ಕ್ರಾಂತಿಕಾರಿ ಸಂತ “ಚೋಖಾಮೇಳ “

0
395
ರವೀಂದ್ರ ಎನ್ ಎಸ್ - ಲೇಖಕರು

ಎಂಭತ್ತು ತೊಂಭತ್ತರ ದಶಕದಲ್ಲಿ ಆಕಾಶವಾಣಿ ಧಾರವಾಡ ಕೇಂದ್ರದಿಂದ ಸಂಜೆ 6:30 ರ ಸುಮಾರಿಗೆ ಪ್ರಸಾರವಾಗುತ್ತಿದ್ದ ಮರಾಠಿ ಅಭಂಗಗಳನ್ನು ಕೇಳ್ತ ಇದ್ದವರಿಗೆ ಮಹಾರಾಷ್ಟ್ರದ ವಾರಕರಿ ಪಂಥದ ಮತ್ತು ಸಂತರ ಬಗ್ಗೆ ಪರಿಚಯ ಇದ್ದೇ ಇರುತ್ತದೆ. ಆದರೆ ಕರ್ನಾಟಕದ ಬಹಳಷ್ಟು ಜನಗಳಿಗೆ (ಬೆಂಗಳೂರು, ಮೈಸೂರು, ಬಳ್ಳಾರಿ) ಭಾಗಗಳಲ್ಲಿ ವಾರಕರಿ ಪಂಥ ಮತ್ತು ವಾರಕರಿ ಸಂತರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಈ ವಾರಕರಿ ಪಂಥ ಹನ್ನೆರಡನೆ ಶತಮಾನದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನಡೆದ ಶರಣ ಪರಂಪರೆಯ ಮುಂದುವರಿದ ಭಾಗ ಎಂದು ಹೇಳಬಹುದು. ಕಲ್ಯಾಣದಲ್ಲಿ ನಡೆದ ಶರಣರ ಹತ್ಯಾಕಾಂಡದ (ಕ್ರಾಂತಿ ಪದ ಬಳಸಿಲ್ಲ) ನಂತರ ಮರಾಠಿ ನೆಲದಲ್ಲಿ ಹುಟ್ಟಿದ್ದೇ ಈ ವಾರಕರಿ ಪಂಥ.

ವಾರಕರಿ ಸಂತರಲ್ಲಿ ಸಂತ ತುಕಾರಾಮ. ಸಂತ ನಾಮದೇವ. ಸಂತ ಚೋಖಾಮೇಳ ಹೀಗೆ ಬಹಳಷ್ಟು ಮಹಾನ್ ಸಂತರನ್ನು ಕಾಣಬಹುದು. ಅದರಲ್ಲೂ ಸಂತ ಚೋಖಾಮೇಳ ಒಬ್ಬ ಮಹಾನ್ ಕ್ರಾಂತಿ ಕಾರಿ ಸಂತ. ಅವರು ಮಹಾರಾಷ್ಟ್ರದ ಬುಲ್ಡಾನಾ ಜಿಲ್ಲೆಯ ಮೇಹುನಾ ಗ್ರಾಮದಲ್ಲಿ ಸುಧಾಮ ಮತ್ತು ಸಾವಿತ್ರಿ ಬಾಯಿ ಎನ್ನುವ ಮಹಾರ್ ದಂಪತಿಗಳ ಮಗನಾಗಿ 14 ನೇ ಶತಮಾನದಲ್ಲಿ ಜನಿಸುತ್ತಾರೆ. ನಂತರದಲ್ಲಿ ಈ ಕುಟುಂಬ ಪಂಢರಪುರ ಹತ್ತಿರ ಇರುವ ಮಂಗಳವೇಢ ಗ್ರಾಮಕ್ಕೆ ವಲಸೆ ಬರುತ್ತದೆ. ಬಾಲ್ಯದಲ್ಲಿ ಅಸ್ಪ್ರುಶ್ಯರ ಕಸುಬು ಆಗಿದ್ದ ಸತ್ತ ಪ್ರಾಣಿಗಳನ್ನು ಊರಾಚೆ ಎತ್ತಿ ಹಾಕುವುದು, ಮೇಲ್ವರ್ಗದ ರೈತರ ಜಮೀನುಗಳಲ್ಲಿ ಕೆಲಸ ಮಾಡುವುದು. ಅವರ ಜಮೀನುಗಳ ಕಾವಲು ಇವೇ ಮೊದಲಾದ ಕಾರ್ಯ ಮಾಡುತ್ತಿದ್ದ ಚೋಖಾ ಬಾಲ್ಯದಲ್ಲೇ ಪಾಂಡುರಂಗನ ಪರಮ ಭಕ್ತನಾಗಿರುತ್ತಾರೆ ಮತ್ತು ಆ ಕಾಲದ ಸಂತ ಶ್ರೇಷ್ಠ ನಾಮದೇವರ ಅಭಂಗಗಳಿಂದ ಪ್ರೇರೆಪಿತನಾಗಿ ಅವರ ಅನುಯಾಯಿ ಆಗಿರುತ್ತಾನೆ ಒಂದು ಸರ್ತಿ ಪಂಢರ ಪುರಕ್ಕೆ ಭೇಟಿ ಕೊಟ್ಟ ಚೋಖಾ ಅಲ್ಲಿ ಸಂತ ಶ್ರೇಷ್ಠ ನಾಮದೇವ (1270-1350) ಅವರನ್ನು ನೇರವಾಗಿ ಭೇಟಿ ಆಗುವ ಅವಕಾಶ ಚೋಖಾಮೇಳರಿಗೆ ಒದಗಿ ಬರುತ್ತದೆ.

