ಪ್ರೀತಿ ಮುದುಡಿದ ಹೂವಲ್ಲವೇ……

0
273

ನಿನ್ನೊಂದಿಗೆ ಜನ್ಮ ಜನ್ಮಾಂತರಗಳಿಂದ ಮಾತನಾಡಿದೆ. ಆದರೂ ಏನೂ ಮಾತೆ ಆಡಿಲ್ಲ ಅನಿಸುತ್ತದೆ. ನಿನ್ನೊಂದಿಗೆ ಹೇಗೆ ಮಾತನಾಡಬೇಕೆಂಬುದು ಗೊತ್ತಾಗುತ್ತಿಲ್ಲ. ಗೊತ್ತಿಲ್ಲದೆ ಏನೆಲ್ಲ ಮಾತನಾಡಿ ಬಿಡುವೆ. ಇಷ್ಟೆಲ್ಲ ಮಾತನಾಡಿದರೂ ನಾನು ಇದೇ ಮೊದಲ ಸಲ ಮಾತನಾಡಿಸುತ್ತಿರುವೆ ಎನಿಸುತ್ತದೆ. ಹೀಗೆ ಅನಿಸುವುದು ಪ್ರೇಮಿಗಳಿಗೆ ಮಾತ್ರ ಎಂಬುದು ನನ್ನ ನಂಬಿಕೆ. ನಿನ್ನ ಪ್ರೀತಿಗೆ ಜನ್ಮ ಜನ್ಮಾಂತರಗಳಿಂದ ಕಾಯುತ್ತಿರುವವಳು ನಾನು. ಈ ಜನ್ಮದಲ್ಲಿಯೂ ಕೈ ಕೊಟ್ಟೆ ನೀನು. ಪ್ರೀತಿ ಎಂದರೆ ಮೊದ ಮೊದಲು ಏನೂ ತಿಳಿದುಕೊಂಡಿರಲಿಲ್ಲ. ಪ್ರೀತಿಯ ಬಗ್ಗೆ ನನಗೆ ಯಾವ ಭಾವನೆಯು ಇರಲಿಲ್ಲ. ಹಗಲಿರುಳು ನನ್ನ ಸುತ್ತ ಸುಳಿದು ಪ್ರೀತಿಯ ಆತುರ ಮೂಡಿಸಿದವನು ನೀನು. ಪ್ರೀತಿಯ ಕೊನೆಯ ಘಟ್ಟ ಮುಟ್ಟಬೇಕೆಂದಾಗ ದೂರ ಸರಿದಿ. ಅದೆಕೋ ನಿನ್ನ ಪ್ರೀತಿ ಮುದುಡಿದ ಹೂವಾಯಿತು ತಿಳಿಯಲಿಲ್ಲ. ಒಂದು ಹುಡುಗಿ ಪೂರ್ತಿ ಹೃದಯ ಬಿಚ್ಚಿ ಕೊಡಲು ಬಂದಾಗ ದೂರ ಸರಿಯುವ ಬುದ್ದಿ ಏಕೆ ಬಂತು? ಪ್ರೀತಿ ಎಂದರೆ ಏನಂತ ತಿಳಿದುಕೊಂಡಿರುವಿ. ನಾನಿಲ್ಲದೆ ಹೋಗಿದ್ದರೆ, ನಿನ್ನ ಹುಟ್ಟು ಆಗುತ್ತಿರಲಿಲ್ಲ ಎಂದು ಹೇಳುತ್ತಿದ್ದಿಯಲ್ಲ ಈಗ ಅದೆಲ್ಲ ಏನಾಯಿತು? ಯಾವ ಕಾರಣಕ್ಕಾಗಿ ನನ್ನಿಂದ ದೂರವಾದಿ ತಿಳಿಯಲಿಲ್ಲ. ನನಗೆ ನಂಬಿಸಿ ಮೋಸ ಮಾಡಿಬಿಟ್ಟೆ.
