ವಿಜಯಪುರದಲ್ಲಿ ಕ್ರಿಸ್‍ಮಸ್, ಹೊಸ ವರ್ಷ ಆಚರಣೆ ಹಿನ್ನೆಲೆ ಕಟ್ಟುನಿಟ್ಟಿನ ಆದೇಶ ಪಾಲಿಸುವುದು ಕಡ್ಡಾಯ

0
216

ಹಬ್ಬದ ಆಚರಣೆಯ ಸಂದರ್ಭದಲ್ಲಿ ಕೋವಿಡ್-19 ಹಿನ್ನೆಲೆ ಸೋಂಕು ಹರಡುವುದನ್ನು ತಡೆಗಟ್ಟಲು ಸಾರ್ವಜನಿಕರ ಹಸ್ತಲಾಘವ ಮತ್ತು ಆಲಿಂಗನವನ್ನು ನಿಷೇಧಿಸಲಾಗಿದೆ .
ದಿನಾಂಕ 30-12-2020 ರಿಂದ 2-12-2020 ರವರೆಗೆ ಕ್ಲಬ್, ಪಬ್, ರೆಸ್ಟೊರೆಂಟ್ ಹಾಗೂ ಅದೇ ತೆರನಾಗಿ ಸ್ಥಳ, ಪ್ರದೇಶಗಳಲ್ಲಿ ಸಾಮಾಜಿಕ ಅಂತರವಿಲ್ಲದೆ ಹೆಚ್ಚು ಜನರು ಸೇರುವ ವಿಶೇಷ ಯೋಜಿತ ಒಟ್ಟುಗೂಡುವಿಕೆ, ವಿಶೇಷ ಡಿಜೆ ಡಾನ್ಸ್ ಕಾರ್ಯಕ್ರಮಗಳನ್ನು, ವಿಶೇಷ ಪಾರ್ಟಿ, ಇತ್ಯಾದಿಗಳನ್ನು ನಿಷೇಧಿಸಲಾಗಿದೆ.

ವಿಜಯಪುರ ಡಿ.23: ಜಿಲ್ಲೆಯಲ್ಲಿ ಕ್ರಿಸ್‍ಮಸ್ ಹಾಗೂ ಹೊಸ ವರ್ಷದ ಆಚರಣೆಯನ್ನು ಸರಳವಾಗಿ, ಭಕ್ತಿಪೂರ್ವಕವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸುವುದರೊಂದಿಗೆ ಕೋವಿಡ್-19 ಸೋಂಕನ್ನು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದ ಮೇರೆಗೆ ಈ ಕೆಳಗಿನ ಸೂಚನೆಗಳನ್ನು ನೀಡಲಾಗಿದ್ದು, ಸಾರ್ವಜನಿಕರು ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಪಿ.ಸುನೀಲ ಕುಮಾರ್ ಅವರು ತಿಳಿಸಿದ್ದಾರೆ.

  • ಜಿಲ್ಲೆಯಾದ್ಯಂತ ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಜನರು ಸೇರುವ ಸಾಮೂಹಿಕ ಕೂಟ (ಪಾರ್ಟಿ) ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ವಸತಿ ಸಮುಚ್ಚಯಗಳಲ್ಲಿ ಹಾಗೂ ಜನ ಸೇರುವ ಸ್ಥಳಗಳಲ್ಲಿ ಆಯೋಜಿಸುವುದನ್ನು ನಿಷೇಧಿಸಲಾಗಿದೆ.
  • ಸರ್ಕಾರದ ಆದೇಶದಂತೆ ಹಸಿರು ಪಟಾಕಿಗಳನ್ನು ಮಾತ್ರ ಹಚ್ಚಬೇಕು. ಕ್ರೈಸ್ತ ಧರ್ಮದ ಚರ್ಚ್‍ಗಳಲ್ಲಿ ಒಮ್ಮೆಲೆ ಹೆಚ್ಚು ಜನರು ಸೇರದಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮೇಲ್ವಿಚಾರಕರು, ಆಯೋಜಕರು ಕಟ್ಟುನಿಟ್ಟಿನ ಕ್ರಮ ವಹಿಸಬೇಕು.
  • ಹೊಸ ವರ್ಷಾಚರಣೆ ಸಂದರ್ಭದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಮತ್ತು ಸಾಮಾಜಿಕ ಅಂತರವಿಲ್ಲದೆ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇರುವಿಕೆಯನ್ನು ಹಾಗೂ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿದೆ. ಆದರೆ ಈ ಸ್ಥಳಗಳಲ್ಲಿ ಪ್ರತಿನಿತ್ಯ ಸಾಮಾನ್ಯ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ನಿರ್ಬಂಧವಿಲ್ಲ ಎಂದು ಅವರು ತಿಳಿಸಿದ್ದಾರೆ.
  • ಸರ್ಕಾರದ ಆದೇಶದಂತೆ ಬಹು ಮುಖ್ಯವಾಗಿ 65 ವರ್ಷ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದೊಳಗಿನ ಮಕ್ಕಳು ಮನೆಯಲ್ಲಿಯೇ ಇರತಕ್ಕದ್ದು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಹೊಟೇಲ್, ಪಬ್, ರೆಸ್ಟೊರೆಂಟ್‍ಗಳು ಹಾಗೂ ಅಂತಹ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಜರ್ ವ್ಯವಸ್ಥೆ ಮಾಡಬೇಕು.
  • ಹೊಟೇಲ್, ಮಾಲ್, ಪಬ್, ರೆಸ್ಟೊರೆಂಟ್‍ಗಳು ಹಾಗೂ ಅಂತ ಸ್ಥಳ, ಪ್ರದೇಶಗಳಲ್ಲಿ ಅದರ ಮಾಲೀಕರು ಕಡ್ಡಾಯವಾಗಿ ಸರ್ಕಾರದ ಆದೇಶದಂತೆ ಕೋವಿಡ್ ಹಿನ್ನೆಲೆ ಸಾಮಾಜಿಕ ಅಂತರದಿಂದ ಜನರು ಸೇರಲು ಜಾಗ್ರತೆ ವಹಿಸಬೇಕು. ಅಗತ್ಯವಿದ್ದಲ್ಲಿ ಜನರನ್ನು ಸರದಿಯಲ್ಲಿ ಪ್ರವೇಶಿಸಲು ಅಥವಾ ಆನ್‍ಲೈನ್ ಮೂಲಕ, ಟೋಕನ್ ಪದ್ಧತಿಯಲ್ಲಿ ಸ್ಥಳ ಕಾಯ್ದಿರಿಸಲು ವ್ಯವಸ್ಥೆ ಕಲ್ಪಿಸಬೇಕು.
  • ಪ್ರಾಂಗಣಗಳಲ್ಲಿ, ಉಪಹಾರ ಸ್ಥಳಗಳಲ್ಲಿ, ವ್ಯವಸ್ಥಿತ ಕಟ್ಟಡ ಸಮುಚ್ಛಯಗಳಲ್ಲಿ ಜನರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಕಲ್ಪಿಸಬೇಕು. ರಾಷ್ಟ್ರೀಯ ನಿರ್ದೇಶನಗಳನ್ನು ಹಾಗೂ ರಾಜ್ಯ ಸರ್ಕಾರದ ಆದೇಶ, ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಹಾಗೂ ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ರಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ambedkar image

LEAVE A REPLY

Please enter your comment!
Please enter your name here