ವಿಜಯಪುರ: ಜನರ ಮೆಚ್ಚುಗೆಗೆ ಪಾತ್ರರಾದ ವೈದ್ಯರು

0
214

ವಿಜಯಪುರ ಮೇ.18: ಮಹಾರಾಷ್ಟ್ರ ರಾಜ್ಯದ ನವಿಮುಂಬೈಯಿಂದ ವಿಜಯಪುರಕ್ಕೆ ಆಗಮಿಸಿದ್ದ ಕೋವಿಡ್-19 ರೋಗಿ ಸಂಖ್ಯೆ 1176 ಗರ್ಬಿಣಿ ಮಹಿಳೆಗೆ ಹೆರಿಗೆ ಮಾಡಿಸುವ ಮೂಲಕ ಇಲ್ಲಿಯ ವೈದ್ಯರು ಮತ್ತೊಂದು ಸಾಧನೆಗೆ ಪಾತ್ರರಾಗುವುದರ ಜೊತೆಗೆ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

ಮೇ 13 ರಂದು ವಿಜಯಪುರ ಜಿಲ್ಲೆಗೆ ಖಾಸಗಿ ವಾಹನದ ಮೂಲಕ ಆಗಮಿಸಿದ್ದ 7 ಜನರಲ್ಲಿ 5 ಜನರಿಗೆ ಕೋವಿಡ್-19 ಸೋಂಕು ದೃಡಪಟ್ಟಿದ್ದು, ಇವರಲ್ಲಿ ಒರ್ವ ಗರ್ಬಿಣಿ ಮಹಿಳೆ ಸಹ ಒಳಗೊಂಡಿದ್ದಾರೆ. ಜಿಲ್ಲೆಗೆ ಆಗಮಿಸಿದ್ದ ಈ ಮಹಿಳೆಗೆ ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿತ್ತು. ತೀವ್ರ ವೇದನೆಯಿಂದಾಗಿ ದಾಖಲಾಗಿದ್ದ ಈ ಗರ್ಬಿಣಿಗೆ ಕೋವಿಡ್-19 ರೋಗಿಗಳಿಗಾಗಿ ಇರುವ ಎಂ.ಸಿ.ಎಚ್ ಆಸ್ಪತ್ರೆಯ ವಿಶೇಷ ಹೆರಿಗೆ ಕೋಣೆಯಲ್ಲಿ ನಾರ್ಮಲ್ ಹೆರಿಗೆ ಮಾಡಲಾಗಿದ್ದು, ಜನಿಸಿದ ಮಗುವಿನ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಸ್ಪಷ್ಟ ಪಡಿಸಿದ್ದಾರೆ.

ಮಹಾರಾಷ್ಟ್ರದ ನವಿಮುಂಬೈಯಲ್ಲಿ ಸಾಂಸ್ಥಿಕ ಕ್ವಾರಂಟೈನ್‍ದಿಂದ ಇಲ್ಲಿಗೆ ಆಗಮಿಸಿದ್ದ ಈ ಗರ್ಬಿಣಿ ಮಹಿಳೆಗೆ ಹೆರಿಗೆ ಮಾಡಿಸುವ ಸಂದರ್ಭದಲ್ಲಿ ಎಲ್ಲ ತಜ್ಞವೈದ್ಯರು ಮತ್ತು ಇತರೆ ಸಿಬ್ಬಂಧಿಗಳು ಪಿಪಿಇ ಕಿಟ್ ಮತ್ತು ಎನ್95 ಮಾಸ್ಕ್ ಸೇರಿದಂತೆ ಅವಶ್ಯಕ ಮುನ್ನೆಚ್ಚರಿಕೆಯೊಂದಿಗೆ ನಾರ್ಮಲ್ ಹೆರಿಗೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ನವಿಮುಂಬೈಯಿಂದ ಆಗಮಿಸಿರುವ ಒಟ್ಟು 7 ಜನರಲ್ಲಿ 5 ಜನರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಡ ಪಟ್ಟಿದೆ. ಇನ್ನೂ ಇಬ್ಬರ ಗಂಟಲು ದ್ರವ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಪಾಸಿಟಿವ್ ರೋಗಿಗಳನ್ನು ಆಸ್ಪತ್ರೆ ಕ್ವಾರಂಟೈನ್ ಮಾಡಲಾಗಿದ್ದು, ಇನ್ನುಳಿದ ಇಬ್ಬರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ. ರೋಗಿ ಸಂಖ್ಯೆ 1176 (19 ವರ್ಷ) ಮಹಿಳೆ, ರೋಗಿ ಸಂಖ್ಯೆ 1177 (45 ವರ್ಷ) ಪುರುಷ, ರೋಗಿ ಸಂಖ್ಯೆ 1183 (10 ವರ್ಷ) ಬಾಲಕ, ರೋಗಿ ಸಂಖ್ಯೆ 1184 (20 ವರ್ಷದ ಯುವತಿ), ರೋಗಿ ಸಂಖ್ಯೆ 1211 (22 ವರ್ಷ) ಯುವಕ, ಪಾಸಿಟಿವ್ ರೋಗಿಗಳಾಗಿದ್ದು, ಅಂತರರಾಜ್ಯದ ಮಹಾರಾಷ್ಟ್ರ ಮತ್ತು ಮುಂಬೈ ಪ್ರಯಾಣದ ಹಿನ್ನಲೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


 

 

LEAVE A REPLY

Please enter your comment!
Please enter your name here