ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ 39 ಕೊರೋನಾ ಪಾಸಿಟಿವ್ ಪ್ರಕರಣ: ರೋಗಿಗಳ ಆರೋಗ್ಯ ಸ್ಥಿರ -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

0
228

ವಿಜಯಪುರ ಎ.24: ಜಿಲ್ಲೆಯಲ್ಲಿ ಈವರೆಗೆ ಒಟ್ಟು 39 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದ ಎಲ್ಲ ಪಾಸಿಟಿವ್ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಅಪಾಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ಜಿಲ್ಲೆಯ ಒಟ್ಟು 1511 ಜನರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, 1358 ನೆಗೆಟಿವ್ ವರದಿ ಬಂದಿದೆ. 113 ಜನರ ವೈದ್ಯಕೀಯ ಪರೀಕ್ಷೆ ಇನ್ನೂ ಬರಬೇಕಾಗಿದೆ. ಈವರೆಗೆ ಪಾಸಿಟಿವ್ ಪ್ರಕರಣ ಕಂಡುಬಂದ ರೋಗಿಗಳೆಲ್ಲರ ಆರೋಗ್ಯ ಸ್ಥಿರವಾಗಿದೆ. ಹಿರಿಯ ರೋಗಿಗಳು, ಗರ್ಭಿಣಿ ಮಹಿಳೆ, ಮಕ್ಕಳ ಆರೋಗ್ಯವು ಕೂಡ ಸ್ಥಿರವಾಗಿದ್ದು, ಇವರ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಅವರು ತಿಳಿಸಿದರು.

ಸಾಮಾಜಿಕ ಅಂತರ ನಿಯಮ ಪಾಲನೆ ಮಾಡದೇ ಇರುವುದರಿಂದ ಈ ಸೋಂಕು ಹೆಚ್ಚಿನ ರೀತಿಯಲ್ಲಿ ಹರಡಲು ಕಾರಣವಾಗುತ್ತದೆ. ಕಾರಣ ಸಾರ್ವಜನಿಕರೆಲ್ಲರೂ ಕಡ್ಡಾಯವಾಗಿ ಸಾಮಾಜಿಕ ಅಂತರ ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿರುವ ಅವರು ಮುನ್ನೆಚ್ಚರಿಕೆ ವಹಿಸುವುದು ಅತ್ಯವಶ್ಯ ಎಂದು ಹೇಳಿದರು.

ಕಂಟೇನ್ಮೆಂಟ್ ಪ್ರದೇಶಗಳಿಂದ ಈಗಾಗಲೇ ಹೆಚ್ಚಿನ ಜನರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ಸ್ವೀಕರಿಸಲಾಗಿದ್ದು, ಹೆಚ್ಚಿನವು ನೆಗೆಟಿವ್ ಬಂದಿವೆ. ನಿನ್ನೆ ಇನ್ಸ್‍ಟಿಟ್ಯೂಶನಲ್ ಕೋರಂಟೈನ್‍ದಿಂದ ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ 23 ಜನರಿಗೆ ಹೋಮ್ ಕ್ವಾರಂಟೈನ್ ಮಾಡಲಾಗುತ್ತಿದೆ. ಅದರಂತೆ ಶೀಘ್ರದಲ್ಲಿಯೇ 140 ಜನರ ಹೋಮ್ ಕ್ವಾರಂಟೈನ್ ಪ್ರಕ್ರಿಯೆ ಕೂಡಾ ನಡೆಯಲಿದೆ ಎಂದು ತಿಳಿಸಿದ ಅವರು ಪಾಸಿಟಿವ್ ಪ್ರಕರಣಗಳೊಂದಿಗೆ ಸಂಪರ್ಕ ಹೊಂದಿದವರ ಬಗ್ಗೆ ತೀವ್ರ ತನಿಖೆ ನಡೆದಿದೆ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಈವರೆಗೆ ಲಾಕ್‍ಡೌನ್ ಹಿನ್ನೆಲೆ ಕಾನೂನು ಉಲ್ಲಂಘಿಸಿದ 200 ಜನರನ್ನು ವಶಕ್ಕೆ ಪಡೆಯಲಾಗಿದೆ. 65 ವಿವಿಧ ಪ್ರಕರಣ ಮತ್ತು ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶವುಳ್ಳ ಸುದ್ದಿ ಬಿತ್ತರಿಸಿದ್ದರಿಂದ ಒಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಇಂತಹ ಸಾಮಾಜಿಕ ಜಾಲತಾಣದ ಮೂಲಕ ತಪ್ಪು ತಿಳುವಳಿಕೆ ಮೂಡಿಸುವ ಸುದ್ಧಿಗಳನ್ನು ಪ್ರಸಾರ ಮಾಡಿದ್ದಲ್ಲಿ ಅಂತಹವರ ವಿರುದ್ಧ ಕಾನೂನಿನ ರೀತ್ಯ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.


 

LEAVE A REPLY

Please enter your comment!
Please enter your name here