ವಿಜಯಪುರ: ಐತಿಹಾಸಿಕ ಮಮದಾಪುರ ಕೆರೆಯನ್ನು ಒಂದು ಕೋಟಿ ರೂ. ವೆಚ್ಚದಲ್ಲಿ ಸಿಎಸ್‌ಆರ್ ಅನುದಾನದಡಿ ಸೌಂದರ್ಯಿಕರಣಗೊಳಿಸಲಾಗುತ್ತಿದ್ದು, ಬಾಂದಾರ ನಿರ್ಮಾಣ ಹಾಗೂ ೮೦೦ ಮೀಟರ್ ಟ್ಯಾಂಕ್ ಬಾಂದಾರಗಳನ್ನು ಅಭಿವೃದ್ಧಿ ಫೆನ್ಸಿಂಗ್ ಮತ್ತು ಹ್ಯಾಂಡ್ರೈಲ್‌ಗಳನ್ನು ಸ್ಥಾಪಿಸುವುದು, ಫುಟ್‌ಪಾತ್‌ಗಳನ್ನು ರಚಿಸುವುದು ಮತ್ತು ಮಕ್ಕಳ ಆಟದ ಪ್ರದೇಶವನ್ನು ಸ್ಥಾಪಿಸಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರಾದ ವಿಜಯಪುರ ಜಿಲ್ಲಾ ಉಸ್ತುವಾರಿ ಡಾ.ಎಂ.ಬಿ.ಪಾಟೀಲ ಹೇಳಿದರು. (ಮಮದಾಪುರ ಕೆರೆ)
ಇದನ್ನೂ ಓದಿ:Vijayapur:ಸರ್ಕಾರಿ ಸಭೆ-ಸಮಾರಂಭಗಳಲ್ಲಿ ಸನ್ಮಾನ ನಿಷೇಧ
ರವಿವಾರ ಹಿಂದುಸ್ತಾನ ಕೋಕಾ ಕೋಲಾ ಬೆವೆರಜಿಸ್ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ಐತಿಹಾಸಿಕ ಮಮದಾಪುರ ಕೆರೆಯ ಪುನರುಜ್ಜೀವನ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಏಕಸ್ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಿಂದ ನೀಡಿದ ಸ್ಮಾರ್ಟ್ ಕ್ಲಾಸ್‌ಗಳನ್ನು ಉದ್ಘಾಟಿಸಿ ಮಮದಾಪುರ ಕೆಪಿಎಸ್ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಹಿಂದುಸ್ತಾನ ಕೋಕಾಕೋಲಾ ಕಂಪನಿ ವತಿಯಿಂದ ಸಿಎಸ್‌ಆರ್ ಅನುದಾನದಡಿ ಮಮದಾಪುರ ಕೆರೆ ಅಭಿವೃದ್ದಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಈ ಹಿಂದೆ ಜನರ ಬೇಡಿಕೆಯಂತೆ ಕೆರೆ ಹೂಳು ತೆಗೆದು ನೀರು ತುಂಬಿಸುವ ಕಾರ್ಯವನ್ನು ಸವಾಲಾಗಿ ಸ್ವೀಕರಿಸಿ ನೀರಾವರಿ ಸಚಿವನಾದ ಮೇಲೆ ಅಸಾಧ್ಯವಾದುದನ್ನು ಕೆರೆ ತುಂಬಿಸುವ ಮೂಲಕ ಯಶಸ್ವಿಗೊಳಿಸಲಾಗಿದೆ. ಕೆರೆ ತುಂಬುವುದರಿಂದ ರೈತರಿಗೆ ಅನುಕೂಲವಾಗಿದೆ. ಪ್ರಸ್ತುತ ಕೆರೆಯನ್ನು ಸೌಂದರ್ಯಿಕರಣ ಕಾರ್ಯ ಕೈಗೊಂಡಿದ್ದು, ಸೌಂದರ್ಯಿಕರಣಗೊಳಿಸಿ,ಅಭಿವೃದ್ದಿಪಡಿಸುವ ಮೂಲಕ ವಿವಿಧೋಪಯೋಗಿ ಸ್ಥಳವಾಗಿ ಮಾರ್ಪಡಿಸಲಾಗುವುದು ಎಂದು ಅವರು ಹೇಳಿದರು.