ಮೊದಲೇ ಸಂತ ನಾಮದೇವರ ಪ್ರವಚನ ಅಭಂಗಗಳಿಂದ ಪ್ರೇರೇಪಣೆ ಪಡೆದುಕೊಂಡಿದ್ದ ಚೋಖಾಮೇಳ ಸಂತ ನಾಮದೇವ ಅವರನ್ನು ಮುಖತಃ ಭೇಟಿ ಆದಾಗ ಭಾವ ಪರವಶನಾಗಿ “जोहार मायबाप जोहार तुमच्या महाराचा मी महार बहु भुकेला झालो तुमच्या उष्ट्या साठी आलो बहु केली आस तुमच्या दासाचा मी दास चोखा म्हणे पाठी आणिली तुमच्या उष्ट्या साठी” ಎಂದು ಅತ್ಯಂತ ವಿನೀತ ಭಾವದಿಂದ ತನ್ನ ಪರಿಚಯ ಮಾಡಿಕೊಂಡು. ಸಂತ ನಾಮದೇವ ರ ಶಿಷ್ಯ ಆಗುತ್ತಾನೆ. ನಂತರದಲ್ಲಿ ಚೋಖಾಮೇಳ ಪಂಢರಪುರದಲ್ಲಿನ ಪಾಂಡುರಂಗ (ವಿಠಲ) ನ ದರ್ಶನ ಪಡೆದುಕೊಳ್ಳಲು ದೇವಸ್ಥಾನಕ್ಕೆ ತೆರಳಿದಾಗ ಚೋಖಾಮೇಳ ಒಬ್ಬ ಅಸ್ಪೃಷ್ಯ ಮಹಾರ್ ಎನ್ನುವ ಕಾರಣಕ್ಕೆ ವೈದಿಕ ಜನಗಳು ಆತನಿಗೆ ದೇವಸ್ಥಾನದ ಒಳಗೆ ಪ್ರವೇಶ ನಿರಾಕರಿಸಲಾಗುತ್ತಾರೆ,

ಇದರಿಂದ ತುಂಬ ನೊಂದುಕೊಂಡ ಚೋಖಾ ಮೇಳ ಚಂದ್ರ ಭಾಗ ನದಿ ತೀರದಲ್ಲಿ ಚಿಕ್ಕದಾದ ಗುಡಿಯನ್ನು ನಿರ್ಮಿಸಿ ಪಾಂಡುರಂಗ ವಿಠಲನನ್ನು ಆರಾಧಿಸುತ್ತಾರೆ. ಚೋಖಾಮೇಳ ಒಬ್ಬ ಕ್ರಾಂತಿಕಾರಿ ಆತನ ಸಹೋದರಿ ನಿರ್ಮಲಾ. ಪತ್ನಿ ಸೋಯಿರಾ ಬಾಯಿ. ಭಾವ ಬಂಕಾ ಮತ್ತು ಚೋಖಾ ಮೇಳನ ಮಗ ಕರ್ಮಾ ಮೇಳ ಎಲ್ಲರೂ ಭಕ್ತಿ ಪಂಥದ ಚಳುವಳಿಯಲ್ಲಿ ತಮ್ಮನ್ನು ತಾವು ತೊಡಗಿಸಿ ಕೊಂಡಿರುತ್ತಾರೆ ಅಷ್ಟೇ ಅಲ್ಲ ಚೋಖಾ ಮೇಳನ ಕುಟುಂಬದ ಎಲ್ಲ ಸದಸ್ಯರು ಕವಿ/ಕವಯಿತ್ರಿ ಎನ್ನುವುದು ಗಮನಾರ್ಹ.

