ವಿಜಯಪುರ: ವೈದ್ಯ ಸಿಬ್ಬಂದಿಗಳ ಪರಿಶ್ರಮದ ಫಲವಾಗಿ ಕೋವಿಡ್-19 ರೋಗಿ ಗುಣಮುಖ

0
358

ವಿಜಯಪುರ ಎ.26 : ಜಿಲ್ಲೆಯ ಜನತೆಗೆ ಇಂದು ಸಂತಸದ ಕ್ಷಣ. ವೈದ್ಯರು, ವೈದ್ಯ ಸಿಬ್ಬಂದಿಗಳು ಹಾಗೂ ಕೊರೋನಾ ಪಾಸಿಟಿವ್ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ ಕ್ಷಣ. ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಈ ರೋಗದ ವಿರುದ್ಧ ಹೋರಾಟದ ಫಲವಾಗಿ ನಗರದ ಕೋವಿಡ್-19 ಸೋಂಕಿತ ರೋಗಿ ಸಂಖ್ಯೆ 221 ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಸಂದರ್ಭದಲ್ಲಿ ಎಲ್ಲರ ಮೊಗದಲ್ಲಿ ಸಂತಸ ಮೂಡಿತ್ತು.

ಕಳೆದ ಮಾರ್ಚ 9 ರಂದು ಕೋವಿಡ್-19 ಸೋಂಕಿಗೆ ಒಳಗಾಗಿ ತೀವ್ರ ಅಸ್ವಸ್ಥ ರೀತಿಯಲ್ಲಿ, ಉಸಿರಾಟದ ತೊಂದರೆ ಹೃದಯ ಸಂಬಂಧಿ ಕಾಯಿಲೆ, ಸಕ್ಕರೆ ಕಾಯಿಲೆ, ಎರಡು ಬಾರಿ ಪಾಶ್ರ್ವವಾಯು ಪೀಡಿತ ಮತ್ತು ಥೈರಾಯ್ಡ್‍ಗಳಂತಹ ಕಾಯಿಲೆಗಳಿಂದ ಬಳಲಿ ಗಂಭೀರ ಪರಿಸ್ಥಿತಿಯಲ್ಲಿ 61 ವಯೋಮಾನದ ರೋಗಿ ಸಂಖ್ಯೆ 221 ದಾಖಲಾಗಿದ್ದರು.

ಐಸಿಯು ಸೇರಿದಂತೆ ಇನ್ನಿತರ ನಿರಂತರ ಚಿಕಿತ್ಸೆ, ವೈದ್ಯರು ಮತ್ತು ವೈದ್ಯ ಸಿಬ್ಬಂದಿಗಳು ತಜ್ಞರ ಕಾಳಜಿಯಿಂದಾಗಿ ಮತ್ತು ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ ಸಿಇಒ ಅವರ ಸೂಕ್ತ ಮಾರ್ಗದರ್ಶನದಲ್ಲಿ ರೋಗಿ ಸಂಖ್ಯೆ 221 ಸಂಪೂರ್ಣ ಗುಣಮುಖ ಪಡಿಸಿದ ಶ್ರೇಯಸ್ಸು ಜಿಲ್ಲಾಡಳಿತ ಮತ್ತು ಜಿಲ್ಲೆಯ ವೈದ್ಯ ಸಿಬ್ಬಂದಿಗಳಿಗೆ ಸಲ್ಲುತ್ತದೆ.
ಈ ಸಂದರ್ಭದಲ್ಲಿ ರೋಗಿ 221 ಎಲ್ಲ ವೈದ್ಯರಿಗೆ ವೈದ್ಯ ಸಿಬ್ಬಂದಿಗಳಿಗೆ ಮತ್ತು ಶೂಶುಷ್ರುಕಿಯರಿಗೆ ಈ ರೋಗದಿಂದ ಗುಣಪಡಿಸಿದಕ್ಕಾಗಿ ಭಾವುಕರಾಗಿ ಅಭಿನಂದನೆ ಸಲ್ಲಿಸಿದರು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ತಾವೂ ಈ ಆಸ್ಪತ್ರೆಗೆ ದಾಖಲಾಗಿದ್ದ ಬಗ್ಗೆ ಸ್ಮರಿಸಿದ ಅವರು ಅತ್ಯುತ್ತಮ ಉಪಚಾರದಿಂದ ಮತ್ತು ಸಿಬ್ಬಂದಿಗಳ ಸೇವೆಯಿಂದ ಗುಣಮುಖರಾಗಿರುವುದಾಗಿ ಸಂತಸ ವ್ಯಕ್ತಪಡಿಸಿದರು.

