ಎಪ್ರೀಲ್ 9ರಂದು ಮುಸ್ಲಿಂ ಪ್ರಾರ್ಥನಾ ಸ್ಥಳಗಳಿಗೆ ನಿರ್ಬಂಧ

0
56

ವಿಜಯಪುರ ಎ.06: ಸರ್ಕಾರದ ನಿರ್ದೇಶನದನ್ವಯ ಕೋವಿಡ್-19 ಮುನ್ನೆಚ್ಚರಿಕೆಯಾಗಿ ಇದೇ ಎಪ್ರೀಲ್ 9ರಂದು ಮುಸ್ಲಿಂರಿಗೆ ಅತ್ಯಂತ ಮಹತ್ವದ ದಿನವಾಗಿರುವ ಶಬ್-ಎ-ಬರಾತ್‍ದಂದು ಯಾರೂ ಒಟ್ಟುಗೂಡಿ ಧಾರ್ಮಿಕ ಪ್ರಾರ್ಥನೆ ಅಂಗವಾಗಿ ಮಸೀದಿ, ಮುಸ್ಲಿಂ ಖಬ್ರಸ್ಥಾನ ಹಾಗೂ ದರ್ಗಾಗಳಿಗೆ ಸಾರ್ವಜನಿಕರ ಭೇಟಿಯನ್ನು ನಿರ್ಬಂಧಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಆಕ್ವಾಫ್ (AUQAF) ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಇಸ್ಲಾಹುದ್ದೀನ್ ಗದ್ಯಾಳ ಅವರು ಆದೇಶ ಹೊರಡಿಸಿದ್ದಾರೆಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಕೋವಿಡ್-19 ಅಪಾಯದ ಹಿನ್ನೆಲೆಯಲ್ಲಿ ರಾಜ್ಯದ ಯಾವುದೇ ಮುಸ್ಲಿಂ ಖಬ್ರಸ್ಥಾನಗಳಲ್ಲಿ ಮತ್ತು ಖಬ್ರಸ್ಥಾನದ ಮುಖ್ಯದ್ವಾರದ ಹೊರಗಡೆ ಹಾಗೂ ದರ್ಗಾಗಳಲ್ಲಿ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಈ ಸಂದರ್ಭದಲ್ಲಿ ಇವೆಲ್ಲವುಗಳನ್ನು ಮುಚ್ಚುವಂತೆ ಅವರು ತಿಳಿಸಿದ್ದು, ಆಯಾ ವ್ಯವಸ್ಥಾಪಕರು ಮೇಲ್ಕಂಡಂತೆ ಸಾಮೂಹಿಕ ಪ್ರಾರ್ಥನೆಗೆ ಮತ್ತು ಸಾರ್ವಜನಿಕರ ಭೇಟಿಗೆ ನಿರ್ಬಂಧಿಸಲು ಅವಶ್ಯಕ ಕ್ರಮಕೈಗೊಳ್ಳಲು ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನೀಡಲಾದ ಆದೇಶದನ್ವಯ ಆಯಾ ಮುಸ್ಲಿಂ ಖಬ್ರಸ್ಥಾನಗಳ ವ್ಯವಸ್ಥಾಪಕರು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಎಲ್ಲ ವಕ್ಫ್ ಅಧಿಕಾರಿಗಳು ಮತ್ತು ರಾಜ್ಯದಲ್ಲಿರುವ ಎಲ್ಲ ವಕ್ಫ್ ಸಲಹಾ ಸಮಿತಿಗಳು ಈ ಆದೇಶವನ್ನು ಎಲ್ಲ ವಕ್ಪ್ ವ್ಯವಸ್ಥಾಪಕರಿಗೆ ಕಳುಹಿಸುವ ಜೊತೆಗೆ ಆದೇಶ ಪರಿಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here