ಲಿಂಬೆ ಸಂಸ್ಕರಣಾ ಉದ್ದಿಮೆ ಸ್ಥಾಪನೆಗೆ ಸಬ್ಸಿಡಿ ಸೌಲಭ್ಯ : ಸದುಪಯೋಗಕ್ಕೆ ಸಲಹೆ

0
172

ವಿಜಯಪುರ :ಫೆ 6: ಪ್ರಧಾನಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧ ಯೋಜನೆಯಡಿ ಜಿಲ್ಲೆಯ ಲಿಂಬೆ ಸಂಸ್ಕರಣಾ ಉದ್ದಿಮೆ ಆರಂಭಿಸಬಯಸುವವರು ಈ ಯೋಜನೆಯ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರು ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಪ್ರಧಾನಮಂತ್ರಿಗಳ ಕಿರುಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧ ಯೋಜನೆ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಒಂದು ಜಿಲ್ಲೆ ಒಂದು ಉತ್ಪನ್ನದ ಅಡಿಯಲ್ಲಿ ಜಿಲ್ಲೆಯ ಲಿಂಬೆ ಆಯ್ಕೆ ಮಾಡಿದ್ದು, ಲಿಂಬೆ ಸಂಸ್ಕರಣಾ ಉದ್ದಿಮೆ ಸ್ಥಾಪಿಸಬಯಸುವವರಿಗೆ 10 ಲಕ್ಷ ರೂ.ಗಳ ವರೆಗೆ ಸಬ್ಸಿಡಿ ಸೌಲಭ್ಯ ದೊರೆಯಲಿದ್ದು, ವಯಕ್ತಿಕ ಕಿರುಉದ್ದಿಮೆದಾರರು, ರೈತ ಉತ್ಪಾದಕ ಸಂಸ್ಥೆಗಳು ಮತ್ತು ಸ್ವಸಹಾಯ ಸಂಘಗಳು ಇದರ ಸದುಪಯೋಗ ಪಡೆಯಬೇಕು.

ಆತ್ಮನಿರ್ಭರ್ ಭಾರತ ಅಭಿಯಾನದ ಭಾಗವಾಗಿ 2020-21 ನೇ ಸಾಲಿನಿಂದ ಈ ಯೋಜನೆ ಆರಂಭಿಸಲಾಗಿದ್ದು, ಅಸಂಘಟಿತ ವಲಯದಲ್ಲಿರುವ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳನ್ನು ಪ್ರೋತ್ಸಾಹಿಸಿ ಅವರಲ್ಲಿ ಸ್ಫರ್ಧಾತ್ಮಕತೆ ಹೆಚ್ಚಿಸುವುದು ಹಾಗೂ ಸಂಘಟಿತ ವಲಯಕ್ಕೆ ತರುವ ಉದ್ದೇಶ ಹೊಂದಲಾಗಿದ್ದು, ಮೇಲಿನವರು ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೃಷಿ ಜಂಟಿ ನಿರ್ದೇಶಕರಾದ ರಾಜಶೇಖರ ವಿಲಿಯಮ್ಸ್ ಅವರು ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಜಿಲ್ಲೆಗೆ ಲಿಂಬೆ ಬೆಳೆ ಆಯ್ಕೆಯಾಗಿದೆ. ಆಸಕ್ತ ವಯಕ್ತಿಕ ಕಿರು ಉದ್ದಿಮೆದಾರರು pmfme.mofpi.gov.in ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಉದ್ದಿಮೆದಾರರಿಗೆ ಲಿಂಬೆ ಸಂಸ್ಕರಣೆಯಲ್ಲಿ ತರಬೇತಿ ನೀಡಲಾಗುತ್ತದೆ. ಸರ್ಕಾರದಿಂದ ಗರಿಷ್ಠ ಶೇ.35 ರಷ್ಟು ಸಹಾಯಧನ ನೀಡಲಾಗುತ್ತಿದ್ದು, ಆಸಕ್ತರು ಕೃಷಿ ಇಲಾಖೆ ಸಂಪರ್ಕಿಸಬಹುದಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ರೈತ ಉತ್ಪಾದಕರ ಸಂಸ್ಥೆಗಳ ರಚನೆ ಕುರಿತ ಜಿಲ್ಲಾ ಮಟ್ಟದ ಸಮನ್ವಯ-ಮೇಲ್ವಿಚಾರಣಾ ಸಭೆ: ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಈ ಸಭೆಯಲ್ಲಿ ಜಿಲ್ಲೆಯ 11 ರೈತ ಉತ್ಪಾದಕರ ಸಂಘಗಳಿಗೆ ಅನುಮೋದನೆ ನೀಡಲಾಗಿದೆ.

ರೈತರಿಗೆ ಪರಿಣಾಮಕಾರಿಯಾದ ಕಡಿಮೆ ವೆಚ್ಚದ ಮತ್ತು ಸಮರ್ಥನೀಯವಾದ ಸಂಪನ್ಮೂಲದ ಬಳಕೆ ಮಾಡಿಕೊಳ್ಳಲು ರೈತರನ್ನು ಸಕ್ರೀಯರನ್ನಾಗಿಸುವ ಜೊತೆಗೆ ಸರ್ಕಾರದ ಬೆಂಬಲ ಮತ್ತು ಸಂಘಗಳು ಮತ್ತು ಸಂಶೋಧನಾ ಸಂಸ್ಥೆಗಳು, ನಾಗರೀಕ ಸೋಸೈಟಿ ಮತ್ತು ಖಾಸಗಿ ಕ್ಷೇತ್ರದೊಂದಿಗಿನ ಸಹಯೋಗದೊಂದಿಗೆ ಅವರ ಉತ್ಪನ್ನಗಳಿಗೆ ಅಧಿಕ ಲಾಭಗಳನ್ನು ಪಡೆದುಕೊಳ್ಳುವ ರೈತ ಉತ್ಪಾದಕ ಸಂಸ್ಥೆಗಳನ್ನು (ಎಫ್‍ಐಜಿ) ಸ್ಥಾಪಿಸಲಾಗುತ್ತಿದೆ. ಜಿಲ್ಲೆಯಲ್ಲಿ 11 ರೈತ ಉತ್ಪಾದಕ ಸಂಸ್ಥೆಗಳನ್ನು ರಚಿಸಲು ಗುರಿಹೊಂದಲಾಗಿದ್ದು, ಈ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಕೃಷಿ ಜಂಟಿ ನಿರ್ದೇಶಕರು ಸಭೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಸಿ.ಬಿ ಕುಂಬಾರ, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ.ಪ್ರಾಣೇಶ ಜಹಾಗೀರದಾರ, ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀ ಸೋಮನಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.


ambedkar image

LEAVE A REPLY

Please enter your comment!
Please enter your name here