ಪ್ಯಾರಾಸಿಟಮಲ್ ಮಾತ್ರೆಗಳ ಮಾರಾಟದ ಮೇಲೆ ತೀವ್ರ ನಿಗಾ -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

0
231

ವಿಜಯಪುರ ಎ.11: ಜಿಲ್ಲೆಯಲ್ಲಿ ಮೆಡಿಕಲ್ ಶಾಪ್‍ಗಳ ಮೂಲಕ ಸಾರ್ವಜನಿಕರಿಗೆ ಜ್ವರಕ್ಕೆ ಸಂಬಂಧಪಟ್ಟಂತೆ ಮಾರಾಟಮಾಡುವ ಪ್ಯಾರಾಸಿಟಮಲ್ ಮಾತ್ರೆಗಳ ಬಗ್ಗೆ ಸವಿವರವನ್ನು ಇಟ್ಟುಕೊಂಡು ಜಿಲ್ಲಾ ಔಷಧಿಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತರುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆಯಾ ಅಂಗಡಿ ಮಾಲಿಕರಿಗೆ ಸಲಹೆ ನೀಡಿದ್ದಾರೆ.
ಕೋವಿಡ್-19 ಮುನ್ನೆಚ್ಚರಿಕೆಗಳ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಕೋವಿಡ್-19 ನಿಯಂತ್ರಣದ ಉದ್ದೇಶದೊಂದಿಗೆ ಇನ್ನೂ ಹೆಚ್ಚು ಪರಿಣಾಮಕಾರಿ ಕ್ರಮವಾಗಿ ಜಿಲ್ಲೆಯ ಸುಮಾರು 900ಕ್ಕೂ ಹೆಚ್ಚು ಔಷಧಿ ಅಂಗಡಿಗಳ ಮೂಲಕ ಜ್ವರಕ್ಕೆ ಸಂಬಂಧಪಟ್ಟ ಪ್ಯಾರಾಸಿಟಮಲ್ ಮಾತ್ರೆ ಮಾರಾಟ, ಜ್ವರದಿಂದ ಬಳಲುತ್ತಿರುವವರ ಬಗ್ಗೆ ಮಾಹಿತಿ ಸಂಗ್ರಹಿಸಲು ಇಂತಹ ಕ್ರಮಕೈಗೊಂಡಿದ್ದು, ಆಯಾ ವೈದ್ಯಾಧಿಕಾರಿಗಳು ನೀಡುವ ಪ್ರಿಸ್ಕ್ರೀಪ್ಷನ್, ರೋಗಿಯ ಹೆಸರು, ಮೋಬೈಲ್ ಸಂಖ್ಯೆಯುಳ್ಳ ಸಮಗ್ರ ಮಾಹಿತಿಯನ್ನು ದಾಖಲಿಕರಣಗೊಳಿಸುವುದರ ಜೊತೆಗೆ ಔಷಧಿ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತರುವಂತೆ ಸಲಹೆ ನೀಡಿದ್ದಾರೆ.
ಕೊರೋನಾ ವೈರಸ್ ಹರಡುವಿಕೆಯ ಮುಖ್ಯ ಲಕ್ಷಣಗಳಾಗಿರುವ ನೆಗಡಿ, ಕೆಮ್ಮು, ಜ್ವರ ಹಾಗೂ ತೀವ್ರ ಉಸಿರಾಟದ ತೊಂದರೆಗಳ ಬಗ್ಗೆ ತೀವ್ರ ನಿಗಾ ಇಡುವ ಅವಶ್ಯಕತೆ ಇದ್ದು, ಒಂದು ವೇಳೆ ಕೋವಿಡ್-19 ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ ಅಂತಹವರ ಪ್ರಾಥಮಿಕ ಮತ್ತು ಸೆಕೆಂಡರಿ ಸಂಪರ್ಕಗಳನ್ನು ಗುರುತಿಸಲು ನೆರವಾಗುವ ದೃಷ್ಠಿಯಿಂದ ಈ ಕ್ರಮ ಕೈಗೊಂಡಿದ್ದು, ಆಯಾ ಮೆಡಿಕಲ್ ಶಾಪ್ ಮಾಲಿಕರು ನಿರ್ಲಕ್ಷವಹಿಸದೆ ಸೂಕ್ತ ಮಾಹಿತಿ ಇಟ್ಟುಕೊಳ್ಳಬೇಕು. ಔಷಧಿ ನಿಯಂತ್ರಣಾಧಿಕಾರಿಗಳು ಕೂಡಾ ಈ ಕುರಿತು ಸೂಕ್ತ ತಪಾಸಣೆ ಮತ್ತು ನಿಗಾ ಇಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಹೈಡ್ರಾಕ್ಷಿಕ್ಲೋರೊಕ್ವೀನ್(ಎಚ್.