ನೀನೀಡುವ ಪ್ರತಿ ಹೆಜ್ಜೆಯ ಹಿಂದೆ ನನ್ನ ಸುಂದರ ಕನಸುಗಳಿದ್ದವು. ನನ್ನ ಸ್ವಾಭಿಮಾನದ ಪ್ರಶ್ನೆಗಳಿಗೆಲ್ಲ ನಿನ್ನ ನಗುವಿನಲ್ಲಿ ಉತ್ತರ ಕಾಣುತ್ತಿದ್ದೆ. ನಿನ್ನನ್ನು ದಾಸನಾಗಿ ಮಾಡಿಕೊಳ್ಳುವ ಮನೋಭಾವ ಎಂದಿಗೂ ನನ್ನಲ್ಲಿ ಬರಲಿಲ್ಲ. ನನ್ನೆದೆಯ ಮೇಲೆ ಕುಣಿಯುವ ರಾಜ ಮಹಾರಾಜ ನೀನಾಗಬೇಕೆಂದುಕೊಂಡೆ. ಪ್ರೀತಿ ಹುಟ್ಟುವುದು ಒಂದೇ ಸಲ ಕಣೇ, ಪ್ರೀತಿಗೆ ಸಾವಿಲ್ಲಂತ ಪ್ರಪಂಚವೇ ಸಾರಿ ಹೇಳುತ್ತದೆ. ಪ್ರೀತಿ ಒಂದು ಸಲ ಸತ್ತಿತೆಂದರೆ ಅದು ಮರಳಿ ಹುಟ್ಟುವುದಿಲ್ಲ. ಅದೇಕೆ ನನ್ನ ಪ್ರೀತಿಸಿದಿ? ನನ್ನ ಸೌಂಧರ್ಯ ಇಷ್ಟ ಪಟ್ಟೆಯಾ? ನನ್ನ ಭಾವನೆಗಳನ್ನು ಇಷ್ಟಪಟ್ಟೆಯಾ? ನನ್ನ ಅಂತಸ್ತು ಇಷ್ಟ ಪಟ್ಟೆಯಾ? ಯಾವುದನ್ನು ನೋಡಿ ಇಷ್ಟ ಪಟ್ಟೆ ಎಂದು ಕೇಳಿದಾಗ ನೀನೇನು ಹೇಳಿದಿ ಎಂದು ನೆನಪಿದೆಯಾ? ನನ್ನಂತರಂಗದ ಭಾವನೆಗಳನ್ನು ನೋಡಿ ಇಷ್ಟ ಪಟ್ಟೆನೆಂದು ಹೇಳಿದ್ದಿಯಲ್ಲ ಈಗೇಕೆ ಬೇಡವಾಯಿತು ನನ್ನಂತರಂಗ?

ನನಗೆ ಗೊತ್ತು ಕಣೋ ನಿಮ್ಮಂಥ ಹುಡುಗರಿಗೆ ಹುಡುಗಿಯರ ಹೃದಯ ಅನುಭವಿಸಲಿಕ್ಕೆ ಬರುವುದಿಲ್ಲವೆಂದು. ಮೊದಲ ಸಲ ನನ್ನನ್ನು ಪ್ರೀತಿಸುತ್ತೇನೆಂದು ಹೇಳಲು ಎಷ್ಟೊಂದು ಕಷ್ಟ ಪಟ್ಟೆ ? ಎಷ್ಟೊಂದು ನಾಟಕವಾಡಿದಿ? ಎಷ್ಟೊಂದು ಸುಳ್ಳು ಹೇಳಿದಿ? ನನಗಾಗಿ ಎಷ್ಟೊಂದು ಖರ್ಚು ಮಾಡಿದಿ? ನೀನು ಮಾಡುವ ಪ್ರತಿಯೊಂದು ಪ್ರಯತ್ನ ನೋಡಿ ನಗು ಬರುತ್ತಿತ್ತು. ಒಳಗೊಳಗೆ ಗುಸು ಗುಸು ಅಂತ ನಗುತ್ತಿದ್ದೆ. ಜೋರಾಗಿ ನಕ್ಕು ಬಿಟ್ಟರೆ ಮತ್ತೆಲ್ಲಿ ನೀನು ನೋವು ಮಾಡಿಕೊಳ್ಳುತ್ತಿಯೆಂದು ಮೇಲ್ನೋಟದ ಮಾತುಗಳನ್ನಾಡುತ್ತಿದ್ದೆ. ಒಂದು ಸತ್ಯ ಸಂಗತಿ ಹೇಳುತ್ತೇನೆ ಕೇಳು. ಪ್ರೀತಿಯ ಭಾವಗಳು ಹುಡುಗರಿಗಿಂತ ಮೊದಲು ಹುಡುಗಿಯರಿಗೆ ಅರ್ಥವಾಗುತ್ತವೆ. ಆದರೂ ಹುಡುಗಿಯರು ಏನು ಅರಿಯದಂತೆ ಇರುತ್ತಾರೆ. ನಿನ್ನಂಥ ಸಾವಿರಾರು ಹುಡುಗರು ನನ್ನ ಹಿಂದೆ ಸದಾ ಸುತ್ತುತ್ತಲೇ ಇದ್ದರೂ ಆದರೆ ಯಾರಿಗೂ ನನ್ನ ಮನಸ್ಸು ಹೃದಯ ಕದಿಯುವದಾಗಿರಲಿಲ್ಲ. ನೀನು ನನ್ನ ಮನಸ್ಸು ಹೃದಯ ಹೇಗೆ ಕದ್ದೆ ತಿಳಿಯಲಿಲ್ಲ.
