ವಿಜಯಪುರ: ಜಿಲ್ಲ್ಲೆಯಲ್ಲಿ ಕೈಗೊಳ್ಳಲಾಗುತ್ತಿರುವ ಭಾರತ ಜನಗಣತಿ (Census) 2027ರ ಕಾರ್ಯಕ್ಕೆ ನಿಯೋಜಿಸುವ ಸಿಬ್ಬಂದಿಗಳಗೆ ಸೂಕ್ತ ತರಬೇತಿ ನೀಡಿ ನಿಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಡಾ. ಆನಂದ ಕೆ. ಹೇಳಿದರು.
ಗುರುವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಭಾರತ ಜನಗಣತಿ 2027ರ ಜನಗಣತಿ ಕುರಿತು ಪೂರ್ವಭಾವಿ ಸಿದ್ದತೆ ಹಾಗೂ ತರಬೇತುದಾರರಿಗೆ ವಿಡಿಯೋ ಸಂವಾದ ಮೂಲಕ ಮಾತನಾಡಿದ ಅವರು ಗಣತಿ ಕಾರ್ಯಕ್ಕೆ ನಿಯೋಜಿಸಿದ ಸಿಬ್ಬಂದಿಗಳು ಕಾಲ ಕಾಲಕ್ಕೆ ನೀಡುವ ತರಬೇತಿಯ ಪ್ರಯೋಜನೆ ಪಡೆದುಕೊಂಡು ಗಣತಿ ಕಾರ್ಯವನ್ನು ಯಾವುದೇ ಲೋಪ, ದೋಷಗಳಾಗದಂತೆ ಕಾರ್ಯ ನಿರ್ವಹಿಸಬೇಕು. ಮೊದಲನೆ ಹಂತವಾಗಿ ಏಪ್ರೀಲ್ 1ರಿಂದ 15ರ ವರೆಗೆ ಸ್ವಯಂ ಗಣತಿ ಕಾರ್ಯ ನಡೆಯಲಿದ್ದು, ಏಪ್ರೀಲ್ 16ರಿಂದ ಮೇ 15ರ ವರೆಗೆ ಮನೆ ಪಟ್ಟಿ ಕ್ಷೇತ್ರ ಕಾರ್ಯ ಕೈಗೊಳ್ಳಲಾಗುವುದು. ಫೆಬ್ರವರಿ 2027ರಿಂದ ಜನಗಣತಿ ಕಾರ್ಯ ನಡೆಯಲಿದೆ ಎಂದರು.
ಜಿಲ್ಲೆಯ ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಬಾಡಿಗೆಗೆ ಇರುವ ಕುಟುಂಬಗಳು ಒಳಗೊಂಡಂತೆ, ಎಲ್ಲ ಮನೆಗಳು, ತೋಟದ ವಸ್ತಿ, ಸ್ಲಂ, ಎಲ್ಲ ಕುಟುಂಬಗಳ ಮನೆ ಪಟ್ಟಿ ಕಾರ್ಯ ಕೈಗೊಳ್ಳಬೇಕು. ಜನಗಣತಿಯಿಂದ ಯಾವುದೇ ಕುಟುಂಬ ಕೈಬಿಟ್ಟು ಹೋಗದಂತೆ ಅತಿ ಎಚ್ಚರಿಕೆಯಿಂದ ಜನಗಣತಿ ಕಾರ್ಯ ನಿರ್ವಹಿಸಬೇಕು. 50 ಗಣತಿದಾರರ ಸಿಬ್ಬಂದಿಗಳಿಗೆ ಗುಂಪು ಮಾಡಿ ತರಬೇತಿ ನೀಡಬೇಕು. ತರಬೇತಿಗೆ ನಿಯೋಜಿಸುವ ಸಿಬ್ಬಂದಿಗಳಿಗೆ 2 ರಿಂದ 3 ಬಾರಿಗೆ ತರಬೇತಿ ನೀಡಿ ಪೂರ್ಣ ಪ್ರಮಾಣದ ತಿಳುವಳಿಕೆ ಹೊಂದುವಂತೆ ತರಬೇತಿ ನೀಡಬೇಕು. ಈ ಕಾರ್ಯದಲ್ಲಿ ಮುಖ್ಯವಾಗಿ ಒಂದು ವಾರ್ಡಿನಲ್ಲಿ ಮತ್ತೊಂದು ವಾರ್ಡ್ ವಿಲೀನವಾಗದಂತೆ ಬ್ಲಾಕುಗಳನ್ನು ರಚಿಸಿ ಅಂತಿಮಗೊಳಿಸಬೇಕು. ಒಂದು ವೇಳೆ ಅಂತಿಮಗೊಳಿಸದೆ ಮುಂದಿನ ಪ್ರಕ್ರಿಯೆ ಹೋಗಲು ಬರುವುದಿಲ್ಲ. ಆದುದರಿಂದ ಅಂತಿಮಗೊಳಿಸುವ ಮುಂಚೆ ಕುಲಂಕುಷವಾಗಿ ಪರಿಶೀಲಿಸಬೇಕು. ಜಿಲ್ಲೆಯ ಎಲ್ಲ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಚೇರಿಗಳಿಗೆ ವಕಿರ್ಂಗ್ ಮ್ಯಾಪ್ ಸರಬರಾಜು ಮಾಡಬೇಕು. ತಹಶೀಲ್ದಾರರು ಹಾಗೂ ಮುಖ್ಯಾಧಿಕಾರಿಗಳು ಶೀಘ್ರವಾಗಿ ತರಬೇತಿಯನ್ನು ನೀಡಿಬೇಕು. ಮನೆ ಪಟ್ಟಿ ಕ್ಷೇತ್ರ ಕಾರ್ಯ ಒಂದು ತಿಂಗಳ ಕಾಲ ನಡಯಲಿದ್ದು ಯಾರು ನಿರ್ಲಕ್ಷ ಮಾಡದೆ ಈ ಕಾರ್ಯವನ್ನು ಪೂರ್ಣಗೊಳಿಸಿ ಕಟ್ಟು ನಿಟ್ಟಾಗಿ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಮಹಾನಗರ ಪಾಲಿಕೆ ಆಯುಕ್ತರಾದ ವಿಜಯ ಮೆಕ್ಕಳಕಿ, ಇಂಡಿ ತಹಶೀಲ್ದಾರರಾದ ಬಿ.ಎಸ್ ಕಡಕಬಾವಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ವೀರಯ್ಯ ಸಾಲಿಮಠ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಬದ್ರುದ್ದೀನ ಸೌದಾಗರ, ಎಲ್ಲ ತಾಲೂಕಿನ ತಹಶೀಲ್ದಾರರು, ಮುಖ್ಯಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.





