಗಳಾಗಿರಲಿಲ್ಲ. ಅವರು ತರ್ಕಕಾರ್ತಿಯರು ಮತ್ತು ವಚನ ರಚನಾಕಾರರೂ ಆಗಿದ್ದರು ಎಂದು ಕುಲಪತಿ ಪ್ರೊ.ವಿಜಯಾ ಕೋರಿಶೆಟ್ಟಿ ಹೇಳಿದರು.
ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ ಅಕ್ಕಮಹಾದೇವಿ ಜಯಂತೋತ್ಸವ ಪ್ರಯುಕ್ತ ನಡೆದ `ಅಕ್ಕಮಹಾದೇವಿಯ ಚಿಂತನೆಗಳು' ಎಂಬ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು,
ಅಕ್ಕಮಹಾದೇವಿ ಅನುಭವ ಮಂಟಪದಲ್ಲಿ ಪುರುಷ ಶರಣರ ಮುಂದೆ ಧೈರ್ಯವಾಗಿ ಮಾತನಾಡಿದರು. ಹೀಗಾಗಿ ಅಕ್ಕಮಹಾದೇವಿ ಸ್ತ್ರೀ ಸ್ವಾತಂತ್ರ್ಯ ಮತ್ತು ಸಮಾನತೆಯ ಸಂಕೇತವಾಗಿದ್ದಾರೆ ಎಂದರು.
12ನೇ ಶತಮಾನದಲ್ಲಿ ಕೌಶಿಕ ರಾಜನನ್ನು ಷರತ್ತುಬದ್ಧ ಮದುವೆಯಾಗಿ ಷರತ್ತು ಮುರಿದು ಬಿದ್ದ ಕಾರಣ ರಾಜನನ್ನು ಬಿಟ್ಟು ಒಂಟಿಯಾಗಿ ಶರಣ ಸಮುದಾಯವನ್ನು ಸೇರಿದ ದಿಟ್ಟ ಮಹಿಳೆ. ಕನ್ನಡದ ಪ್ರಥಮ ಕವಿಯಿತ್ರಿ ಮತ್ತು ಸ್ತ್ರೀವಾದಿ ಎಂದು ವಿವರಿಸಿದರು,
ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನ ಕಠಿಣ ಪ್ರಶ್ನೆಗಳಿಗೆ ಉತ್ತರಿಸಿ ಅನುಭವ ಮಂಟಪದಲ್ಲಿ ಪ್ರವೇಶ ಪಡೆಯುತ್ತಾಳೆ. ಆ ಕಾಲದಲ್ಲಿ ರಾಜ್ಯ ಪ್ರಭುತ್ವವನ್ನು ನಿರಾಕರಿಸಿದ ಪ್ರಥಮ ಮಹಿಳೆಯಾಗಿದ್ದಾಳೆ ಅಕ್ಕಮಹಾದೇವಿ. ಲೌಕಿಕ ಮತ್ತು ಅಲೌಕಿಕ ಎರಡು ಭಾವನೆಗಳನ್ನು ತನ್ನ ವಚನಗಳಲ್ಲಿ ವ್ಯಕ್ತಪಡಿಸಿದ್ದಾಳೆ ಎಂದರು.
ಅಕ್ಕಮಹಾದೇವಿ ಲೌಕಿಕ ಆಸಕ್ತಿ, ಸಾಮಾಜಿಕ ಆಕರ್ಷಣೆಗಳನ್ನೆಲ್ಲ ತಿರಸ್ಕರಿಸಿ, ಆತ್ಮ ಮತ್ತು ಇಷ್ಟಲಿಂಗದ ಏಕಾತ್ಮತೆಯನ್ನು ಸಾರುತ್ತಾರೆ. ಇದು ವೈರಾಗ್ಯ ಮಾತ್ರವಲ್ಲ; ಮಹಿಳೆಯನ್ನು ವಸ್ತುವಾಗಿ ನೋಡುವ ಸಮಾಜದ ವಿರುದ್ಧದ ಧಿಕ್ಕಾರವೂ ಹೌದು. ಅಕ್ಕಮಹಾದೇವಿ 12ನೇ ಶತಮಾನದ ಶರಣ ಚಳವಳಿಯ ಅತ್ಯಂತ ಪ್ರಬಲ ಮಹಿಳಾ ಧ್ವನಿ. ಅವರು ಚನ್ನಮಲ್ಲಿಕಾರ್ಜುನನನ್ನೇ ತನ್ನ ಏಕೈಕ ಸ್ವಾಮಿ ಎಂದು ಒಪ್ಪಿಕೊಂಡು, ದೇಹಾಧಾರಿತ ಸಮಾಜ ವ್ಯವಸ್ಥೆಯನ್ನು ತಿರಸ್ಕರಿಸಿದರು. ವೈವಾಹಿಕ ಬಂಧನ, ರಾಜಕೀಯ ಪ್ರಭಾವ, ಸಾಮಾಜಿಕ ನಿಯಮಗಳನ್ನು ಧಿಕ್ಕರಿಸಿ, ಆತ್ಮಸ್ವಾತಂತ್ರ್ಯ ಮತ್ತು ಪರಮಭಕ್ತಿಯನ್ನು ಆರಿಸಿಕೊಂಡರು ಎಂದರು.
ಕುಲಸಚಿವ ಶಂಕರಗೌಡ ಸೋಮನಾಳ ಮಾತನಾಡಿ, ಜೀವನದಲ್ಲಿ ಬರುವ ಕಷ್ಟ- ಸುಖಗಳನ್ನು ಸಮಭಾವದಿಂದ ಸ್ವೀಕರಿಸಬೇಕೆಂಬ ತತ್ವವನ್ನು ಅಕ್ಕಮಹಾದೇವಿ ತಮ್ಮ ವಚನಗಳ ಮೂಲಕ ಪ್ರತಿಪಾದಿಸಿದ್ದಾರೆ ಎಂದು ಅಕ್ಕಮಹಾದೇವಿ ಅವರ ವಚನಗಳನ್ನು ಉಲ್ಲೇಖಿಸಿ ಹೇಳಿದರು.
ಕುಲಸಚಿವ ಪ್ರೋ.ಬಿ.ಎಲ್.ಲಕ್ಕಣ್ಣವರ, ಪ್ರೋ. ಮಹೇಶ ಚಿಂತಾಮಣಿ, ಪ್ರೋ .ಶಾಂತಾದೇವಿ ಟಿ, ಪ್ರೋ .ರಾಜು ಬಾಗಲಕೋಟೆ, ಪ್ರೋ .ಎಂ.ಪಿ.ಬಳಿಗಾರ, ಪ್ರೋ .ಎಂ.ನಾಗರಾಜ, ಡಾ.ಕಿರಣ, ಪ್ರೋ .ನಾರಾಯಣ ಪವಾರ, ಕರಿಷ್ಮಾ ಕಪೂರ ಉಪಸ್ಥಿತರಿದ್ದರು.