ಅಸ್ಪೃಶ್ಯ ಸಮುದಾಯಗಳನ್ನು ಮೆಲ್ವರ್ಗಗಳು ಹೀನಾಯವಾಗಿ ನಡೆಸಿಕೊಳ್ಳುವುದನ್ನು ಕಂಡ ಚೋಖಾಮೇಳ ತನ್ನ ಕೀರ್ತನೆ. ಅಭಂಗಗಳ ಮೂಲಕ ಕೆಳ ವರ್ಗದ ಜನಗಳಲ್ಲಿ ಜಾಗೃತಿ ಮೂಡಿಸುವ ಸಂಕಲ್ಪ ಹೊತ್ತ ಚೋಖಾ ಮೇಳ ಊರೂರು ಸುತ್ತುತ್ತ ತನ್ನ ಅಭಂಗಗಳ (ಹಾಡುಗಳು) ಮೂಲಕ ಅಸ್ಪೃಶ್ಯ ಸಮುದಾಯವನ್ನು ಜಾಗೃತ ಗೊಳಿಸುತ್ತ ಸಾಗುತ್ತಾನೆ. ಅಸ್ಪೃಶ್ಯ ಜನಗಳಿಗೆ ನಿತ್ಯ ಸ್ನಾನ ಶುಚಿತ್ವ ಮತ್ತು ದುರ್ವ್ಯಸನಗಳಿಂದ ದೂರ ಇರುವಂತೆ ತಿಳುವಳಿಕೆ ಹೇಳುತ್ತ ಅವರನ್ನು ತನ್ನೊಂದಿಗೆ ಪುಣ್ಯ ಕ್ಷೇತ್ರಗಳಿಗೆ ಕರೆದೊಯ್ಯುತ್ತ ಆಧ್ಯಾತ್ಮ ಮತ್ತು ಸಾಮಾಜಿಕ ವ್ಯವಸ್ಥೆ ಎರಡೂ ವಿಷಯಗಳ ಬಗ್ಗೆ ಬೋಧನೆಗಳನ್ನು ನೀಡುತ್ತ ಬಹಳಷ್ಟು ಮರಾಠಿ ನೆಲವನ್ನೆಲ್ಲ ತಿರುಗಾಡುತ್ತಾನೆ.
“आम्हा न कळे ज्ञान
न कळे पुराण
वेदांचे वचन न कळे आम्हा आगमाची आठी निगमाचा भेद शास्त्राचा
संवाद न कळे आम्हा
नकळे ज्ञान
योग याग तप अष्टांग साधन नकळे ची दान व्रत तप आम्हा न कळे ज्ञान
चोखा म्हणे माझा
भोळा भाव देवा गाईन
केशवा नाम तुझे आम्हा न कळे ज्ञान” ಎಂದು
ವೇದ ಶಾಸ್ತ್ರ ಪುರಾಣಗಳನ್ನು ನೇರವಾಗಿ ತನ್ನ ಅಭಂಗಗಳ ಮೂಲಕ ಟೀಕಿಸಿದ ಚೋಖಾಮೇಳ ವೈದಿಕ ಶಾಹಿ ವ್ಯವಸ್ಥೆಯ ವಿರುದ್ದ ಜನಗಳನ್ನು ಜಾಗೃತಗೊಳಿಸುವ ಕಾರ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾನೆ. ಆ ಕಾಲ ಘಟ್ಟದಲ್ಲಿ ಚೋಖಾಮೇಳನ ಕ್ರಾಂತಿ ಕಾರಿ ಅಭಂಗಗಳು ಅದೆಷ್ಟು ಪ್ರಭಾವಶಾಲಿ ಆಗಿದ್ದವು ಅಂದರೆ ವೈದಿಕರು ಚೋಖಾಮೇಳನ ಹೆಸರು ಕೇಳಿದರೂ ಸಾಕು ಉರಿದು ಬೀಳುತ್ತಿದ್ದರು,