ಗ್ರಾಮೀಣ ಶಿಕ್ಷಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಬಡವರ ಮಕ್ಕಳು ಸಹ ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯಗಳೊಂದಿಗೆ ಗುಣಮಟ್ಟದ ಶಿಕ್ಷಣ ಪಡೆಯಲು ಅನುಕೂಲವಾಗುವಂತೆ ವಿಮಾನ ಬಿಡಿ ಭಾಗಗಳ ತಯಾರಿಕೆ ಏಕಸ್ ಕಂಪನಿ ವತಿಯಿಂದ ಬಬಲೇಶ್ವರ ವಿಧಾನಸಭೆಯ ೨೫ ಸರ್ಕಾರಿ ಪ್ರೌಢಾಲೆಗಳಿಗೆ ಸ್ಮಾರ್ಟ್ ಕ್ಲಾಸ್‌ಗಳನ್ನು ಒದಗಿಸುವ ಮೂಲಕ ಮುಂದೆ ಬಂದಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತೆ ಸ್ಮಾರ್ಟ್ ಕ್ಲಾಸ್‌ಗಳನ್ನು ವಿಸ್ತರಣೆ ಮಾಡಲು ಪ್ರಯತ್ನಿಸಲಾಗುವುದು. ಮಕ್ಕಳ ಶಿಕ್ಷಣದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೇ ಗುಣಮಟ್ಟದ ಶಿಕ್ಷಣ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಅವರು ಹೇಳಿದರು. ಇದನ್ನೂ ಓದಿ:ಜಾತಿ ಗಣತಿಯ ಅನುಕೂಲಗಳು ಮತ್ತು ಅನಾನುಕೂಲಗಳು, ಸಮಗ್ರ ವರದಿ
ಮಮದಾಪುರದಲ್ಲಿರುವ ೧೬೦೦ ಎಕರೆ ಪ್ರದೇಶ ಅರಣ್ಯ ಪ್ರದೇಶವನ್ನು ಅಭಿವೃದ್ದಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಗೋಲ್ಡ್ ಪ್ಲಸ್ ಕಂಪನಿ ೫೦ ಲಕ್ಷ ಒದಗಿಸಿದ್ದು, ಈ ಅನುದಾನದಲ್ಲಿ ಡ್ರೀಪ್ ಮೂಲಕ ನೀರು ಒದಗಿಸಿ ಅಭಿವೃಪಡಿಸಲಾಗಿದೆ. ಇನ್ನೂ ಹೆಚ್ಚಿನ ಅನುದಾನ ಅವಶ್ಯವಿದ್ದಲ್ಲಿ ಒಂದು ಕೋಟಿ ರೂ. ಸಿಎಸ್‌ಆರ್ ಅನುದಾನ ಒದಗಿಸಿ ಸಾಯಿನ್ಸ್ ಮ್ಯೂಸಿಯಂ, ಮಕ್ಕಳ ಚಟುವಟಿಕೆಗಾಗಿ ಪ್ರತ್ಯೇಕ ತಾಣ ಸೇರಿದಂತೆ ಸುಂದರವಾದ ಪ್ರವಾಸಿ ತಾಣವನ್ನಾಗಿ ಅಭಿವೃದ್ದಿಪಡಿಸಲಾಗುವುದು. ಈ ಅರಣ್ಯ ಪ್ರದೇಶವನ್ನು ಪ್ರಕೃತಿ-ನಿಸರ್ಗ ಪ್ರೇಮಿ ಸಿದ್ದೇಶ್ವರ ಶ್ರೀಗಳಿಗೆ ಅರ್ಪಣೆ ಮಾಡಲಾಗುವುದು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳಾದ ಟಿ.ಭೂಬಾಲನ್ ಅವರು ಮಾತನಾಡಿ, ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರ ಕೆಲಸ-ಕಾರ್ಯ, ಅಭಿವೃದ್ದಿ ಕಾರ್ಯ ನಿರ್ವಹಿಸುವುದು ಕರ್ತವ್ಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ದೂರದೃಷ್ಟಿತ್ವ, ಅವರು ಕೈಗೊಳ್ಳುವ ಅಭಿವೃದ್ದಿ ಕಾರ್ಯಗಳು ಅಧಿಕಾರಿಗಳಿಗೂ ಉತ್ತೇಜನ-ಪ್ರೇರಣೆಯಾಗಿವೆ. ಅಧಿಕಾರಿಗಳಿಗೆ ಅಭಿವೃದ್ದಿ ಕಾರ್ಯ ಕೈಗೊಳ್ಳಲು ಪ್ರೊತ್ಸಾಹ ದೊರೆಯುತ್ತದೆ. ಈ ನಿಟ್ಟಿನಲ್ಲಿ ಮಮದಾಪೂರದ ಐತಿಹಾಸಿಕ ಕೆರೆ ಸಚಿವರ ಆಶಯದಿಂದ ಮಮದಾಪೂರ ಅರಣ್ಯೀಕರಣ ಪ್ರದೇಶದ ಪುನರಜ್ಜೀವನಕ್ಕೆ ಒತ್ತು. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸಿಎಸ್‌ಆರ್ ನಿಧಿಯಲ್ಲಿ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.
ಕಾರ್ಯಕ್ರಮದಲ್ಲಿ ಮಮದಾಪುರ ವಿರಕ್ತಮಠದ ಪರಮ ಪೂಜ್ಯ ಅಭಿನವ ಮುರುಘೇಂದ್ರ ಮಹಾಸ್ವಾಮಿಜಿ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವಣೆ, ಕೆಬಿಜೆಎನ್‌ಎಲ್ ಮುಖ್ಯ ಅಭಿಯಂತರ ಶ್ರೀನಿವಾಸ, ಹಿಂದುಸ್ತಾನ ಕೋಕಾ ಕೋಲಾ ಬೆವೆರೆಜಿಸ್ ಕಂಪನಿಯ ಹಿಮಾಂಶು ಪ್ರೀಯದರ್ಶಿ, ಏಕಸ್ ಕಂಪನಿಯ ಮುಕುಂದ ತ್ರಿವೇದಿ, ವಲಯ ಅರಣ್ಯಾಧಿಕಾರಿ ಸಂತೋಷ ಆಜೂರ ಸೇರಿದಂತೆ ಇತರರು ಉಪಸ್ಥಿತರಿದ್ದರು.