ನೀನು ನನ್ನಿಂದ ದೂರವಾದರೂ ನನ್ನ ಪ್ರೀತಿಯ ಬೆಳವಣಿಗೆ ನಿಂತಿಲ್ಲ. ನಿನ್ನನ್ನು ಎಷ್ಟು ಪ್ರೀತಿಸುತ್ತೇನೆಂದು ಹೇಳಲಿಕ್ಕೆ ಯಾವ ಅಳತೆ ಗೋಲು ಇಲ್ಲ. ನೀನು ದೂರವಾದರೆ ನಾನು ನಿನಗೊಸ್ಕರ ನರಳುತ್ತೇನೆಂದು ತಿಳಿಯಬೇಡ. ಯಾಕೆಂದರೆ, ನರಳುವ ಪ್ರೀತಿ ನನ್ನದಲ್ಲ. ನನ್ನ ಪ್ರೀತಿ ಪ್ರೀತಿಯಂತೆ ಇದೆ. ಮುಂಬರುವ ದಿನಗಳಲ್ಲಿ ನನ್ನ ಸೇರಿಯೇ ಸೇರುತ್ತಿ. ನೀನು ಮೋಸ ಮಾಡಿರುವುದು ನನಗಲ್ಲ. ನಿನಗೆ ನೀನೆ ಮೋಸ ಮಾಡಿಕೊಂಡಿರುವಿ. ಬೇರೆಯವರು ನಮಗೆ ಮೋಸ ಮಾಡಿದರೆ ಅಚ್ಚರಿ ಪಡಬೇಕಿಲ್ಲ. ಆದರೆ ನಮಗೆ ನಾವೇ ಮೋಸ ಮಾಡಿಕೊಳ್ಳುವುದು ಮೂರ್ಖರ ಲಕ್ಷಣ.
ಅಂದು ನನ್ನೊಲುಮೆಯ ಅರಮನೆಗೆ ಎಷ್ಟೊಂದು ಹಂಬಲಿಸಿದಿ? ನನ್ನ ಅರಮನೆಯ ಒಳಗೆ ಸ್ಥಾನ ಸಿಕ್ಕಾಗ ಪ್ರೀತಿ ಎಂಬುದು ದಿವ್ಯ ಲೀಲೆ ಎಂದು ಹೇಳಿದ್ದು ನೆನಪಿದೆಯಾ? ಸರ್ವ ಸಂಪತ್ತು ನನ್ನಲ್ಲಿ ಇದೆ ಎಂದುಕೊಂಡಿ. ನೀನ್ನೆಲ್ಲ ಭಾವಗಳ ಉಗಮ ನಾನೆಂದುಕೊಂಡಿ. ಆದರೆ ಏನೆಲ್ಲ ಅಂದುಕೊಂಡು ನೀನೇನು ಮಾಡಿದಿ? ಒಂದು ಸಲ ಯೋಚಿಸು. ಹೆಣ್ಣಿನ ಹದವಾದ ಭಾವನೆಯಲ್ಲಿ ಬೆರೆತಾಗ ಏನೆಲ್ಲ ಅನಿಸುತ್ತದೆಯಲ್ಲ ! ಹೆಣ್ಣು ತನ್ನನ್ನು ತಾನೆ ಸುಟ್ಟುಕೊಂಡು ಗಂಡಿಗೆ ಬೆಳಕು ಕೊಡುತ್ತದೆ. ಹೆಣ್ಣಿನ ಸ್ಪರ್ಶದಲ್ಲಿ, ಹೆಣ್ಣಿನ ನೋಟದಲ್ಲಿ, ಹೆಣ್ಣಿನ ಮಾತಿನಲ್ಲಿ, ಹೆಣ್ಣಿನ ಮೌನದಲ್ಲಿ, ಹೆಣ್ಣಿನ ಪ್ರತಿಯೊಂದು ಅಂಗಾಂಗದಲ್ಲಿ ಗಂಡು ಬೇಕೆಂದ ಬೆಳಕನ್ನೆಲ್ಲ ಕಾಣಬಹುದು. ನಿನಗೆ ಬೆಳಕು ಕೊಡುವ ದೇವತೆ ನಾನಾಗಬೇಕೆಂದೆ. ನನ್ನಾಸೆಗೆ ಮಣ್ಣು ಹಾಕಿದಿ. ಆದರೆ ನನಗೆ ಇನ್ನು ಒಂದು ಆಸೆ ಇದೆ. ನನ್ನಾಸೆಯನ್ನು ಈಡೇರಿಸಿಕೊಳ್ಳದೆ ಬಿಡುವವಳಲ್ಲ. ನಾನು ನಿನ್ನಂಥ ಶತ ದಡ್ಡ ಹುಡುಗನನ್ನು ಪ್ರೀತಿಸಿದೆನಲ್ಲೆಂದು ನನಗೆ ಚಿಂತೆಯಿಲ್ಲ, ಯಾಕಂತ ಕೇಳುವೆಯಾ? ನೀನು ದಡ್ಡನಲ್ಲ ಕಣೋ, ದಡ್ಡನಂತೆ ನಾಟಕವಾಡುವ ಜಾಣ ದಡ್ಡ ನೀನು.

ನನಗೆ ಬಹಳ ಆತ್ಮ ವಿಶ್ವಾಸವಿದೆ. ಪ್ರೀತಿ ಎಂಬುದು ಮುದುಡಿ ಬೀಳುವ ಹೂವಲ್ಲ. ಪವಿತ್ರ ಮನಸ್ಸಿನಿಂದ ಹುಟ್ಟಿದ ಭಾವನೆ ಅದು ಪವಿತ್ರವಾಗಿಯೇ ಇರುತ್ತದೆ. ನಮ್ಮಿಬ್ಬರ ನಡುವೆ ಯಾವುದೋ ಕಾರಣಕ್ಕೆ ಮನಸ್ತಾಪ ಬಂದಿರಬಹುದು. ಇಂದಿಲ್ಲ ನಾಳೆಯಾದರೂ ಅದು ಕರಗಿ ಹೋಗುತ್ತದೆ. ಆಗ ನಿನಗೆ ಗೊತ್ತಾಗುತ್ತದೆ. ಪ್ರೀತಿ ಮುದುಡುವ ಹೂವಲ್ಲ! ಅದು ಅರಳುವ ಹೂವು ಎಂದು. ಆಗಲಾದರೂ ನೀನು ಹತ್ತೀರ ಬರುತ್ತಿಯಲ್ಲ ಕಾಡಿಸುವುದಿಲ್ಲ. ಯಾಕಂತ ಕೇಳ್ತಿಯಾ? ಈಗ ನನಗಿಂತಲೂ ಹೆಚ್ಚಿನ ಪಶ್ಚಾತಾಪ ನೀನೆ ಪಟ್ಟಿರುತ್ತಿ. ನೀನು ತಿಳಿದುಕೊಂಡಷ್ಟು ಸುಲಭವಾಗಿ ಹೆಣ್ಣನ್ನು ತಿರಸ್ಕರಿಸುವುದು ಸಾಧ್ಯವಿಲ್ಲ. ಮತ್ತೆ ಹೊಸ ಹೊಸ ಭಾವನೆಗಳೊಂದಿಗೆ ಕನಸುಗಳೊಂದಿಗೆ ಕಾಯುತ್ತಿರುವೆ. ಯಾಕೆಂದರೆ ನಿನ್ನ ಒಂಟಿ ಜೀವನದ ತುಂಟಾಟಗಳನ್ನೆಲ್ಲ ನಾನೆ ಹಂಚಿಕೊಳ್ಳಬೇಕಲ್ಲವೇ?
ನಿನ್ನ ವಾತ್ಸಲ್ಯ.

LEAVE A REPLY

Please enter your comment!
Please enter your name here