ಚೋಖಾಮೇಳ ಪಾಂಡುರಂಗ ವಿಠಲನ‌‌ ಎಂತಹ ಭಕ್ತ ಎಂದರೆ ವೈದಿಕರೇ ಹೇಳುವ ಒಂದು ದಂತ ಕಥೆಯ ಪ್ರಕಾರ ಸ್ವತಃ ಪಾಂಡುರಂಗನೇ ಚೋಖಾಮೇಳನ ಮನೆಯಲ್ಲಿ ಆತನೊಂದಿಗೆ ಊಟ ಮಾಡುತ್ತಾನೆ, ಅಂತಹ ವಿಠಲನ ಪರಮ ಭಕ್ತ ಚೋಖಾಮೇಳ ಕುಟುಂಬ ನಿರ್ವಹಣೆಗೆ ಕೂಲಿ ಕೆಲಸ ಮಾಡುತ್ತ ಇರುವಾಗ ಒಂದು ದಿವಸ ಮಂಗಳವೇಢ ಗ್ರಾಮದಲ್ಲಿ ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಕೂಲಿ ಕೆಲಸ ಮಾಡುತ್ತಿರುವಾಗ ಮೇಲಿನಿಂದ ಗೋಡೆ ಕುಸಿದು (ವೈದಿಕರ ವ್ಯವಸ್ಥಿತ ಸಂಚು) ಚೋಖಾ ಮೇಳನ ದೇಹ ತುಂಡು ತುಂಡಾಗಿ ಹೋಗುತ್ತದೆ. ಚೋಖಾಮೇಳನ‌ ಎಲುಬುಗಳು ತುಂಡು ತುಂಡಾಗಿ ಎಲ್ಲ ಕಡೆಗಳಲ್ಲಿ ಚಲ್ಲಾ ಪಿಲ್ಲಿ ಆಗಿ ಬಿದ್ದರೂ ಸಹ ಆತನ ಎಲುಬುಗಳಿಂದ ವಿಠಲ..ವಿಠಲ ಎನ್ನುವ ನಾಮ ಸ್ಮರಣೆ ಹೊರಡುತ್ತಿರುತ್ತದೆ. (ಇವತ್ತಿಗೂ ಈ ದಂತ ಕಥೆ ಪ್ರಚಲಿತ). ಹೀಗೆ ಭೀಕರವಾಗಿ ದುರಂತ ಅಂತ್ಯ ಕಂಡ ತನ್ನ ಶಿಷ್ಯ ಚೋಖಾ ಮೇಳನ ಛಿದ್ರ ದೇಹವನ್ನು ಕಂಡ ಆತನ ಗುರು ಸಂತ ನಾಮದೇವ ಚೋಖಾ ಮೇಳನ ದೇಹದ ಭಾಗಗಳನ್ನೆಲ್ಲ ಹೆಕ್ಕಿ ಒಗ್ಗೂಡಿಸಿ ಅದನ್ನು ಪಂಡರಾಪುರಕ್ಕೆ ತಂದು ಪಾಂಡುರಂಗ ವಿಠಲನ ದೇವಸ್ಥಾನದ ಮುಖ್ಯದ್ವಾರದ ಎದುರು ಶಾಸ್ತ್ರೋಕ್ತವಾಗಿ ಅಂತಿಮ‌ ಸಂಸ್ಕಾರ ಮಾಡಿ ಚೋಖಾಮೇಳನ ಸಮಾಧಿ ಕಟ್ಟುತ್ತಾರೆ.