ಜಿಲ್ಲಾಸ್ಪತ್ರೆ ಸರ್ಜನ್ ಶ್ರೀ ಶರಣಪ್ಪ ಕಟ್ಟಿ ಅವರು ಮಾತನಾಡಿ ಎಲ್ಲಾ ತಜ್ಞ ವೈದ್ಯರ, ನರ್ಸ್‍ಗಳ, ಲ್ಯಾಬ್ ಟೆಕ್ನಿಶಿಯನ್‍ಗಳ, ವೈದ್ಯ ಸಿಬ್ಬಂದಿಗಳ, ಸ್ವಚ್ಛತಾ ಸಿಬ್ಬಂದಿಗಳ ನೆರವಿನ ಮತ್ತು ಅತ್ಯುತ್ತಮ ಸೇವೆಯಿಂದಾಗಿ ಹಾಗೂ ರೋಗಿಯ ಸಹಕಾರದಿಂದ ಕೋವಿಡ್-19 ಸೋಂಕಿತ ರೋಗಿಯನ್ನು ಗುಣಪಡಿಸಲು ಸಾಧ್ಯವಾಗಿದೆ, ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನ ಮತ್ತು ಎಲ್ಲರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಹೇಳಿ ಇತರೆ 36 ರೋಗಿಗಳು ಸಹ ಗುಣಮುಖರಾಗುವ ಆಶಾಭಾವನೆ ವ್ಯಕ್ತಪಡಿಸಿದರು.
ರೋಗಿ ಸಂಖ್ಯೆ 221 ಗೆ ಚಿಕಿತ್ಸೆ ನೀಡಿದ ವೈದ್ಯರಾದ ಡಾ.ಹರೀಶ್ ಪುಜಾರಿ ಅವರು ಮಾತನಾಡಿ ರೋಗಿಯು ಆಸ್ಪತ್ರೆಗೆ ದಾಖಲಾತಿ ಸಂದರ್ಭದಲ್ಲಿ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿದ್ದರು. ಐಸಿಯು ಸೇರಿದಂತೆ ಇತರೆ ಚಿಕಿತ್ಸೆಗಳನ್ನು ನೀಡಿದ ಫಲವಾಗಿ ರೋಗಿಯಲ್ಲಿ ಚೇತರಿಕೆ ಕಂಡುಬಂದು ಇಂದು ಗುಣಮುಖರಾಗಿದ್ದಾರೆ. ರೋಗಿಯಲ್ಲಿ ಸದ್ಯಕ್ಕೆ ಯಾವುದೇ ಕೊರೋನಾ ಲಕ್ಷಣ ಇರುವುದಿಲ್ಲ. ಸ್ವಲ್ಪ ವಿಶ್ರಾಮದ ಅವಶ್ಯಕತೆಯಿದ್ದು, 14 ದಿನ ಹೋಮ್‍ಕ್ವಾರಂಟೈನ್ ಮೂಲಕ ತೀವ್ರ ನಿಗಾ ಇಡಲಾಗುತ್ತದೆ ಎಂದು ತಿಳಿಸಿದರು.

ವೈದ್ಯಕೀಯ ಸಿಬ್ಬಂದಿ ಶರಣಬಸಪ್ಪ ಹಿಪ್ಪರಗಿ ಮಾತನಾಡಿ ರೋಗಿಯು ಆಸ್ಪತ್ರೆಗೆ ದಾಖಲಾತಿಯ ಸಂದರ್ಭದಲ್ಲಿ ತೀವ್ರ ಉಸಿರಾಟದ ತೊಂದರೆ ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದರು. ರೋಗಿಯ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಪ್ರತಿನಿತ್ಯ ನಿರಂತರ ಚಿಕಿತ್ಸೆ ಮತ್ತು ನಿಗಾದಿಂದಾಗಿ ಇಂದು ಅವರ ಆರೋಗ್ಯ ಸುಧಾರಣೆಗೊಂಡಿದೆ ಎಂದು ಹೇಳಿದರು. ನರ್ಸ್ ಶಾಂತಾ ಅವರು ರೋಗಿಗೆ ಚಿಕಿತ್ಸೆಯಲ್ಲಿ ನೆರವಾಗಲು ಮತ್ತು ವೈದ್ಯಾಧಿಕಾರಿಗಳಿಗೆ ಅವರ ಅವಶ್ಯಕತೆಗಳಿಗೆ ಅನುಗುಣವಾಗಿ ರೋಗಿಯ ರೋಗ ನಿವಾರಣೆಗೆ ಶ್ರಮಿಸಿದ್ದು, ಅಧಿಕಾರಿಗಳ ಸಹಾಯ ಮತ್ತು ಮಾರ್ಗದರ್ಶನ ನೆರವಾಯಿತೆಂದು ಹೇಳಿದರು.
ಜಿಲ್ಲಾಸ್ಪತ್ರೆ ಆವರಣದಲ್ಲಿಂದು ರೋಗಿ 221ಗೆ ಚಪ್ಪಾಳೆ ತಟ್ಟುವ ಮೂಲಕ ಮುಂದಿನ ಜೀವನಕ್ಕೆ ಎಲ್ಲ ವೈದ್ಯಾಧಿಕಾರಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶುಭ ಹಾರೈಸಿದರು. ಅತ್ಯಂತ ಸಂತಸದ ವಾತಾವರಣದಲ್ಲಿ ಅಂಬ್ಯುಲೆನ್ಸ್ ಮೂಲಕ ರೋಗಿ ಮನೆಗೆ ತೆರಳಲು ಅವಕಾಶ ಕಲ್ಪಿಸಲಾಯಿತು. ಅದರಂತೆ ರೋಗಿಗೆ ಜಿಲ್ಲಾಡಳಿತ ಪರವಾಗಿ ಡ್ರೈಪ್ರೂಟ್ಸ್ ಮತ್ತು ಸಸಿಯನ್ನು ನೀಡಿ ಶುಭ ಕೋರಲಾಯಿತು.

ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶೆಟ್ಟಿ, ಡಾ.ಎಂ.ಬಿ ಬಿರಾದಾರ, ಡಾ.ಕವಿತಾ, ಡಾ.ಲಕ್ಕಣ್ಣನವರ, ಡಾ.ಧಾರವಾಡಕರ, ಡಾ.ಸಂಪತ್ ಕುಮಾರ ಗುಣಾರೆ ಸೇರಿದಂತೆ ಇತರ ವೈದ್ಯರು ಉಪಸ್ಥಿತರಿದ್ದರು.


 

LEAVE A REPLY

Please enter your comment!
Please enter your name here