ವಿಜಯಪುರ: ವಿಜಯಪುರ ಜಿಲ್ಲೆಯ ಪರಿಶಿಷ್ಟ ಪಂಗಡದ ತಳವಾರ ಜನಾಂಗ ಕ್ಕೆ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸಿ ತಳವಾರ ಸಮಾಜ ಸೇವಾ ಸಮಿತಿ ವಿಜಯಪುರ ವತಿಯಿಂದ ಸಮಾಜ ಕಲ್ಯಾಣ ಅಧಿಕಾರಿಗಳ ಮುಖಾಂತರ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಇಂಡಿ ತಾಲೂಕಿನಲ್ಲಿ ಪರಿಶಿಷ್ಟ ಪಂಗಡದ ತಳವಾರ ಜನಾಂಗವು ಸುಮಾರು 25637 ಜನಸಂಖ್ಯೆ ಹೊಂಧಿದ್ದು, ವಿಜಯಪುರ ಜಿಲ್ಲೆಯಲ್ಲಿ ಸುಮಾರು 1.25 ಲಕ್ಷ ಜನಾಂಗ ವಾಸವಾಗಿದೆ. ಸ್ವತಂತ್ರ ಭಾರತವಾಗಿ 78 ವರ್ಷಗಳು ಕಳೆದರೂ ಈ ಸಮುದಾಯವಿನ್ನೂ ಹಿಂದುಳಿದಿದ್ದು, ಶೋಷಣೆಗೆ ಒಳಗಾಗುತ್ತಲೇ ಬಂದಿದೆ. ಯಾವುದೇ ಪ್ರಾತಿನಿಧ್ಯ ದೊರಕಿಲ್ಲ. ಪ್ರಸ್ತುತ ಆಡಳಿತದಲ್ಲಿರುವ ಸರ್ಕಾರ ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಹೆಸರಿನಲ್ಲಿ ಅಧಿಕಾರ ಪಡೆದಿದೆ. ಆದರೆ ದಲಿತರ ಪೈಕಿ ತಳವಾರ ಸಮುದಾಯಕ್ಕೆ ಮಾತ್ರ ಯಾವುದೇ ಸೌಲಭ್ಯಗಳು ದೊರಕುತ್ತಿಲ್ಲ.
ಮಾತೃ ಇಲಾಖೆಯಾದ ಸಮಾಜ ಕಲ್ಯಾಣ ಇಲಾಖೆಯಿಂದ ಹಾಗೂ ಮಹರ್ಷಿ ವಾಲ್ಮೀಕಿ ನಿಗಮದಿಂದ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ಸರ್ಕಾರ ಈ ಸಮುದಾಯದ ಏಳಿಗೆಗಾಗಿ ವಿಜಯಪುರ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಏಕಲವ್ಯ ವಸತಿ ಶಾಲೆಗಳನ್ನು ಸ್ಥಾಪಿಸಬೇಕು.
ಪ್ರತಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಎಸ್‍ಸಿ, ಎಸ್‍ಟಿ ವಿದ್ಯಾರ್ಥಿಗಳ ವಸತಿ ನಿಲಯ ಮಂಜೂರು ಮಾಡಬೇಕು. ಶೋಷಿತ ಸಮುದಾಯದ ನಿರುದ್ಯೋಗಿ ಯುವಕರಿಗೆ ಉದ್ಯೋಗ ಒದಗಿಸಲು ಬ್ಯಾಕ್‍ಲಾಗ್ ಹುದ್ದೆಗಳಿಗೆ ತಕ್ಷಣದಿಂದಲೇ ಭರ್ತಿ ಮಾಡಿಕೊಳ್ಳಬೇಕು. ಎಸ್ಸಿ, ಎಸ್ಟಿ ಜನಾಂಗದವರು ದೌರ್ಜನ್ಯಕ್ಕೆ ಒಳಗಾದ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಪೋಲೀಸ್ ಇಲಾಖೆ ತಕ್ಷಣವೇ ಎಸ್ಸಿ, ಎಸ್ಟಿ, ಕಾಯ್ದೆ ಅಡಿಯಲ್ಲಿ ಕೇಸ್ ದಾಖಲು ಮಾಡುವಂತೆ ಆದೇಶ ಮಾಡಬೇಕು.
ಇದನ್ನೂ ಓದಿ: ಐದನೆಯ ಥಾಂಗ್ -ತಾ ಕ್ರೀಡಾಕೂಟ
ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಲ್ಲಿ ಎಸ್ಸಿ, ಎಸ್ಟಿ ಜನಾಂಗದವರಿಗೆ ಸಬ್ಸಿಡಿ, ರಿಯಾಯಿತಿ ದರದಲ್ಲಿ ಯಾವುದೇ ತೊಂದರೆ ಮಾಡದೇ ಸೌಲಭ್ಯ ಒದಗಿಸುವಂತೆ ಸರ್ಕಾರ ಆದೇಶ ಮಾಡಬೇಕು. ದಿನಾಂಕ : 20-03-2020 ರ ಭಾರತ ಗೆಜೆಟ್ ಪತ್ರದ ಅನ್ವಯ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ತಳವಾರ ಜನಾಂಗಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಎಸ್‍ಟಿ ಕ್ಷೇತ್ರವನ್ನು ಹೆಚ್ಚಿಸಿ ಆದೇಶ ಮಾಡಬೇಕೆಂದು ಮನವಿ ಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶಿವಶರಣ ನಾಟೀಕಾರ, ಸೋಮಶೇಖರ ಜಮಾದಾರ, ಉಪಾಧ್ಯಕ್ಷ ಆನಂದ ತಳವಾರ, ಪ್ರಧಾನ ಕಾರ್ಯದರ್ಶಿ ಅಭಿಷೇಕ ಜಮಾದಾರ, ನವೀನ ರೂಗಿ, ಚಂದು ಡೊಂಗ್ರೋಜಿ, ವಿಜಯಕುಮಾರ ಚಾಳಿಕಾರ, ನರೇಶ ಜಮಾದಾರ, ರವಿ ನಾಯಿಜಿ, ಸಂತೋಷ ವಾಲಿಕಾರ, ರೋಹಿತ ನಾಯ್ಕೋಡಿ, ಈಶ್ವರ ಮಣಿಗಿರಿ, ಮಂಜು ಜಮಾದಾರ, ಭೀಮರಾಯ ಬಿಲ್ಕಕ್ಕಾರ, ಹಣಮಂತ ಕೋಳಿ, ಆಕಾಶ ಬೂದಿಹಾಳ, ಗುರುನಾಥ ವಾಲಿಕಾರ, ಶಂಕರ ವಾಲಿಕಾರ, ಲಕ್ಷ್ಮೀಪುರ ಬಡಿಗೇರ, ಬಿಟಿ. ನಾಯ್ಕೋಡಿ, ಚಂದ್ರಾಮ ತಳವಾರ, ಸುನೀಲ ಸಂಗೋಗಿ ಇನ್ನಿತರರು ಇದ್ದರು.



