ಇವತ್ತಿಗೂ ಭಕ್ತರು ಪಾಂಡುರಂಗನ ದೇವಸ್ಥಾನದ ಒಳಗೆ ಪ್ರವೇಶಿಸುವ ಮೊದಲು ಚೋಖಾಮೇಳನ ದರ್ಶನ ಪಡೆದುಕೊಂಡೇ ಒಳಗಡೆ ಸಾಗಬೇಕು. ಒಬ್ಬ ಮಹಾನ್ ಕ್ರಾಂತಿಕಾರಿ. ಅಪ್ರತಿಮ‌ ಜ್ಞಾನಿ. ಆಧ್ಯಾತ್ಮ , ಸಾಹಿತ್ಯ, ಸಾಮಾಜಿಕ ಕಾರ್ಯಗಳಲ್ಲಿ ನಿರಂತರ ಕ್ರಿಯಾಶೀಲನಾಗಿ ಭಕ್ತಿ ಪರಂಪರೆಯ ಪಂಕ್ತಿಯಲ್ಲಿ ಒಬ್ಬ ಶ್ರೇಷ್ಠ ಸಂತ ವೈದಿಕ ವ್ಯವಸ್ಥೆಯನ್ನು ವಿರೋಧಿಸಿದ್ದಕ್ಕಾಗಿ ದುರ್ಮರಣಕ್ಕೆ ಈಡಾಗಿ ಹೋಗುತ್ತಾರೆ. ಚೋಖಾಮೇಳ ಮಾತ್ರವಲ್ಲ ಕಲ್ಯಾಣದಲ್ಲಿ ಸಾವಿರಾರು ಶರಣರ ಹತ್ಯಾಕಾಂಡ ನಡೆದಂತೆ ಮಹಾರಾಷ್ಟ್ರದಲ್ಲಿ ಸಾವಿರ ಸಾವಿರ ಸಂಖ್ಯೆಯಲ್ಲಿ ಭಕ್ತಿ ಪಂಥದ ಸಂತರನ್ನು ಸಜೀವವಾಗಿ ಸುಟ್ಟು ಹಾಕಲಾಗಿದೆ.

ಒಂದು ಬಾರಿ ಡಾ|ಅಂಬೇಡ್ಕರ್ ಅವರು ಪಂಢರಪುರಕ್ಕೆ ಭೇಟಿ ಕೊಟ್ಟಾಗ ಅವರನ್ನು ‘ಮಹಾರ್’ ಎನ್ನುವ ಕಾರಣಕ್ಕೆ ದೇವಸ್ಥಾನದೊಳಗೆ ಪ್ರವೇಶಿಸದಂತೆ ಚೋಖಾಮೇಳನ ಸಮಾಧಿ ಬಳಿ ತಡೆಯಲಾಗುತ್ತದೆ. ಚೋಖಾ ಮೇಳನ ಸಮಾಧಿಗೆ ನಮಸ್ಕರಿಸಿದ ಅಂಬೇಡ್ಕರ್ ಅವರು ಅಲ್ಲಿಂದ ವಾಪಸ್ ತೆರಳುತ್ತಾರೆ. ನಂತರ ಡಾ| ಅಂಬೇಡ್ಕರ್ ಅವರು ತಮ್ಮ “Un touchables Who are they and why they became untouchables” ಎನ್ನುವ ಕೃತಿಯನ್ನು ಸಂತ ಚೋಖಾಮೇಳ ಅವರಿಗೆ ಅರ್ಪಿಸಿದ್ದನ್ನು ಕಾಣಬಹುದು. ಭಾರತದಲ್ಲಿ ಚೋಖಾಮೇಳ ನಂತಹ ಅನೇಕ ಕ್ರಾಂತಿಕಾರಿ ಸಂತರು ಶರಣರು ಸಮಾಜದಲ್ಲಿನ ಶ್ರೇಣಿ ಕೃತ ಮೇಲು ಕೀಳು ಎನ್ನುವ ಜಾತಿ ವ್ಯವಸ್ಥೆ ವಿರುದ್ದ ಹೋರಾಟ ಮಾಡುತ್ತ ಕೊನೆಗೆ ತಮ್ಮ ಪ್ರಾಣವನ್ನೇ ಅರ್ಪಿಸಿರುವ ಘಟನೆಗಳನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಶರಣ ಪರಂಪರೆ, ವಾರಕರಿ ಪಂಥದ ಅನುಯಾಯಿಗಳು ಇಂಥ ಮಹಾತ್ಮರ ಇತಿಹಾಸ ತಿಳಿದುಕೊಂಡರೆ ಮಾತ್ರ ಸಾಕಾಗಲ್ಲ ಅವರ ಮಾರ್ಗದಲ್ಲಿ ಸಾಗುವ ಅವರ ಧ್ಯೇಯೋದ್ದೇಶಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನ ಮಾಡಿದರೆ ಅದು ಹುತಾತ್ಮ ಶರಣರು ಮತ್ತು ಸಂತರಿಗೆ ನೀಡುವ ನಿಜವಾದ ಭಕ್ತಿ ನಿಜವಾದ ಗೌರವ.

ರವೀಂದ್ರ ಎನ್ ಎಸ್ – ಲೇಖಕರು


 

LEAVE A REPLY

Please enter your comment!
Please enter your name here