ಕರ್ನಾಟಕ ರಕ್ಷಣಾ ವೇದಿಕೆಯಿಂದ ಕರ್ನಾಟಕ ಬಂದ್‍ಗೆ ಬೆಂಬಲ

0
197

ವಿಜಯಪುರ ಸೆ 28: ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ (1961) ಗೆ ತಿದ್ದುಪಡಿ ತರುವುದನ್ನು ವಿರೋಧಿಸಿ ಶುಕ್ರವಾರ ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಕರ್ನಾಟಕ ರಕ್ಷಣಾ ವೇದಿಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಗಾಂಧಿ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಎಂ. ಸಿ. ಮುಲ್ಲಾ ಮಾತನಾಡಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ರೈತ ವಿರೋಧಿ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಜನ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ. ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರುದಲ್ಲಿ ಇಡೀ ಕೃಷಿ ಕ್ಷೇತ್ರ ದೊಡ್ಡ ಮಟ್ಟದ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಭಾರತ ಕೃಷಿ ಪ್ರಧಾನ ದೇಶ ಮತ್ತು ದೇಶದ ಕೋಟ್ಯಂತರ ರೈತರು ಕೃಷಿಯನ್ನೇ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಅವರ ಪಾಲಿಗೆ ಅವರ ಜಮೀನೇ ಸರ್ವಸ್ವ ಸಮಸ್ಯೆಗಳಿಗೆ ಸಿಲುಕಿದ ರೈತರಿಗೆ ಜಮೀನು ಮಾರಟದ ಆಮೀಷಗಳನ್ನು ಒಡ್ಡಿ ಅವರ ಜಮೀನುಗಳನ್ನು ಕಿತ್ತುಕೋಂಡರೆ, ಅವರ ಬದುಕುವ ಹಕ್ಕನ್ನೇ ಕಿತ್ತುಕೊಂಡಂತೆ ತಮ್ಮ ಜಮೀನನ್ನು ಮಾರಾಟ ಮಾಡಿದ ರೈತರು ಕಾಲಕ್ರಮೇಣ ದಿವಾಳಿಗಳಾಗುತ್ತಾರೆ. ಕಾರ್ಪೋರೆಟ್ ಸಂಸ್ಥೆಗಳ ಕೂಲಿಯಾಳಾಗುತ್ತಾರೆ ಎಂದರು.

ಉಳುವವನೇ ಭೂಮಿಯ ಒಡೆಯ ಎಂಬ ಮಹೋನ್ನತ ಆದರ್ಶದ ನೀತಿಯನ್ನು ದೇವರಾಜ ಅರಸು ಅವರ ನೇತೃತ್ವದ ಸರ್ಕಾರ ಜಾರಿಗೆ ತಂದಿತ್ತು. ಆದರೆ ಈಗ ದುಡ್ಡಿರುವವನೇ ಭೂಮಿಯ ಒಡೆಯ ಎಂಬ ರಾಜ್ಯ ಸರ್ಕಾರದ ನೀತಿಯಾಗಿದೆ. ಇದರಿಂದಾಗಿ ಸಮಾಜದಲ್ಲಿ ಅತಿ ಶ್ರೀಮಂತರು ಮತ್ತು ಅತಿ ಬಡವರೆಂಬ ಎರಡು ವರ್ಗಗಳು ಉಳಿದುಕೊಳ್ಳಲಿವೆ. ಭೂ ಒಡೆತನ ಕಳೆದುಕೊಳ್ಳುವ ಜನರನ್ನು ಭಿಕ್ಷುಕರನ್ನಾಗಿಸುವ ಕ್ರೌರ್ಯ ಈ ತಿದ್ದುಪಡಿಯಲ್ಲಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಮಹಾದೇವ ರಾವಜಿ, ಕಾರ್ಯದರ್ಶಿ ದಸ್ತಗೀರ ಸಾಲೋಟಗಿ, ಹಾಗೂ ಫಯಾಜ ಕಲಾದಗಿ, ದಯಾನಂದ ಸಾವಳಗಿ, ರಜಾಕ ಕಾಖಂಡಕಿ, ಗಿರೀಶ ಕುಲಕರ್ಣಿ, ಮನೋಹರ ತಾಜೋವ, ಸುಲ್ತಾನ್ಸಾಬ್ ಅಗಸಿಮನಿ, ರಜಾಕ ಖಾಕಂಡಕಿ, ವಿಶ್ವನಾಥ ತಡಲಗಿ, ಹಾಜಿಮಲ್ಲಂಗ ಬಡೇಗರ, ಎಲ್.ಎಂ.ಬಿರಾದಾರ, ಪಿದಾ ಕಲಾದಗಿ, ತಾಜುದ್ದೀನ ಖಲೀಪಾ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.


 

LEAVE A REPLY

Please enter your comment!
Please enter your name here