ಸಿ.ಕ್ಯೂ) ಮಾತ್ರೆಗಳನ್ನು ಕೋವಿಡ್-19 ತಪಾಸಣೆ ಮತ್ತು ಚಿಕಿತ್ಸೆಯಲ್ಲಿ ತೊಡಗಿರುವ ಆರೋಗ್ಯ ಅಧಿಕಾರಿಗಳು, ಸಿಬ್ಬಂಧಿಗಳು, ಆಶಾಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಆದ್ಯತೆ ಮೇಲೆ ಪೂರೈಸಲು ಉದ್ದೇಶಿಸಲಾಗಿದೆ. ಅದರಂತೆ ವಿಶೇಷವಾಗಿ ವೈದ್ಯಕೀಯ ಸಲಹೆ ಆಧಾರದ ಮೇಲೆ ಈ ಮಾತ್ರೆ ನೀಡಲಾಗುತ್ತಿದೆ. ಅದರಂತೆ ವೈದ್ಯಕೀಯ ತುರ್ತು ಉಪಚಾರದ ಮೇಲೆ ಬೇರೆ ಜಿಲ್ಲೆಗೆ ತೆರಳಲು ನಿಗದಿತ ಪಾಸ್ ಮತ್ತು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಕಡ್ಡಾಯಗೊಳಿಸಿದೆ. ಹೋಗಿ ಬಂದವರನ್ನು ಕಡ್ಡಾಯವಾಗಿ 14 ದಿನಗಳ ಹೋಮ್‍ಕ್ವಾರಂಟೈನ್ ಸಹ ಮಾಡಲು ನಿರ್ದೇಶಿಸಿದೆ. ಬೇರೆ ಜಿಲ್ಲೆಗಳಿಂದ ಬರುವವರು ಕೂಡಾ ಆಯಾ ಸಕ್ಷಮ ಪ್ರಾಧಿಕಾರಿಗಳ ಅನುಮತಿ ಕಡ್ಡಾಯವಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಗರ್ಬಿಣಿ ಮಹಿಳೆಯರಿಗೆ ಅನುಕೂಲವಾಗುವಂತೆ ಜಿಲ್ಲಾ ಕೇಂದ್ರ ಮತ್ತು ಪ್ರತಿ ತಾಲೂಕಾ ವ್ಯಾಪ್ತಿಯಲ್ಲಿ ತಲಾ ಒಂದರಂತೆ ‘’ನಗು-ಮಗು’’ ವಾಹನದ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸಬೇಕು, ಇದರಿಂದ ಗರ್ಬಿಣಿ ಮಹಿಳೆಯರಿಗೆ ಆಸ್ಪತ್ರೆಗೆ ಬರಲು ಅನುಕೂಲವಾಗುವುದರ ಜೊತೆಗೆ ವಾಪಸ್ ತೆರಳಲು ಕೂಡಾ ಸಹಕಾರಿಯಾಗಲಿದ್ದು, ಇದಕ್ಕೆ ಬೇಕಾದ ಅನುದಾನ ಮತ್ತು ಇಂಧನ ವೆಚ್ಚದ ಸೌಲಭ್ಯವನ್ನು ಕಲ್ಪಿಸುವುದಾಗಿ ತಿಳಿಸಿದ ಜಿಲ್ಲಾಧಿಕಾರಿಗಳು ಈ ಕುರಿತು ತಕ್ಷಣ ಕ್ರಮ ಕೈಗೊಳ್ಳುವಂತೆ ಸಂಭಂಧಿತ ಅಧಿಕಾರಿಗಳಿಗೆ ಸೂಚಿಸಿದರು.

LEAVE A REPLY

Please enter your comment!
Please enter your name here